ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಇಂಧನ ಇಲಾಖೆ ಸೂಚನೆಯಂತೆ ದಾವಣಗೆರೆ ತಾ. ಕುಕ್ಕವಾಡ ಗ್ರಾಮದ ದಾವಣಗೆರೆ ಸಕ್ಕರೆ ಕಾರ್ಖಾನೆಯನ್ನು ಧಾನ್ಯ ಆದಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿ ಎಂದು ಗುರುತಿಸಿ 729.50 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಕಾರ್ಖಾನೆಗೆ ಮನವಿ ಮಾಡಿದೆ ಎಂದರು.
ಕುಕ್ಕವಾಡ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ರೈತರಿಗೆ ವಾಗ್ದಾಲನ ಮಾಡಿ, 9 ದಿನ ಕಳೆದರೂ ಯಾವುದೇ ಪ್ರಕ್ರಿಯೆ ಕೈಗೊಂಡಿಲ್ಲ. ಖರೀದಿ ಕೇಂದ್ರ ಸ್ಥಾಪಿಸಿ, ಮೆಕ್ಕೆಜೋಳ ಖರೀದಿಸಿ, ರೈತರ ನೆರವಿಗೆ ಧಾವಿಸುವಂತೆ ಲೋಕಸಭೆ ಅಧಿವೇಶನದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿರುವುದೇ ಹಾಸ್ಯಾಸ್ಪದ ಎಂದು ಟೀಕಿಸಿದರು.ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಸಿಎಂ ಕುರ್ಚಿ ಕಾದಾಟದಲ್ಲಿ ತೊಡಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಹೋರಾಟಕ್ಕೆ ಮಣಿದು 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿದೆ. ಆದರೆ, ಖರೀದಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಖರೀದಿ ಏಜೆನ್ಸಿ ನೇಮಕವಾಗಿಲ್ಲ. ಲೋಡ್, ಅನ್‌ಲೋಡ್, ತೂಕ ಮಾಡುವುದು, ಸಾಗಾಣಿಕೆ ಸೇರಿ ಎಲ್ಲಾ ವಿಚಾರಗಳೂ ಗೊಂದಲದಿಂದ ಕೂಡಿವೆ ಎಂದು ದೂರಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಖರೀದಿ ಪ್ರಕ್ರಿಯೆ ಕೈಗೊಂಡ ಯಾವುದೇ ಅನುಭವ, ಹಿನ್ನೆಲೆ, ಸೂಕ್ತ ತರಬೇತಿ, ಅಗತ್ಯ ಮೂಲ ಸೌಕರ್ಯ ಯಾವುದೂ ಇಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಪರ ಕಾಳಜಿಯೇ ಇಲ್ಲವಾಗಿದೆ. ನೆಪ ಮಾತ್ರಕ್ಕೆ ಮಾತ್ರ ಕಾಗದದಲ್ಲಿ ನಿರ್ಣಯಿಸಿ, ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಮೂಲಕ ಪಲಾಯನ ಮಾಡುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ. ಇದರೊಂದಿಗೆ ದಲ್ಲಾಳಿಗಳು, ವರ್ತಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದೆ ಎಂದು ಆರೋಪಿಸಿದರು.ಟಾಸ್ಕ್ ಫೋರ್ಸ್ ಸಮಿತಿಯಲ್ಲಿರುವ ಪ್ರತಿಯೊಬ್ಬ ಅಧಿಕಾರಿಗೂ ಜವಾಬ್ಧಾರಿ ನಿಗದಿಪಡಿಸಿ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಯಶಸ್ವಿಗೊಳಿಸಬೇಕು. ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಅಬಕಾರಿ ಉಪ ಆಯುಕ್ತರು, ತಾಲೂಕು ನೋಡಲ್ ಅಧಿಕಾರಿಯಾದ ಸಹಾಯಕ ಸಹಕಾರ ನಿಬಂಧಕರು ಸ್ಥಳದಲ್ಲಿ ಹಾಜರಿದ್ದು, ರೈತರಿಗೆ ಅಗತ್ಯ ಸಲಹೆ, ಸಹಕಾರ, ಮಾರ್ಗದರ್ಶವನ್ನು ನೀಡಬೇಕು. ಅಗತ್ಯ ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ, ಕೃಷಿ, ಪಶು ಸಖಿಯರ ಮೂಲಕ ಎಲ್ಲಾ ಗ್ರಾಮಗಳ ರೈತರಲ್ಲಿ ಜಾಗೃತಿ ಮೂಡಿಸಲಿ ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಆಗ್ರಹಿಸಿದರು.
ಪಕ್ಷದ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಡಿ.ಟಿ.ವಿಜಯೇಂದ್ರ, ಡಿ.ವಿ.ಜಯರುದ್ರಪ್ಪ, ವಾಟರ್ ಮಂಜುನಾಥ, ರಾಜು ತೋಟಪ್ಪನವರ್, ಎನ್.ಎಚ್.ಹಾಲೇಶ ನಾಯ್ಕ, ಗುತ್ತೂರು ಮಂಜುನಾಥ ಇತರರು ಇದ್ದರು.