ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಊಟದ ಮನೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮುಂದಿನ ಜುಲೈನಲ್ಲಿ 30 ಲಕ್ಷ ಅನುದಾನ ಕೊಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ದೇವಿಯವರ ನೂತನ ವಿಮಾನ ಗೋಪುರ ಹಾಗೂ ಗೋಪುರ ಕಳಶ ರೋಹಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮದ ರೇಣುಕಾ ಎಲ್ಲಮ್ಮ ದೇವಿ ಚಿಕ್ಕಮ್ಮ ದೇವಿ ಈಶ್ವರ ದೇವಾಲಯ ಸೇರದಂತೆ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಈಗಾಗಲೇ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡಿದೆ ಜೊತೆಗೆ ಹೆಚ್ಚುರಿಯಾಗಿ ಅಡುಗೆ ಮನೆ ಊಟದ ಹಾಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ 30 ಲಕ್ಷ ಅನುದಾನವನ್ನು ಜುಲೈನಲ್ಲಿ ಕೊಡುವುದಾಗಿ ಭರವಸೆ ನೀಡಿದರು. ಟಿಸಿ ರಸ್ತೆಯಿಂದ ಕಿರು ಆರೋಗ್ಯ ಕಟ್ಟಡದವರೆಗಿನ ರಸ್ತೆ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಆದ್ಯತೆ ನೀಡಲಾಗುತ್ತದೆ ಈಗಾಗಲೇ 65 ಲಕ್ಷ ಆರೋಗ್ಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ ಇದರ ಜೊತೆಗೆ ಗ್ರಾಮದ ವಿವಿಧ ಬಡಾವಣೆಗಳ ರಸ್ತೆ ಒಳಚರಂಡಿ ವ್ಯವಸ್ಥೆಗೆ ಅನುದಾನ ಒದಗಿಸಲಾಗಿದೆ ಎಂದರು.ಗ್ರಾಮದ ಕೆರೆಯನ್ನು ರಾಯಸಮುದ್ರ ಕಾವಲು ಕೆರೆಯಿಂದ ಪೈಪ್‌ಲೈನ್ ಮೂಲಕ ಮೋಟಾರ್ ಅಳವಡಿಸಿ ಸುಮಾರು 14 ಲಕ್ಷ ರು. ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿ ಕಳೆದ ವರ್ಷ ಹಂಗಾಮಿನಲ್ಲಿ ಪ್ರಯೋಗಿಕವಾಗಿ ನೀರು ಹರಿಸಲಾಗಿದೆ ಬಾಕಿ ಉಳಿದಿರುವ ಪೈಪ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಈ ಬಾರಿಯ ಹಂಗಾಮಿನಲ್ಲಿ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಶ್ರಮ ವಹಿಸುವುದಾಗಿ ಹೇಳಿದರು. ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ಸರ್ಕಾರ ನೀಡುವ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ, ನಾನು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವುದಿಲ್ಲ ಬದಲಾಗಿ ಬಜೆಟ್‌ನಲ್ಲಿ ಘೋಷಿಸಿರುವಂತೆ ಹಿಂದುಳಿದ ವರ್ಗಗಳ ಇಲಾಖೆಗೆ ಅನುದಾನ ನೀಡುವಂತೆ ಒತ್ತಾಯಿಸಿದರು.ನುಗ್ಗೇಹಳ್ಳಿ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ವಿಮಾನ ಗೋಪುರ ಶಿಖರ ಕಳಸಾರೋಹಣ ಮತ್ತು ಪೂಜಾ ಕಾರ್ಯಕ್ರಮಗಳು ನೆರವೇರಿತು.ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಎಚ್ ಎಂ ನಟರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ಗೋಕುಲ ವಿದ್ಯಾ ಸಂಸ್ಥೆ ಕಾರ್ಯದರ್ಶಿ ನಾರಾಯಣ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷಗಳಾದ ಎಚ್ ಬಿ ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ಗುಡಿ ಗೌಡರುಗಳಾದ ಈರಯ್ಯ( ಅಣ್ಣಯ್ಯಪ್ಪ ) ಅಮಾಸಯ್ಯ, ರೇಣುಕಾ ಎಲ್ಲಮ್ಮ ದೇವಿ ದೇವಾಲಯದ ಅರ್ಚಕ ರಾಮಕೃಷ್ಣ, ಚಿಕ್ಕಮ್ಮ ದೇವಿ ದೇವಾಲಯದ ಅರ್ಚಕ ಗೋಪಾಲ್, ಟಿ ಎಪಿಎಂಎಸ್ ಮಾಜಿ ನಿರ್ದೇಶಕ ಎಸ್ ಚಿರಂಜೀವಿ, ಮುಖಂಡರಾದ ಎನ್ ಎಸ್ ಮಂಜುನಾಥ್, ಧರ್ಮರಾಜ್, ರಾಮಕೃಷ್ಣ, ಗಿರೀಶ್, ಬಸವರಾಜ್, ಅಮರಗಿರಿ ರಂಗನಾಥ ಸ್ವಾಮಿ ದೇವಾಲಯದ ಅರ್ಚಕ ರಂಗನಾಥ್, ಸೇರಿದಂತೆ ಶ್ರೀ ರೇಣುಕಾ ಎಲ್ಲಮ್ಮ ದೇವಿ ಹಾಗೂ ಚಿಕ್ಕಮ್ಮ ದೇವಿ ದೇವಾಲಯದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.