ಗದಗ: ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಲ್ಲರು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಪ್ರೇರೇಪಿಸಿ ಪಾಲಕರ ಮನವೊಲಿಸಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ 2 ಪರೀಕ್ಷೆಗೆ ಹಾಜರಾಗುವಂತೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
2024ರ ಎಸ್ಸೆಸ್ಸೆಲ್ಸಿ-01 ರಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳು ಎಲ್ಲ ಪ್ರೌಢಶಾಲೆಗಳಲ್ಲಿ ಪ್ರಾರಂಭಗೊಂಡಿದ್ದು, ಮಕ್ಕಳು ವರ್ಗಗಳಿಗೆ ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹಾಗೂ ಈ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಬಾಗೇವಾಡಿ ಮಾತನಾಡಿ, ವಿಷಯ ಶಿಕ್ಷಕರಿಂದ ವಿಷಯವಾರು ಭೋಧನೆ ನಡೆಯುತ್ತಿದ್ದು, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳನ್ನು ಕೂಡಿಸಿಕೊಂಡು ಮನೆ-ಮನೆಗೆ ಭೇಟಿ ನೀಡಿ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿರುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಶಿಕ್ಷಕರಾದ ವೈ.ಎಸ್. ಬೊಮ್ಮನಾಳ, ಪಿ.ಎಸ್. ಕರೆಕುಲದ, ಎಂ.ಎಸ್. ಕುಚಬಾಳ, ಪಿ.ಎಚ್. ಕೊರವರ, ಎಂ.ವಿ. ಕುಲಕರ್ಣಿ, ಎಂ.ಬಿ. ಹರ್ತಿ, ಎಂ.ಕೆ. ಬೇವಿನಕಟ್ಟಿ, ಬಸವರಾಜ ವೀರಾಪೂರ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.