- ದಿ।। ಬಣಕಾರ್ ಭೋಗೇಶಪ್ಪ ಕೈಲಾಸ ಶಿವಾಗಣಾರಾಧನೆಯಲ್ಲಿ ಡಾ. ಪಂಡಿತಾರಾಧ್ಯ ಶ್ರೀ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಲೋಕಮಾನ್ಯ ವ್ಯಕ್ತಿಗಳಾಗಲು ನೈತಿಕತೆ, ಪ್ರಾಮಾಣಿಕತೆ ಮತ್ತು ಸಾತ್ವಿಕತೆ ಮುಖ್ಯವಾಗಿವೆ ಎಂದು ಸಾಣೆಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪದ ಅಮರಾವತಿ ಕಾಲೋನಿಯಲ್ಲಿ ಗುರುವಾರ ಹಮ್ಮಿಕೊಂಡ ದಿವಂಗತ ಬಣಕಾರ್ ಭೋಗೇಶಪ್ಪನವರ ಕೈಲಾಸ ಶಿವಾಗಣಾರಾಧನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು. ಸಾರ್ವಜನಿಕ ಜೀವನದಲ್ಲಿ ನೈತಿಕತೆ ಉಳಿಸಿಕೊಂಡವರು ಲೋಕಮಾನ್ಯ ವ್ಯಕ್ತಿಗಳಾಗುವರು. ಇನ್ನೊಬ್ಬರಿಗೆ ನೆರವು ನೀಡುವ ಮನಸ್ಥಿತಿ ಇರಬೇಕೇ ಹೊರತು, ಮತ್ತೊಬ್ಬರ ಹಣ ಅಪಹರಿಸುವ ಮನಸ್ಥಿತಿ ಇರಬಾರದು. ಪ್ರಸ್ತುತ ಹಣವನ್ನು ಲೂಟಿ ಮಾಡುವವರೇ ಹೆಚ್ಚಾಗಿದ್ದಾರೆ ಎಂದು ಸ್ವಾಮೀಜಿ ವಿಷಾದಿಸಿದರು.
ದಿವಂಗತ ಭೋಗೇಶಪ್ಪನವರ ಜೀವನ ನಮ್ಮ ಬದುಕಿನ ಆದರ್ಶವಾದರೆ ಮಾತ್ರ ಬದುಕಿಗೆ ಅರ್ಥ ಬರುತ್ತದೆ. ಹಿರಿಯ ಗುರುಗಳು ಮತ್ತು ನಾವು ಎಷ್ಟೋ ಸಮಾರಂಭಗಳಲ್ಲಿ ಮಾಹಿತಿ ನೀಡಿದರೂ ಮತ್ತೆ ಜನರನ್ನು ಜಾಗೃತಗೊಳಿಸಲು ಮೇ ೧ರಿಂದ ೧೬ ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಕುರಿತ ಸರ್ವೋದಯ ಅಭಿಯಾನ ನಡೆಯುತ್ತಿದೆ. ಆ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಕೋಡಿಯಾಲ ಹೊಸಪೇಟೆ ಜಗದೀಶ್ವರ ಸ್ವಾಮೀಜಿ ಸಂದೇಶದಲ್ಲಿ ಬದುಕು ಮೌಲ್ಯಯುತವಾಗಿರಲು, ಕುಟುಂಬ ತೃಪ್ತಿಯಾಗಿರಲು ಪ್ರೀತಿ, ಶ್ರಮ ಅಗತ್ಯವಿದೆ. ಕಾಯಕ ದಾಸೋಹ ಸಾಧನೆಗೆ ಆದ್ಯತೆ ನೀಡಿದವರು ಎಲ್ಲರ ಮನದಲ್ಲಿ ಉಳಿಯುತ್ತಾರೆ ಎಂದರು.ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ , ಕೋಡಿಯಾಲ ಹೊಸಪೇಟೆ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ಅಮರವಾತಿ ಪರಮೇಶ್ವರಪ್ಪ, ಮಹದೇವಪ್ಪ, ಬಿ ರಾಮಚಂದ್ರಪ್ಪ, ಹನುಮಗೌಡ, ಮ್ಯಾಗಳಗೇರಿ ಹನುಮಂತಪ್ಪ, ಕರಿಯಪ್ಪ, ಬಸವರಾಜಪ್ಪ, ಎನ್.ಎಸ್. ರಾಜು ಮತ್ತಿತರರು ಇದ್ದರು.
- - -(ಕೋಟ್) ಧರ್ಮ ದೊಡ್ಡದಲ್ಲ, ದಯೆಯೇ ದೊಡ್ಡದು. ವಿದ್ಯೆ ದೊಡ್ಡದಲ್ಲ, ಅನುಭವ ದೊಡ್ಡದು. ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು. ಜಾತಿ ದೊಡ್ಡದಲ್ಲ, ಪ್ರೀತಿ ದೊಡ್ಡದು. ಹಣ ದೊಡ್ಡದಲ್ಲ, ಗುಣ ದೊಡ್ಡದು. ಮನೆ ದೊಡ್ಡದಲ್ಲ, ಮನಸ್ಸು ದೊಡ್ಡದು. ಆಯುಷ್ಯ ದೊಡ್ಡದಲ್ಲ, ಆರೋಗ್ಯ ದೊಡ್ಡದು. ಸಂಸಾರ ದೊಡ್ಡದಲ್ಲ, ಸಂಸ್ಕಾರ ದೊಡ್ಡದು. ಭಗವಂತ ದೊಡ್ಡನಲ್ಲ, ಸ್ಮರಣೆ ಮಾಡುವ ಮನಸ್ಸುಗಳೇ ದೊಡ್ಡದು.
- ಚನ್ನಬಸವ ಸ್ವಾಮೀಜಿ, ನೀಲಗುಂದ.- - -
-ಚಿತ್ರ೧: ಕಾರ್ಯಕ್ರಮದಲ್ಲಿ ಡಾ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.