ಪರೀಕ್ಷಾ ಭಯ ಹೋಗಲಾಡಿಸಲು ಪ್ರೇರಣಾ ತರಬೇತಿ: ಬಿಇಒ ಹೆಗಡೆ

KannadaprabhaNewsNetwork | Updated : Mar 09 2024, 03:37 PM IST

ಸಾರಾಂಶ

ವಿದ್ಯಾರ್ಥಿಗಳಲ್ಲಿ ಹುದುಗಿರುವ ಪರೀಕ್ಷಾ ಭಯ ಹೋಗಲಾಡಿಸುವ ಹಾಗೂ ಪರೀಕ್ಷೆ ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಶೈಕ್ಷಣಿಕ ತರಬೇತಿ ನೀಡುವ ಉದ್ದೇಶದಿಂದ ತಾಲೂಕು ಮಟ್ಟದ ಪ್ರೇರಣಾ ತರಗತಿಯನ್ನು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಈವರೆಗೆ ನಡೆಸಿಕೊಂಡು ಬರಲಾಗಿದೆ.

ಯಲ್ಲಾಪುರ: ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ಕಾರ್ಯಕ್ರಮ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಿಇಒ ಎನ್.ಆರ್. ಹೆಗಡೆ, ವಿದ್ಯಾರ್ಥಿಗಳಲ್ಲಿ ಹುದುಗಿರುವ ಪರೀಕ್ಷಾ ಭಯ ಹೋಗಲಾಡಿಸುವ ಹಾಗೂ ಪರೀಕ್ಷೆ ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಶೈಕ್ಷಣಿಕ ತರಬೇತಿ ನೀಡುವ ಉದ್ದೇಶದಿಂದ ತಾಲೂಕು ಮಟ್ಟದ ಪ್ರೇರಣಾ ತರಗತಿಯನ್ನು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಈವರೆಗೆ ನಡೆಸಿಕೊಂಡು ಬರಲಾಗಿದೆ. 

ಈ ತರಬೇತಿ ಪ್ರತಿ ಭಾನುವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸಂಪನ್ಮೂಲಗಳ ವ್ಯಕ್ತಿಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು, ತಮ್ಮ ಶಾಲೆ, ತಾಲೂಕು ಮತ್ತು ಜಿಲ್ಲಾ ಮತ್ತು ರಾಜ್ಯಮಟ್ಟಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಪೂರಕವಾದ ಎಲ್ಲ ಸೂಕ್ಷ್ಮಗಳನ್ನು ಅರ್ಥೈಸಿಕೊಂಡಿದ್ದಾರೆ. 

ಯಾವುದೇ ಕೃಷಿ ಉತ್ತಮವಾಗಿ ಫಲ ನೀಡಲು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಪೂರೈಸಿದರೆ ಮಾತ್ರ ನಿರೀಕ್ಷಿತ ಪ್ರತಿಫಲ ನೀಡಲು ಸಾಧ್ಯ ಎಂದರು.ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ಅಜಯ ಭಾರತೀಯ ಮಾತನಾಡಿ, ಅತ್ಯುತ್ತಮ ಸಾಧನೆ ಮಾಡಿದವರ ಮಾದರಿ ನಿಮ್ಮೆದುರಿಗಿರಿಸಿಕೊಂಡು ಉತ್ತಮ ಅಂಕ ಪಡೆದು ಕೀರ್ತಿವಂತರಾಗಿ ಎಂದು ಆಶಿಸಿದರು. 

ಎರಡು ದಿನಗಳ ಪ್ರೇರಣಾ ತರಗತಿಯ ಉದ್ಘಾಟನಾ ಕಾರ್ಯಕ್ರಮದ ಪ್ರಸ್ತಾವನೆ ಮತ್ತು ಸ್ವಾಗತವನ್ನು ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ನಡೆಸಿಕೊಟ್ಟರು. ಶಿಕ್ಷಕಿ ಪ್ರೇಮಾ ಗಾಂವ್ಕರ್ ನಿರ್ವಹಿಸಿದರು.

ಇದೇ ವೇಳೆ ರಾಜ್ಯಮಟ್ಟದ ಸ್ಪರ್ಧೆ ವಿಜೇತ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ತೇಜಸ್ ಹೆಗಡೆ ಮತ್ತು ಅಂಕಿತಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸನ್ಮಾನಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶ್ರೀಧರ ಹೆಗಡೆ ಸಮಾಜಶಾಸ್ತ್ರ ವಿಷಯದ ಕುರಿತು ಪರೀಕ್ಷಾ ಸಿದ್ಧತೆಯನ್ನು ವಿದ್ಯಾರ್ಥಿಗಳಿಗೆ ಮೊದಲ ಅವಧಿಯಲ್ಲಿ ನಡೆಸಿಕೊಟ್ಟರು. ಶಿಬಿರದಲ್ಲಿ ಎಲ್ಲ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ, ಉತ್ತರ ಬರೆಯುವ ವಿಧಾನ, ಸಂಭವನೀಯ ಪ್ರಶ್ನೆಗಳ ಮೆಲುಕು ಹಾಕುವ ತರಗತಿ ನಡೆಸಲಾಯಿತು.

Share this article