ಭಾರೀ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

KannadaprabhaNewsNetwork | Published : May 12, 2024 1:15 AM

ಸಾರಾಂಶ

ಜುವಾರಿ ಗಾರ್ಡನ್ ಪಕ್ಕದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಚರಂಡಿಯಿಂದ ಗುಂಡಿ ನೀರು ಹೋರ ಹೋಗದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಜುವಾರಿ ಗಾರ್ಡನ್‌ನ ಕಾಂಪೌಂಡ್ ಸಹ ಕುಸಿದು ಬಿದ್ದು ಹಲವು ಮನೆಗಳು ಜಖಂಗೊಂಡಿವೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಜುವಾರಿ ಗಾರ್ಡನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಹುಲಿಕೆರೆ ಗ್ರಾಮದ ಬಳಿಯ ಜುವಾರಿ ಗಾರ್ಡನ್‌ನ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಗ್ರಾಮದ ಜುವಾರಿ ಗಾರ್ಡನ್ ಪಕ್ಕದ ಕಾಲೋನಿ ನಿವಾಸಿಗಳ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಈ ರಾತ್ರಿ ಇಡೀ ಮಳೆ ನೀರಿಂದ ನಿವಾಸಿಗಳ ಪರದಾಟ ಪಡುವಂತಾಗಿದೆ. ಮನೆ ಒಳಗೆ ಮಳೆ ನೀರು ನುಗ್ಗಿದ್ದರಿಂದ ಪಾತ್ರೆಗಳು, ದಿನಸಿ ಪದಾರ್ಥಗಳು, ಎಲೆಕ್ಟ್ರಿಕ್ ಸಾಮಾನುಗಳು ಸೇರಿದಂತೆ ಇತರೆ ಸಾಮಗ್ರಿಗಳು ನೀರು ತುಂಬಿಕೊಂಡು ಹಾಳಾಗಿವೆ.

ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ನಿವಾಸಿಗಳ ಪರದಾಟ ಹೇಳ ತೀರದಾಗಿದೆ. ಇಡೀ ರಾತ್ರಿ ನಿದ್ರೆ ಮಾಡದೆ ನಿವಾಸಿಗಳ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಹಿಡಿ ಶಾಪ ಹಾಕಿದ್ದಾರೆ.

ಅವೈಜ್ಞಾನಿಕ ಚರಂಡಿ; ಗ್ರಾಮಸ್ಥರ ಆರೋಪ:

ಜುವಾರಿ ಗಾರ್ಡನ್ ಪಕ್ಕದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಚರಂಡಿಯಿಂದ ಗುಂಡಿ ನೀರು ಹೋರ ಹೋಗದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜುವಾರಿ ಗಾರ್ಡನ್‌ನ ಕಾಂಪೌಂಡ್ ಸಹ ಕುಸಿದು ಬಿದ್ದು ಹಲವು ಮನೆಗಳು ಜಖಂಗೊಂಡಿವೆ. ನಿವಾಸಿಗಳ ಮನೆಗಳು ಹಾನಿಯಾಗಿದ್ದರೂ ತಲೆಕೆಡಿಸಿಕೊಳ್ಳದ ಜುವಾರಿ ಗಾರ್ಡನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:

ಸ್ಥಳೀಯ ನಿವಾಸಿಗಳ ಒತ್ತಾಯದಿಂದ ಘಟನಾ ಸ್ಥಳಕ್ಕೆ ಹುಲಿಕೆರೆ ಗ್ರಾಪಂ ಪಿಡಿಒ, ಕಂದಾಯ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ ತಹಸೀಲ್ದಾರ್ ಅವರಿಗೂ ದೂರವಾಣಿ ಕರೆ ಮಾಡಿ ಇಲ್ಲಿನ ಅವ್ಯವಸ್ಥೆ ಕುರಿತಾಗಿ ಮಾಹಿತಿ ನೀಡಿದರು.

ಈ ವೇಳೆ ಸ್ಥಳೀಯ ನಿವಾಸಿಗಳು ಹಾಗೂ ಮಹಿಳೆಯರು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟರು. ಮಳೆ ನೀರಿನಿಂದ ಹಾಳಾದ ದವಸ ದಾನ್ಯ, ಮನೆಗಳು ಜಖಂಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು. ಮಳೆಯಿಂದ ಆದ ನಷ್ಟಕ್ಕೆ ಪರಿಹಾರ ನೀಡಬೇಕು. ತಕ್ಷಣ ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸುವಂತೆ ಪಂಚಾಯ್ತಿ ಸದಸ್ಯ ರಾಮು ಒತ್ತಾಯಿಸಿದರು.

Share this article