ಶಿವಮೊಗ್ಗ : ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇನೆ. ಪಶ್ಚಿಮ ಘಟ್ಟಗಳಲ್ಲಿ ಈ ಬಾರಿ ಉತ್ತಮವಾಗಿ ಮಳೆ ಬಂದ ಪರಿಣಾಮ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದೆ. ಕರ್ನಾಟಕ ಸಮೃದ್ಧಿಯಾಗಿರುವುದು ತುಂಬಾ ಖುಷಿ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯದ ಗೇಟ್ ಮುರಿದಿದ್ದು, ಅದರ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಬಹುಪಾಲು ಜಲಾಶಯಗಳು ಸುಮಾರು 50ವರ್ಷಗಳ ಹಿಂದಿನ ಜಲಾಶಯಗಳು ಆದ್ದರಿಂದ ಕೆಲವೆಡೆ ಗೇಟ್ ಈ ರೀತಿ ಮುರಿದು ಹೋಗುವ ಹಂತದಲ್ಲಿರುತ್ತವೆ. ಎಲ್ಲಾ ಜಲಾಶಯಗಳ ಮುನ್ನೆಚ್ಚರಿಕೆ ಕ್ರಮವಾಗಿ ಆಗಬೇಕಾದ ಕೆಲಸಗಳನ್ನು ಸರ್ಕಾರ ಮಾಡಲಿದೆ. ರಾಜ್ಯದ ಬಹುಪಾಲು ಜಲಾಶಯಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದರು.
ಅಂಗನವಾಡಿಗಳ ಮೇಲ್ದರ್ಜೆಗೆ: ಮೌಖಿಕ ಒಪ್ಪಿಗೆ
ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಮೌಖಿಕ ಒಪ್ಪಿಗೆ ಸಿಕ್ಕಿದೆ. ರಾಜ್ಯದಲ್ಲಿ 17800 ಅಂಗನವಾಡಿಗಳಿವೆ. ಎಲ್ಲಾ ಅಂಗನವಾಡಿಗಳಲ್ಲಿ ಎಲ್.ಕೆ.ಜಿ ಯು.ಕೆ.ಜಿ ಮಟ್ಟದಲ್ಲಿರುವ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ಸೇರಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಮಕ್ಕಳ ಕಲಿಕೆಗಾಗಿ ಪದವಿ ಪಡೆದ ಶಿಕ್ಷಕರನ್ನು ನಿಯೋಜಿಸಲಾಗುವುದು. ನಮ್ಮ ಈ ಯೋಜನೆಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅನ್ನಪೂರ್ಣ ರವರು ಮೆಚ್ಚುಗೆ ವ್ಯಕ್ತ ಪಡಿಸಿ ಸಕ್ಷಮ್ ಅಂಗನವಾಡಿ ಹೆಸರಿನಲ್ಲಿ ₹120 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ:
ಗೃಹಲಕ್ಷ್ಮಿ ಯೋಜನೆ ಹಣ ಈಗಾಗಲೇ ಒಂದು ತಿಂಗಳ ಹಣ ಬ್ಯಾಂಕ್ ಮೂಲಕ ವರ್ಗಾವಣೆಯಾಗಿದೆ. ಸುಮಾರು ಮೂರು ಸಾವಿರ ಕೋಟಿಯಷ್ಟು ಗೃಹ ಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಬೇಕಾದರೆ ಹದಿನೈದು ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ತಿಂಗಳು ಹದಿನೈದನೇ ತಾರೀಖಿನಂದು ಹಣ ವರ್ಗಾವಣೆ ಕೆಲಸ ಆರಂಭವಾಗುತ್ತದೆ. ಅದು ತಿಂಗಳ ಕೊನೆ ವಾರದಲ್ಲಿ ಖಾತೆಗೆ ಜಮಾ ಆಗುತ್ತದೆ. ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಸರ್ಕಾರದ ಬಳಿ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಭಾನುವಾರ ಸಚಿವರು, ಶಾಸಕರು ಗಂಗಾ ಪೂಜೆಯೊಂದಿಗೆ ಬಾಗಿನ ಅರ್ಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಶಾಸಕರಾದ ಬಿ.ಕೆ ಸಂಗಮೇಶ್ವರ್, ಸಿ.ಎಚ್ ಶ್ರೀನಿವಾಸ್ ಹಾಗೂ ಬಲ್ಕೀಶ್ ಬಾನು ಸೇರಿ ಇನ್ನಿತರರು ಬೆಳಗ್ಗೆ ಭದ್ರಾ ಜಲಾಶಯದಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳುವ ಮೂಲಕ ಬಾಗಿನ ಅರ್ಪಿಸಿದರು. ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ನಗರಸಭೆ, ಗ್ರಾಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.