ಮುಖ್ಯಮಂತ್ರಿ ವಿರುದ್ಧ ಗುಟುರು । ಸಾಲಗಾಮೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಜೆಡಿಎಸ್ ಪಕ್ಷದಲ್ಲೆ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಹಾಸನ ತಾಲೂಕಿನ ಸಾಲಗಾಮೆಯಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನಮ್ಮ ಪಕ್ಷದಲ್ಲೇ ಬೆಳೆದು ಈಗ ಅಧಿಕಾರದ ಅಹಂನಿಂದ ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಹಾಸನಕ್ಕೆ ಮೂರು ಬಾರಿ ಬಂದು ಪ್ರಜ್ವಲ್ ಸೋಲಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಮುಖಭಂಗ ಮಾಡುವ ಕೆಲಸವನ್ನು ನನ್ನ ಜಿಲ್ಲೆಯ ಜನರು ಮಾಡಬೇಕಿದೆ’ ಎಂದು ಹೇಳಿದರು.‘ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ಕೇಂದ್ರ ಹಣ ನೀಡುತ್ತಿಲ್ಲ ಎಂದು ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಧಾವೆ ಹೂಡಿದೆ, ಪ್ರಬಲವಾದ ಪ್ರಧಾನಿ ದೇಶಕ್ಕೆ ಇರಬಾರದು ಎಂಬ ಹೇಳಿಕೆ ನೀಡಿದ್ದಾರೆ. ಪ್ರಬಲವಾದ ಪ್ರಧಾನ ಮಂತ್ರಿ ಇದ್ದರೆ ಇವರು ಕೇಳಿದಂತೆ ಹಣ ನೀಡುವುದಿಲ್ಲ ಎಂದು ಈ ರೀತಿ ಹೇಳಿದ್ದಾರೆ’ ಎಂದು ದೂರಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಈ ಹಿಂದೆ ಫಲವತ್ತಾದ ಜಮೀನಿನಲ್ಲಿ ಬೆಳೆಗಳಿಗೆ ಮಾರಕವಾಗಿ ಬೆಳೆಯುತ್ತಿದ್ದ ಕಾಂಗ್ರೆಸ್ ಗಿಡ ಕಿತ್ತು ಹಾಕುತ್ತಿದ್ದೆವು. ಅದೇ ರೀತಿ ಈ ಬಾರಿಯ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿ ಮರೀಚಿಕೆಯಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ವರ್ಷವೆಲ್ಲ ರಾಜ್ಯಕ್ಕೆ ಬರಗಾಲ ಬಂದಿದೆ. ರೈತರಿಗೆ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಸರಿಯಾದ ವಿದ್ಯುತ್ ನೀಡದೆ ಇರುವ ಬೋರ್ವೆಲ್‌ಗಳಿಂದಲೂ ನೀರನ್ನು ಪಡೆಯಲಾಗದಂತಹ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆಯ ರೈತರಲ್ಲಿ ಇದೆ. ಆದುದರಿಂದ ಮುಂದಿನ ದಿನಗಳಲ್ಲಿ ರೈತ ಪರ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು
ಹಾಸನ ತಾಲೂಕಿನ ಸಾಲಗಾಮೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎಚ್.ಡಿ.ದೇವೇಗೌಡ ಉದ್ಘಾಟಿಸಿದರು.