ರಾಮನಗರ: ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕೆಲವೊಂದು ಸರ್ಕಾರಿ ಕಚೇರಿಗಳು ಹಾಗೂ ವಸತಿ ನಿಲಯಗಳು ಸರ್ಕಾರದ ಕಟ್ಟಡಗಳಿಗೆ ಸ್ಥಳಾಂತರವಾಗಲು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು (ವಿಪತ್ತು ನಿರ್ವಹಣೆ) ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಶ್ಮಿ ಅಧಿಕಾರಿಗಳಿಗೆ ಸೂಚಿಸಿದರು.
ಚನ್ನಪಟ್ಟಣ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆ 5 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕೂಡಲೇ ಇದನ್ನು ಲೋಕೋಪಯೋಗಿ ಇಲಾಖೆಯಿಂದ ಸಂಬಂಧಿಸಿದ ಇಲಾಖೆ ವಶಕ್ಕೆ ಪಡೆದು ಅಲ್ಲಿಯೇ ಕಾರ್ಯರಂಭ ಮಾಡಲು ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಕನಕಪುರ ತಾಲೂಕಿನ ಗರಳಾಪುರ ಮತ್ತು ಇತರೆ 12 ಕೆರೆಗಳಿಗೆ ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎರಡು ಹಂತಗಳಲ್ಲಿ ಏತ ನೀರಾವರಿ ಮೂಲಕ ಎತ್ತಿ ತುಂಬಿಸಲು ಉದ್ದೇಶಿಸಲಾಗಿದೆ. ಕಾವೇರಿ ನದಿ ಸತ್ತೆಗಾಲ ಸಮೀಪದ ಅಣೆಕಟ್ಟೆಯಿಂದ ಗುರುತ್ವಾಕರ್ಷಣೆ ಮೂಲಕ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜಿಗೆ ನೀರನ್ನು ಹರಿಸಿ, ಹಾಲಿ ಇರುವ ಕೆರೆ ತುಂಬಿಸುವ ಯೋಜನೆಗಳಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಅಲ್ಲಿಂದ ನೀರನ್ನು ಎತ್ತಿ ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಗಳಿಗೆ ಕುಡಿವ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹಾಗೂ ದೊಡ್ಡಾಲಹಳ್ಳಿ ಹೋಬಳಿಯ ಸುಮಾರು 8 ಗ್ರಾಮಗಳ ಜಮೀನುಗಳಿಗೆ ಸೂಕ್ಷ್ಮ ಹನಿ ನೀರಾವರಿ ಮುಖಾಂತರ ನೀರನ್ನು ಒದಗಿಸಲು ಯೋಜಿಸಲಾಗಿರುತ್ತದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಲು 10 ಎಕರೆ ನಿವೇಶನ ಮಂಜೂರು ಮಾಡಲಾಗಿದ್ದು, ಇದಕ್ಕಾಗಿ 14.6 ಕೋಟಿ ರು. ಬಿಡುಗಡೆ ಮಾಡಲಾಗಿದೆ. ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಹಾಗೂ ಅಗತ್ಯವಿರುವ ಐಚ್ಚಿಕ ವಿಷಯಗಳನ್ನು ಪದವಿ ಕಾಲೇಜುಗಳ ಪ್ರಾಂಶುಪಾಲರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತರಗತಿಗಳನ್ನು ಪ್ರಾರಂಭಿಸಲು ಕ್ರಮವಹಿಸುವಂತೆ ಸೂಚಿಸಿದರು.
2023ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿರುವ ಒಟ್ಟು 2,65,115 ಪಡಿತರ ಚೀಟಿದಾರರ 8,78,838 ಫಲಾನುಭವಿಗಳಿಗೆ 14,49,81,100 ರು.ಗಳನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. 2023ರ ಜುಲೈ ಅಂತ್ಯಕ್ಕೆ ಸಮರ್ಪಕವಾದ ಬ್ಯಾಂಕ್ ಮಾಹಿತಿ ಇಲ್ಲದ 39,991 ಫಲಾನುಭವಿಗಳ ಪೈಕಿ 27,470 ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳನ್ನು ಸರಿಪಡಿಸಲಾಗಿದೆ. ಬಾಕಿ ಉಳಿದ ಫಲಾನುಭವಿಗಳ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮವಹಿಸಿ, ಅವರ ಖಾತೆಗಳಿಗೆ ಹಣ ಪಾವತಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ 10 ಗಂಟೆಗೆ ಕಚೇರಿಗೆ ಹಾಜರಾಗಬೇಕು. ನಿಗದಿತ ಸಮಯದೊಳಗೆ ಹಾಜರಾದ ಬಗ್ಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವೆಬ್‌ಸೈಟಿನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡುವಂತೆ ಸೂಚಿಸಿದರು.
ಸಭೆಗೆ ಗೈರುಹಾಜರಾಗಿದ್ದ ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸಂಬಂಧಿಸಿದವರಿಗೆ ಅವರು ತಿಳಿಸಿದರು.
29ಕೆಆರ್ ಎಂಎನ್ 4.ಜೆಪಿಜಿ