ಮುಚ್ಚಿರುವ ರಸ್ತೆ ತೆರವು, ಪರ್‍ಯಾಯ ರಸ್ತೆ ಕಲ್ಪಿಸಲು ರೈತರ ನಿಯೋಗ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

KannadaprabhaNewsNetwork | Published : Mar 11, 2025 12:47 AM

ಸಾರಾಂಶ

ಪಾಲಿಟೆಕ್ನಿಕ್ ಆವರಣದ ಬದಿಯಲ್ಲಿ ಪರ್ಯಾಯ ರಸ್ತೆ ನಿರ್ಮಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಪ್ರತಿರೋಧವಿಲ್ಲ. ರೈತರಿಗಾಗಿ ರಸ್ತೆ ಬಿಡಲು ಸ್ಕೆಚ್ ಮಾಡಿ ಸಂಪೂರ್ಣ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ನಿರ್ದೇಶಕರೇ ಸೂಚಿಸಿದ್ದರೂ ಕಾಲೇಜಿನ ಪ್ರಾಂಶುಪಾಲರು ಇದಕ್ಕೆ ಅಡ್ಡಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ರಸ್ತೆ ತೆರವು ಅಥವಾ ಪಾಲಿಟೆಕ್ನಿಕ್ ಹಿಂಭಾಗದ ಕೃಷಿ ಭೂಮಿಗೆ ತೆರಳಲು ಪರ್ಯಾಯ ರಸ್ತೆ ತುರ್ತಾಗಿ ಕಲ್ಪಿಸಿಕೊಡುವಂತೆ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ನೇತೃತ್ವದ ರೈತರ ನಿಯೋಗ ತಾಲೂಕು ಆಡಳಿತವನ್ನು ಆಗ್ರಹಿಸಿದೆ.

ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ನಿಯೋಗ ತಹಸೀಲ್ದಾರ್ ಕಚೇರಿಗೆ ತೆರಳಿ ಡಾ.ಎಸ್.ಯು.ಅಶೋಕ್ ಗೆ ಮನವಿ ಸಲ್ಲಿಸಿ ಈ ಹಿಂದೆ ಮೂಲ ನಕಾಶೆಯಂತೆ ರೈತರು ತಿರುಗಾಡುತ್ತಿದ್ದ ರಸ್ತೆಯನ್ನು ಮುಚ್ಚಿರುವ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜು ಆಡಳಿತ ರೈತರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿದೆ ಎಂದು ದೂರಿದರು.

ಕಾಲೇಜಿನ ಹಿಂಭಾಗ ಪಟ್ಟಣದ ದಲಿತ ಪರಿಶಿಷ್ಟ ಜಾತಿ ಮತ್ತು ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ರೈತರ ನೂರಾರು ಎಕರೆ ಕೃಷಿ ಭೂಮಿಯಿದೆ. ಹೇಮಾವತಿ ವಿತರಣಾ ನಾಲೆ ಹಾದುಹೋಗಿದೆ. ರೈತರು ಕಬ್ಬು, ಭತ್ತ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದರು.

ಕಾಲೇಜು ರಸ್ತೆಯನ್ನು ಮುಚ್ಚಿರುವುದರಿಂದ ರೈತರು ತಾವು ಬೆಳೆದ ಭತ್ತ, ಕಬ್ಬು ಮುಂತಾದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಿಲ್ಲದೆ ಕೃಷಿ ಚಟುವಟಿಕೆ ಬಿಡುವ ಪರಿಸ್ಥಿತಿಯಿದೆ. ಪಟ್ಟಣದಲ್ಲಿ ವಿದ್ಯುತ್ ಚಿತಾಗಾರ ಅಥವಾ ಸರ್ಕಾರಿ ಸ್ಮಶಾನ ಇಲ್ಲ. ರೈತ ಕುಟುಂಬದ ಸದಸ್ಯರು ಮರಣ ಹೊಂದಿದರೆ ತಮ್ಮ ತಮ್ಮ ಜಮೀನುಗಳಲ್ಲಿ ಶವ ಸಂಸ್ಕಾರ ಮಾಡಲು 3 ರಿಂದ 4 ಕೀ.ಮೀ ಸುತ್ತಿ ಬರಬೇಕಾದ ಪರಿಸ್ಥಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಟೆಕ್ನಿಕ್ ಆವರಣದ ಬದಿಯಲ್ಲಿ ಪರ್ಯಾಯ ರಸ್ತೆ ನಿರ್ಮಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಪ್ರತಿರೋಧವಿಲ್ಲ. ರೈತರಿಗಾಗಿ ರಸ್ತೆ ಬಿಡಲು ಸ್ಕೆಚ್ ಮಾಡಿ ಸಂಪೂರ್ಣ ಮಾಹಿತಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ನಿರ್ದೇಶಕರೇ ಸೂಚಿಸಿದ್ದರೂ ಕಾಲೇಜಿನ ಪ್ರಾಂಶುಪಾಲರು ಇದಕ್ಕೆ ಅಡ್ಡಿಯಾಗಿದ್ದಾರೆ. ತಹಸೀಲ್ದಾರರು ತಕ್ಷಣವೇ ತುರ್ತು ಕ್ರಮವಹಿಸುವಂತೆ ಆಗ್ರಹಿಸಿದರು.

ಶೀಘ್ರದಲ್ಲಿಯೇ ರೈತರಿಗೆ ಅಗತ್ಯ ರಸ್ತೆ ಸ್ಕೆಚ್ ಮಾಡಿ ತಾಂತ್ರಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ರಸ್ತೆಗೆ ಕ್ರವಹಿಸುವುದಾಗಿ ತಿಳಿಸಿದರು. ಈ ವೇಳೆ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಯ್ಯ, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ಮಾಜಿ ಸದಸ್ಯ ಕೆ.ಆರ್.ನೀಲಕಂಠ, ವಕೀಲ ಚಟ್ಟಂಗೆರೆ ಬಿ.ನಾಗೇಶ್ ಸೇರಿದಂತೆ ಹಲವರಿದ್ದರು.

Share this article