ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎನ್ನುವ ಆತಂಕದ ನಡುವೆ ನಾಡಿನ ಕನ್ನಡಿಗರೆಲ್ಲ ಬೆರಗಾಗುವಂತೆ ಬರೋಬ್ಬರಿ 23041 ಮಂದಿ ಅರ್ಜಿ ಸಲ್ಲಿಸಿದ್ದು, ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ 20146 ಮಂದಿ ಹಾಜರಾಗಿದ್ದಾರೆ. ಈ ಪೈಕಿ ಸುಮಾರು 200 ಮಂದಿ ವಿವಿಧ ತರಗತಿಗಳಿಗೆ ಆಯ್ಕೆಯಾಗುತ್ತಾರೆ. ಅರ್ಹತಾ ಪರೀಕ್ಷೆಗಳನ್ನೆಲ್ಲ ದಾಟಿ ಬರುವ ಮಕ್ಕಳಿಗೆ ಇಲ್ಲಿ ಸಂಪೂರ್ಣ ಉಚಿತ ಸನಿವಾಸ ಶುಲ್ಕ ರಹಿತ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದು ವಿಶೇಷ.
ಗಣೇಶ್ ಕಾಮತ್ ಕನ್ನಡ ಪ್ರಭ ವಾರ್ತೆ ಮೂಡುಬಿದಿರೆ
ರಾಜ್ಯದಲ್ಲಿ ರಾಜಾಶ್ರಯವಿಲ್ಲದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳೂ ಬಾಗಿಲೆಳೆದುಕೊಳ್ಳಲು ಸರತಿ ಸಾಲಿನಲ್ಲಿವೆ. ಆದರೆ ಈ ನಡುವೆ ಮನಸ್ಸಿದ್ದರೆ ಮಾರ್ಗವಿದೆ. ಎನ್ನುವುದನ್ನು ನಾಡಿಗೇ ತೊರಿಸಿಕೊಡುವ ಕೆಲಸ ಜ್ಞಾನಕಾಶಿ ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಿಂದಾಗಿದೆ.ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎನ್ನುವ ಆತಂಕದ ನಡುವೆ ನಾಡಿನ ಕನ್ನಡಿಗರೆಲ್ಲ ಬೆರಗಾಗುವಂತೆ ಬರೋಬ್ಬರಿ 23041 ಮಂದಿ ಅರ್ಜಿ ಸಲ್ಲಿಸಿದ್ದು, ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ 20146 ಮಂದಿ ಹಾಜರಾಗಿದ್ದಾರೆ. ಈ ಪೈಕಿ ಸುಮಾರು 200 ಮಂದಿ ವಿವಿಧ ತರಗತಿಗಳಿಗೆ ಆಯ್ಕೆಯಾಗುತ್ತಾರೆ. ಅರ್ಹತಾ ಪರೀಕ್ಷೆಗಳನ್ನೆಲ್ಲ ದಾಟಿ ಬರುವ ಮಕ್ಕಳಿಗೆ ಇಲ್ಲಿ ಸಂಪೂರ್ಣ ಉಚಿತ ಸನಿವಾಸ ಶುಲ್ಕ ರಹಿತ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದು ವಿಶೇಷ. ಕಳೆದ 18 ವರ್ಷಗಳಿಂದ ನಾಡಿಗೇ ಮಾದರಿಯಾಗಿ ಕನ್ನಡ ಮಾಧ್ಯಮ ಶಾಲೆ ಕಟ್ಟಿ ಮಾದರಿಯಾದವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ.
