)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೃಷ್ಣಪ್ಪ ನಗರದ ನಿವಾಸಿ ಸೀತಾಲಕ್ಷ್ಮೀ ಅಲಿಯಾಸ್ ಮೋನಿಷಾ (28) ಹಾಗೂ ಸೃಷ್ಟಿ (5) ಮೃತ ದುರ್ದೈವಿ. ಗುರುವಾರ ಸಂಜೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ತಾಯಿ-ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಗ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಮನೆಯ ಬೀಗ ಮುರಿದು ಒಳ ನುಗ್ಗಿ ಬೆಂಕಿಯಲ್ಲಿ ಬೇಯುತ್ತಿದ್ದವರಿಗೆ ಆಸರೆಯಾಗಿದ್ದಾರೆ. ಆದರೆ ಅಷ್ಟರಲ್ಲಿ ಸೀತಾಲಕ್ಷ್ಮೀ ಸುಟ್ಟು ಹೋಗಿದ್ದು, ಭಾಗಶಃ ಗಾಯಗೊಂಡಿದ್ದ ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಆಕೆ ಸಹ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ಮೃತ ಸೀತಾಲಕ್ಷ್ಮೀ ಮೂಲತಃ ನೇಪಾಳ ದೇಶದವಳಾಗಿದ್ದು, ಏಳು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ತನ್ನ ಪತಿ ಗೋವಿಂದ ಬಹುದ್ದೂರ್ ಹಾಗೂ ಇಬ್ಬರ ಮಕ್ಕಳ ಜತೆ ಬಂದಿದ್ದಳು. ಸಂಜಯನಗರ ಸಮೀಪದ ಕೃಷ್ಣಪ್ಪ ಲೇಔಟ್‌ನಲ್ಲಿ ನೇಪಾಳಿ ಕುಟುಂಬ ನೆಲೆಸಿತ್ತು. ಅಲ್ಲೇ ಸುತ್ತಮುತ್ತ ಮನೆಗಳಲ್ಲಿ ಕೆಲಸ ಮಾಡಿಕೊಂಡು ಆಕೆ ಜೀವನ ಸಾಗಿಸುತ್ತಿದ್ದಳು. ಕೆಲ ತಿಂಗಳ ಹಿಂದೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗಳನ್ನು ತೊರೆದು ಮಗನ ಜತೆ ನೇಪಾಳಕ್ಕೆ ಗೋವಿಂದ ಬಹುದ್ದೂರ್ ಮರಳಿದ್ದ. ಬಳಿಕ ಸ್ವದೇಶಕ್ಕೆ ಮರಳುವಂತೆ ಪತ್ನಿಗೆ ಆತ ತಾಕೀತು ಮಾಡಿದ್ದ. ಈ ಮಾತಿಗೆ ಆಕ್ಷೇಪಿಸಿದ್ದ ಸೀತಾಲಕ್ಷ್ಮೀ, ಪತಿಗೆ ಬೆಂಗಳೂರಿಗೆ ಮರಳುವಂತೆ ಬಲವಂತ ಮಾಡುತ್ತಿದ್ದಳು.ಇದೇ ವಿಚಾರವಾಗಿ ಪ್ರತಿ ದಿನ ಪತಿಗೆ ಕರೆ ಮಾಡಿ ಸೀತಾಲಕ್ಷ್ಮೀ ಗಲಾಟೆ ಮಾಡುತ್ತಿದ್ದಳು. ಆದರೆ ಗೋವಿಂದ ಮಾತ್ರ ಒಪ್ಪಿಗೆ ಸೂಚಿಸಲಿಲ್ಲ. ಈ ಕಲಹದಿಂದ ಬೇಸರಗೊಂಡು ಮಗಳ ಜತೆ ಆತ್ಮಹತ್ಯೆಗೆ ಸೀತಾ ನಿರ್ಧರಿಸಿದ್ದಳು ಎನ್ನಲಾಗಿದೆ.
ಮಗಳ ತಬ್ಬಿಕೊಂಡು ಬೆಂದ ತಾಯಿಸಂಕ್ರಾಂತಿ ಹಬ್ಬದ ಸಂಭ್ರಮದಲ್ಲೇ ಸೀತಾಲಕ್ಷ್ಮೀ ಮನೆ ಬಾಗಿಲು ಚೀಲ ಹಾಕಿ ಸಂಜೆ 5.30ರ ಸುಮಾರಿಗೆ ಮೊದಲು ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬಳಿಕ ಆಗ ಭಯದಿಂದ ಮನೆಯಿಂದ ಹೊರ ಹೋಗಲು ಆಕೆಯ ಮಗಳು ಯತ್ನಿಸಿದ್ದಾಳೆ. ಆಗ ಮಗಳನ್ನು ಅಪ್ಪಿಕೊಂಡು ಬೆಂಕಿಯಲ್ಲಿ ಸೀತಾಲಕ್ಷ್ಮೀ ಬೆಂದಿದ್ದಳು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದ ಸೃಷ್ಟಿ, ಕಿಟಕಿಯಿಂದ ಜೋರಾಗಿ ಆಂಟಿ ಆಂಟಿ ಕಾಪಾಡಿ ಎಂದು ಕೂಗಿದ್ದಾಳೆ. ಈ ಚೀರಾಟ ಕೇಳಿ ಆತಂಕಗೊಂಡ ಮನೆ ಮಾಲಿಕರು, ಕೂಡಲೇ ಬಾಲಕಿ ರಕ್ಷಣೆಗೆ ದೌಡಾಯಿಸಿದ್ದಾರೆ. ಆದರೆ ಜನ್ಮ ಕೊಟ್ಟವಳೇ ಸೃಷ್ಟಿ ಬದುಕನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.