ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಫೆ. 2ರ ವರೆಗೆ ಅಂದರೆ ಬರೀ 33 ದಿನಗಳಲ್ಲಿ ಬರೋಬ್ಬರಿ 1552 ನಾಯಿ ಕಡಿತ ಪ್ರಕರಣಗಳಾಗಿವೆ. ಹಾಗೆಯೇ, ಕಳೆದ 2025ರಲ್ಲಿ ಜಿಲ್ಲೆಯಲ್ಲಿ ಒಟ್ಟು 13,433 ನಾಯಿ ಕಡಿತಗಳಾಗಿವೆ..!
ಇತ್ತೀಚೆಗೆ ಧಾರವಾಡಲ್ಲಿ ಹುಚ್ಚು ನಾಯಿ ಕಡಿತದಿಂದ ಒಂಭತ್ತು ಮಂದಿ ಗಾಯಗೊಂಡರು. ಎರಡ್ಮೂರು ದಿನಗಳ ಹಿಂದಷ್ಟೇ ಮೂರು ವರ್ಷದ ಮಗುವಿನ ಕಿವಿ, ತಲೆಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಈ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ (ಎಬಿಸಿ ಮತ್ತು ಎಆರ್‌ವಿ)ದ ಸಭೆ ಮಾಡಿದಾಗ ಈ ಅಂಕಿ ಅಂಶಗಳು ಹೊರ ಬಂದಿವೆ.
ಕ್ರಮ ಕೈಗೊಳ್ಳಲು ಸೂಚನೆಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ನಿಯಂತ್ರಿಸಬೇಕು. ಎಚ್ಚರಿಕೆ ಕ್ರಮವಾಗಿ ನಾಯಿ ಕಡಿತ ಪ್ರಕರಣಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಪ್ರತಿ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಹತ್ತು ಎ.ಆರ್.ವಿ. ಲಸಿಕೆ ಮತ್ತು ಐದು ಆರ್.ಐ.ಜಿ. ಲಸಿಕೆ ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 100 ಎ.ಆರ್.ವಿ. ಹಾಗೂ ಆರ್.ಐ.ಜಿ 15 ಲಸಿಕೆ, ಜಿಲ್ಲಾ ಆಸ್ಪತ್ರೆಯಲ್ಲಿ 1,005 ಎ.ಆರ್.ವಿ ಹಾಗೂ 3000 ಆರ್.ಐ.ಜಿ ಲಸಿಕೆಗಳನ್ನು ಇಡಲಾಗಿದೆ ಎಂದು ಸಭೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಪ್ರಸ್ತಾಪಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಎಸ್.ವಿ. ಸಂತಿ, ಜಿಲ್ಲೆಯ ಸುಮಾರು 40 ಸಾವಿರ ಬೀದಿ ನಾಯಿಗಳನ್ನು ನಿಯಂತ್ರಿಸುವ ಅಗತ್ಯತೆ ತಿಳಿಸಿ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕುವುದು ಏಕೈಕ ಪ್ರಮಾಣಿಕೃತ ಮಾರ್ಗ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಶಿವಳ್ಳಿಯಲ್ಲಿ ಹೊಸ ಎಬಿಸಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಎರಡು ಕೋಟಿ ಅನುದಾನದಲ್ಲಿ ಸುಮಾರು 12,000 ಬೀದಿನಾಯಿಗಳನ್ನು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ.ಹೊನಕೇರಿ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ, ಪಶು ಪಾಲನಾ ಇಲಾಖೆ, ತಾಪಂ ಅಧಿಕಾರಿಗಳಿದ್ದರು. ತಿಂಗಳಲ್ಲಿ ಕ್ರಮ ಆಗಲಿಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಹಾಗೂ ಸಾಕು ನಾಯಿಗಳ ಸಮೀಕ್ಷೆ ಮಾಡಿ, ಪಶು ಪಾಲನಾ ಇಲಾಖೆಗೆ ವರದಿ ಸಲ್ಲಿಸಬೇಕು. ನಾಯಿ ಕಡಿತ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಬೇಕು ಎಂದು ಅಪರಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದ್ದಾರೆ.2025ರಲ್ಲಿ ನಾಯಿ ಕಡಿತದ ಪ್ರಕರಣಗಳು
ಧಾರವಾಡ 1399
ಹುಬ್ಬಳ್ಳಿ 719ಹು-ಧಾ ಶಹರ 7256
ಕುಂದಗೋಳ 1194
ನವಲಗುಂದ 1555-----------------------