ಕನ್ನಡಪ್ರಭ ವಾರ್ತೆ ಹಾಸನ
ನಗರದ ಗಂಧದಕೋಠಿಯಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂಸದರು ಪರೀಕ್ಷಾರ್ಥಿಗಳೊಂದಿಗೆ ಸಂವಾದ ನಡೆಸಿ ಶುಭಾಶಯ ಕೋರಿದರು. ಪರೀಕ್ಷಾ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಸಿದ್ಧತೆ ಬಗ್ಗೆ ವಿಚಾರಿಸಿದ ಅವರು, “ಯಾವುದೇ ರೀತಿಯ ಭಯವಿಲ್ಲದೆ, ಧೈರ್ಯವಾಗಿ ಪ್ರಶ್ನೆಗಳನ್ನು ಓದಿ, ಆತ್ಮವಿಶ್ವಾಸದಿಂದ ಉತ್ತರ ಬರೆಯಿರಿ. ಉತ್ತಮ ಅಂಕಗಳನ್ನು ಗಳಿಸಿ ನಿಮ್ಮ ಭವಿಷ್ಯವನ್ನು ಸುಧಾರಿಸಿಕೊಳ್ಳಿ” ಎಂದು ಪ್ರೇರಣೆ ನೀಡಿದರು. ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನೂ ಸಂಸದರು ಪರಿಶೀಲಿಸಿದರು. ಆರೋಗ್ಯ ಸಹಾಯಕಿಯರ ಬಳಿ ಅಗತ್ಯ ಔಷಧಿ ಸಾಮಗ್ರಿಗಳು ಲಭ್ಯವಿದೆಯೇ ಎಂಬುದನ್ನು ವಿಚಾರಿಸಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಗ್ಲೂಕೋಸ್ ಪೌಡರ್ ಸೇರಿದಂತೆ ಅಗತ್ಯವಿರುವ ವಸ್ತುಗಳನ್ನು ಸಿದ್ಧವಾಗಿಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.