ಹೊಸದುರ್ಗ: ನೈತಿಕತೆ ಎಂಬುದು ರಾಜಕಾರಣಕ್ಕೆ ಸೀಮಿತವಾದುದ್ದಲ್ಲ. ಅದು ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಎಲ್ಲಿ ನೈತಿಕತೆ ನಾಶವಾಗುತ್ತೋ ಅಲ್ಲಿ ಬದುಕು ಕರಾಳವಾಗುತ್ತದೆ. ರಾಜಕಾರಣಿಗಳು ಕೇವಲ ಮತ ಮತ್ತು ಹಣವನ್ನು ಪ್ರಧಾನ ಮಾಡಿಕೊಂಡರೆ ನಿಮ್ಮ ವ್ಯಕ್ತಿತ್ವ ಪ್ರಪಾತಕ್ಕೆ ಬೀಳುತ್ತದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರು ಕೆಟ್ಟವರು ಇದ್ದಾರೆ. ಒಳ್ಳೆಯವರ ಬೆನ್ನು ತಟ್ಟಬೇಕು ಕೆಟ್ಟವರ ಮನಪರಿವರ್ತನೆಗೆ ಅರಿವು ಮೂಡಿಸಬೇಕು. ನೈತಿಕತೆ ಎನ್ನುವುದು ಕೇವಲ ರಾಜಕಾರಣಿಗಳಲ್ಲ ಮತದಾರರಿಗೂ , ಧಾರ್ಮಿಕ ನೇತಾರರಿಗೂ, ವ್ಯಾಪರಸ್ಥರಿಗೂ ಎಲ್ಲಾ ಕ್ಷೇತ್ರದ ಜನರಿಗೂ ಇದ್ದಾಗ ಮಾತ್ರ ಸುಭೀಕ್ಷ ನಾಡಾಗುತ್ತದೆ ಎಂದು ತಿಳಿಸಿದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಮರ್ಥ ಗುರುವಿದ್ದಾಗ ಸಮರ್ಥ ಶಿಷ್ಯರು ಬರುತ್ತಾರೆ. ಹಿಂದೆ ಶಿಕ್ಷಣ ನೀಡಲು ಮಠಗಳು ಬೇಕಿತ್ತು ಆದರೆ ಆ ಕೆಲಸವನ್ನು ಇಂದು ಸರ್ಕಾರಗಳು ಮಾಡುತ್ತಿವೆ. ಇಂದು ಮಠಗಳು ಮಾಡಬೇಕಾಗಿರುವುದು ಶಾಲಾ ಕಾಲೇಜುಗಳಲ್ಲ. ಮತ್ತೆ ಕಲ್ಯಾಣವನ್ನ. ಆದರೆ ಇಂದು ಅನೇಕ ಮಠಗಳು ಪೈಪೋಟಿಯಲ್ಲಿ ಕಾಲೇಜುಗಳನ್ನು ತೆರೆಯಲು ಮುಂದಾಗಿವೆ. ಮತ್ತೆ ಕಲ್ಯಾಣವನ್ನು ಮಾಡುವ ಮಠಗಳು ಬೆರಳಣಿಕೆಯಲ್ಲಿವೆ ಎಂದು ಹೇಳಿದರು.ನೈತಿಕ ರಾಜಕಾರಣ ಕುರಿತು ಕೆ.ಆರ್.ಎಸ್ ಪಕ್ಷದ ರವಿಕೃಷ್ಣಾರೆಟ್ಟಿ ಮಾತನಾಡಿ, ನಿಮ್ಮ ಮತವು ನಿಮ್ಮ ಮಕ್ಕಳ ಭವಿಷ್ಯವನ್ನು ತೀರ್ಮಾನಿಸುತ್ತದೆ. ಇದಕ್ಕಾಗಿ ಕುಲಾತೀತವಾಗಿರುವ, ಜಾತ್ಯತೀತವಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಈ ಮೂಲಕ ನೈತಿಕ ರಾಜಕಾರಣಕ್ಕೆ ನಾಂದಿ ಹಾಡಿ ಎಂದರು.ಲೋಕಾಸೇವಾ ಆಯೋಗದ ಸದಸ್ಯ ಬೋಜಾನಾಯಕ್ ಮಾತನಾಡಿ, ಗುರುಕುಲದಲ್ಲಿ, ಮಠ ಮಾನ್ಯಗಳಲ್ಲಿ ಬೆಳೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಿದ್ದಾರೆ. ಆದರೆ ಕಾನ್ವೆಂಟ್‌ನಲ್ಲಿ ಓದಿದ ಮಕ್ಕಳು ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಕಾನ್ವೆಂಟ್‌ಗಳಲ್ಲಿ ನೀಡಲಾಗುವ ಶಿಕ್ಷಣ ಪಾಶ್ಚಿಮಾತ್ಯದ ಶಿಕ್ಷಣ. ನಮ್ಮ ಮಕ್ಕಳಿಗೆ ಬೇಕಿರುವುದು ನೈತಿಕ, ಧಾರ್ಮಿಕ ಶಿಕ್ಷಣ. ಈ ನಿಟ್ಟಿನಲ್ಲಿ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದರು. ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಆರ್.ಸ್ವಾಮಿ, ವೀರಸಂಗಯ್ಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ದ್ಯಾಮೇಶ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಇದ್ದರು.
ಪ್ರಾರಂಭದಲ್ಲಿ ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳಿಂದ ಯೋಗ ನೃತ್ಯವನ್ನು, ಸಾಣೇಹಳ್ಳಿಯ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ನೃತ್ಯ ರೂಪಕ ನಡೆಸಲಾಯಿತು. ಕೊನೆಯಲ್ಲಿ ಡಾ.ರಾಜಶೇಖರ ಹನುಮಲಿ ರಚನೆಯ ವೈ.ಡಿ.ಬದಾಮಿ ನಿರ್ದೇಶನದ ಮಹಾಬೆಳಗು ನಾಟಕವನ್ನು ಶಿವಸಂಚಾರದ ಹಿರಿಯ ಕಲಾವಿದರು ಅಭಿನಯಿಸಿದರು.ನಾನೊಬ್ಬ ನೈತಿಕ ವ್ಯಕ್ತಿಯಾಗಿದ್ದೆ. ಭ್ರಷ್ಟಾಚಾರ ಮುಕ್ತ ಜಗಳೂರು ಕ್ಷೇತ್ರವನ್ನಾಗಿ ಮಾಡಬೇಕು ಎಂದು ನನ್ನನ್ನು ಸಿರಿಗೆರೆ ಗುರುಗಳು ರಾಜಕಾರಣಕ್ಕೆ ತಂದರು. ಆದರೆ ಇಂದು ಭ್ರಷ್ಟಾಚಾರದ ರಾಜಕಾರಣಿಯಾಗಿದ್ದೇನೆ ಕಾರಣ ನಮ್ಮ ಮತದಾರರೇ. ಇಂದು ಈ ವೇದಿಕೆಯಲ್ಲಿ ವಚನ ಕೊಡುತ್ತೇನೆ. ನಾನು ಇನ್ನು ಮುಂದೆ ನೈತಿಕ ರಾಜಕಾರಣ ಮಾಡುತ್ತೇನೆ ಅದು ಸಾಧ್ಯವಾಗದಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ- ದೇವೇಂದ್ರಪ್ಪ, ಜಗಳೂರು ಶಾಸಕ