ಈಗಾಗಲೇ ಈ ಶಾಲೆಗಳ ಮೂಲಕ ಆರರಿಂದ 10ನೇ ತರಗತಿವರೆಗೆ ಕ್ರೀಡೆ, ಸಂಸ್ಕೃತಿ, ವಿಶೇಷ ಕಲಿಕಾ ಸಾಮರ್ಥ್ಯ, ಹೆತ್ತವರನ್ನು ಕಳಕೊಂಡವರು, ಸೇನೆಯಲ್ಲಿರುವವರ ಮಕ್ಕಳು, ಹಿಂದುಳಿದ ವರ್ಗದ ಮಕ್ಕಳನ್ನು ಅಳೆದು ತೂಗಿ ಆರಿಸಿ ಸಂಪೂರ್ಣ ಉಚಿತ ಶಿಕ್ಷಣ ಯೋಜನೆಯಡಿ ಕಲಿತ 1862ಕ್ಕೂ ಮಕ್ಕಳು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ, ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಇನ್ನಿತರ ಪದವಿಗಳೊಂದಿಗೆ ಸಾಧಕ ವಿದ್ಯಾರ್ಥಿಗಳಾಗಿ ಮೂಡಿ ಬಂದಿದ್ದಾರೆ. ಪ್ರತಿಯೊಬ್ಬರ ಮೇಲೂ ವಾರ್ಷಿಕ ಒಂದೂವರೆ ಲಕ್ಷದ ವೆಚ್ಚವನ್ನೇ ಗಣನೆಗೆ ತೆಗೆದುಕೊಂಡರೂ ಈವರೆಗೆ 140 ಕೋಟಿ ರು.ಗಳಿಗೂ ಅಧಿಕ ವೆಚ್ಚವನ್ನು ಕನ್ನಡದ ಈ ಮಕ್ಕಳಿಗಾಗಿ ಆಳ್ವರು ಭರಿಸಿದ್ದಾರೆ. ಆರಂಭದಿಂದ ಈವರೆಗೂ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ವರ್ಷವೂ ಸಾವಿರಾರು ಮಕ್ಕಳು ಪ್ರವೇಶ ಪರೀಕ್ಷೆಗೆ ಧಾವಿಸುತ್ತಲೇ ಇದ್ಧಾರೆ. ವರ್ಷವೂ ಈ ಕನ್ನಡ ಶಾಲೆಯ ಎಸ್ಸೆಸ್ಸೆಲ್ಸಿ ಬ್ಯಾಚ್ ಶೇ. 100ರ ಸಾಧನೆ ಕಾಯ್ದುಕೊಂಡಿದೆ. ರಾಜ್ಯದ 15 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಈಗ ನಂ1 ಸ್ಥಾನದಲ್ಲಿದೆ.
ಹರಿದು ಬಂದ ವಿದ್ಯಾರ್ಥಿಸಾಗರ..!
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2026-27ನೇ ಸಾಲಿನ 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ 20,146 ವಿದ್ಯಾರ್ಥಿಗಳು ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ಹಾಜರಾದರು. ರಾಜ್ಯಾದ್ಯಂತ ಹಾಗೂ ಕರ್ನಾಟಕದ ಗಡಿ ಪ್ರದೇಶ ಕೇರಳದ ಕಾಸರಗೋಡು, ಮಹಾರಾಷ್ಟ್ರದ ಗಡಿ ಪ್ರದೇಶವೂ ಸೇರಿದಂತೆ 32 ಶೈಕ್ಷಣಿಕ ಜಿಲ್ಲೆಗಳ 23,141 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 20,146 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 16,014, 7ನೇ ತರಗತಿಗೆ 1,374, 8ನೇ ತರಗತಿಗೆ 1,983 ಹಾಗೂ 9ನೇ ತರಗತಿಗೆ 775 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 7,353 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯಿಂದ 4,080 ಹಾಗೂ ವಿಜಯಪುರದಿಂದ ಕ್ರಮವಾಗಿ 2,961 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಪರೀಕ್ಷಾ ಅರ್ಜಿ ಸಲ್ಲಿಕಾ ವ್ಯವಸ್ಥೆಯು ಕಳೆದ 3 ವರ್ಷದಿಂದ ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ವ್ಯವಸ್ಥೆಗೊಳಿಸಿಲಾಗಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಿದ್ದರಿಂದ 5 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್‌ನ ವಿವಿಧೆಡೆ ಆಳ್ವಾಸ್ ಪದವಿ ಕಾಲೇಜು ಮತ್ತು ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪ್ರವೇಶ ಪರೀಕ್ಷೆ ನಡೆಸಲಾಗಿದೆ. 