ಸೊಳ್ಳೆಗಳ ನಿಯಂತ್ರಣದಿಂದ ಸಾಂಕ್ರಾಮಿಕ ರೋಗಕ್ಕೆ ತಡೆ: ಎಸ್.ಡಿ. ಬೆನ್ನೂರ

KannadaprabhaNewsNetwork |  
Published : Jun 14, 2026, 02:30 AM IST
ಕಾರ್ಯಕ್ರಮದಲ್ಲಿ ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಸೊಳ್ಳೆಗಳ ಸಂತತಿ ಕಡಿಮೆ ಮಾಡಲು ಪರಿಸರದಲ್ಲಿ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

ಗಜೇಂದ್ರಗಡ: ಮಳೆಗಾಲ ಆರಂಭವಾಗಿದ್ದು, ಜನರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾದಲ್ಲಿ ಮಲೇರಿಯಾ, ಚಿಕೂನ್ ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗ ಸೇರಿ ಅನೇಕ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ತಿಳಿಸಿದರು.

ಸಮೀಪದ ದಿಂಡೂರು ಗ್ರಾಮದ ಪೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ರೋಣ ಹಾಗೂ ಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೊಳ್ಳೆಗಳ ಉತ್ಪತಿಗೆ ಕಡಿವಾಣಕ್ಕೆ ಮೊದಲ ಹೆಜ್ಜೆ ಎಂದರೆ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಮನೆಯಲ್ಲಿ ಮತ್ತು ಮನೆಯ ಸುತ್ತ ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ಸಂತತಿ ಕಡಿಮೆ ಮಾಡಲು ಪರಿಸರದಲ್ಲಿ ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸೋಂಕಿತ ಅನಾಫೆಲಿಸ್ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಮಲೇರಿಯಾ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ ಬಂದಾಗ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ಖಚಿತಪಟ್ಟಲ್ಲಿ ಉಚಿತ ಚಿಕಿತ್ಸೆ ಪಡೆಯಬೇಕು. ಒಟ್ಟಾರೆ ಸೊಳ್ಳೆ ಕಡಿತ ಚಿಕ್ಕದಾದರೂ ಅದರ ಭೀತಿ ದೊಡ್ಡದು ಎಂದರು. ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ಹಿರೇಮಠ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳ ಲಕ್ಷಣಗಳ ಬಗ್ಗೆ ತಿಳಿಸಿ ಸ್ವಯಂರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ ಬಳಕೆ, ಬೇವಿನ ಸೊಪ್ಪಿನ ಹೊಗೆ ಹಾಕುವುದು, ಸೊಳ್ಳೆ ಬತ್ತಿ ಸೇರಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ.ಎಸ್. ಹೂಗಾರ, ಸಹ ಶಿಕ್ಷಕರಾದ ಎ.ಎ. ಪಟೇಲ್, ಎಸ್. ಭಜಂತ್ರಿ, ಎಚ್.ಎಂ. ಮುದೇನೂರ, ಸಮುದಾಯ ಆರೋಗ್ಯ ಅಧಿಕಾರಿ ರೇಶ್ಮಾ ಪವಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಿವಲೀಲಾ ಲಾಲಗುಂದಿ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ವರಗಾ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ
ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿ ದೂರವಿಡಲು ಸಾಧ್ಯ