ವಿಧಾನ ಪರಿಷತ್ : ಹದಿಹರೆಯದಲ್ಲಿ ಹಾದಿ ತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತರಲು ಶಾಲಾ ಮಕ್ಕಳಿಗೆ ‘ನೈತಿಕ ಶಿಕ್ಷಣ’ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ದುಶ್ಚಟಗಳಿಗೆ ದಾಸರಾಗುವುದು, ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ, ಗರ್ಭಧಾರಣೆ, ಖಿನ್ನತೆ, ಒತ್ತಡ, ಸೈಬರ್ ವ್ಯಸನ, ಹಿರಿಯರ ಮಾತು ಕೇಳದಿರುವುದು ಸೇರಿದಂತೆ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತ ವಿಶೇಷ ಚರ್ಚೆಯಲ್ಲಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ ನೈತಿಕ ಶಿಕ್ಷಣದ ಅಗತ್ಯತೆ ಪ್ರಸ್ತಾಪಿಸಿದರು.
ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ವಿಚಾರ ಚರ್ಚೆಯಲ್ಲಿ ಇದೆ. ವಾರದಲ್ಲಿ ಒಂದು ನೈತಿಕ ಶಿಕ್ಷಣ ತರಗತಿ ತೆಗೆದುಕೊಳ್ಳಲು ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ನೈತಿಕ ಶಿಕ್ಷಣ ನೀಡಲು ಪ್ರತ್ಯೇಕವಾಗಿ ಶಿಕ್ಷಕರು ಬೇಕಾಗುವುದಿಲ್ಲ. ಲಭ್ಯವಿರುವ ಶಿಕ್ಷಕರ ಮೂಲಕವೇ ನೀಡಬಹುದು. ಜರೂರಾಗಿ ಕ್ರಮ ಕೈಗೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.
ಈ ಹಿಂದೆ ಇಂಟರ್ನೆಟ್‌ನಿಂದ ಮಾಹಿತಿ ಪಡೆಯಲು ನಾವು ಸೈಬರ್ ಕೆಫೆಗೆ ಹೋಗಬೇಕಿತ್ತು. ಆದರೆ, ಇಂದು ಮನೆಯೊಳಗೆ, ಬೆರಳ ತುದಿಗೆ ಕೆಫೆ ಬಂದಿದೆ. ಮಕ್ಕಳು ಹಾದಿ ತಪ್ಪುವುದು ಮೊಬೈಲ್, ಇಂಟರ್ನೆಟ್‌ನಿಂದಲೇ ಆರಂಭವಾಗುತ್ತದೆ. ಈ ಮೊದಲು ಮಕ್ಕಳು ಆಟವಾಡಲು ಹೊರಗೆ ಹೋಗುತ್ತಿದ್ದರು. ಇಂದು ಮೊಬೈಲ್‌ಗೆ ದಾಸರಾಗಿದ್ದಾರೆ. ವಿವಿಧ ಜಾಲತಾಣಗಳು, ಜಾಹೀರಾತುಗಳು ಮಕ್ಕಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸುತ್ತಿವೆ. ಪೂಜಿಸುವ ತಂದೆ-ತಾಯಿಯನ್ನು ‘ಅಪ್ಪ ಲೂಸಾ, ಅಮ್ಮ ಲೂಸಾ’ ಎನ್ನುವ ಕಳಪೆ ಅಭಿರುಚಿಯ ಹಾಡುಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಚಪ್ಪಾಳೆ ತಟ್ಟುವ ಮಟ್ಟಕ್ಕೆ ಇಳಿದಿರುವುದು ದುರಾದೃಷ್ಟಕರ ಎಂದು ಭಾರತಿ ಶೆಟ್ಟಿ ನುಡಿದರು.
ನೈತಿಕ ಶಿಕ್ಷಣ ಪರಿಚಯಿಸಬೇಕು ಎನ್ನುವ ಕೋರಿಕೆಗೆ ಸದಸ್ಯರಾದ ಐವಾನ್ ಡಿಸೋಜಾ, ಡಾ. ತಿಮ್ಮಯ್ಯ ಸೇರಿದಂತೆ ಇನ್ನಿತರ ಸದಸ್ಯರು ಬೆಂಬಲಿಸಿದರು.