6 ಮತ್ತು 9ನೇ ತರಗತಿಯವರೆಗೆ ಎಲ್ಲ ಪಠ್ಯ ವಿಷಯಗಳು ಸೇರಿದಂತೆ ತಾರ್ಕಿಕ ಸಾಮರ್ಥ್ಯ ಆಧರಿತವಾಗಿ 150 ಅಂಕಗಳಿಗೆ 2.30 ಗಂಟೆಗಳ ಕಾಲ ಪರೀಕ್ಷೆ ನಡೆದಿದೆ.ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದವರು. ಮುಖ್ಯ ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮುಖ್ಯ ಹಂತದಲ್ಲಿ ಬರವಣಿಗೆ ಆಧರಿತ ಪರೀಕ್ಷೆ ಇದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತು ಕೌಶಲ್ಯಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು, ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರೇ ಸಂದರ್ಶನ ನಡೆಸುತ್ತಾರೆ.ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿನಿಲಯ, ಪಠ್ಯಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ 750ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.ಕಾಲಕ್ಕೆ ಸರಿಯಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟಿ ಬೆಳೆಸಿದಾಗ ಅವುಗಳು ಸೋಲಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ನೀಡಬೇಕು ಎನ್ನುವ ಆಸೆ ನಮ್ಮದು. ವಾರ್ಷಿಕ ಒಬ್ಬ ವಿದ್ಯಾರ್ಥಿಗೆ ಒಂದೂವರೆ ಲಕ್ಷ ರು/ ವ್ಯಯಿಸಿ 10 ಕೋಟಿಗೂ ಅಧಿಕ ಖರ್ಚು ಭರಿಸಲಾಗುತ್ತಿದೆ. ಇಂದಿನವರೆಗೂ ಶೇ. 100 ಫಲಿತಾಂಶದೊಂದಿಗೆ ಶಾಲೆ ನಾಡಿಗೆ ನಂ.1 ಆಗಿರುವುದು ಸಂತಸ ತಂದಿದೆ.
-ಡಾ.ಎಂ.ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ.
ಜ್ಞಾನಕಾಶಿಯ ತುಂಬೆಲ್ಲ ಕನ್ನಡ ವಿದ್ಯಾರ್ಥಿಗಳ ಕಲರವ.. -ನಾಡಿನೆಲ್ಲೆಡೆಯಿಂದ 23401 ಅರ್ಜಿ, ಧಾವಿಸಿ ಬಂದ 20146 ಮಂದಿ ಸಾವಿರ ಮಕ್ಕಳು.
-ಈ ಪೈಕಿ ಸುಮಾರು 200 ಮಂದಿ ಪ್ರವೇಶ ಪಡೆಯುತ್ತಾರೆ. ಯೋಗ, ಮಲ್ಲಗಂಭ ಇತ್ಯಾದಿ ವಿಭಾಗಗಳಲ್ಲಿ ಮತ್ತೆ ಪ್ರತ್ಯೇಕ ಆಯ್ಕೆ ನಡೆಸಲಾಗುತ್ತದೆ.
-ನಾಡಿನ 32 ಜಿಲ್ಲೆಗಳ ಸಹಿತ ಮಹಾರಾಷ್ಟ್ರ, ಕೇರಳ ಗಡಿ ಭಾಗದಿಂದಲೂ ವಿದ್ಯಾರ್ಥಿಗಳು
-ಆಳ್ವಾಸ್ ಆವರಣದಲ್ಲಿ ಪೋಷಕರು, ಮಕ್ಕಳು ಸೇರಿ 50 ಸಾವಿರಷ್ಟು ಮಂದಿ
- ಐದು ಕೇಂದ್ರಗಳಲ್ಲಿ ಪರೀಕ್ಷಾ ವ್ಯವಸ್ಥೆ, 1200 ಮೇಲ್ವಿಚಾರಕರು, ಸ್ವಯಂ ಸೇವಕರ ನಿರ್ವಹಣೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.