ಕನ್ನಡಪ್ರಭ ವಾರ್ತೆ ತುಮಕೂರುಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಹಣಕಾಸು ನೆರವು, ಮಾರುಕಟ್ಟೆಯ ವಿಸ್ತರಣೆ ಮತ್ತು ಆಮದು ನೀತಿಗಳ ಕುರಿತು ಚರ್ಚೆ ನಡೆಸಲು ಕಾಸಿಯಾ ದಕ್ಷಿಣ ಭಾರತ ಎಂಎಸ್ಎಂಇ ಸಮಾವೇಶ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನವನ್ನು ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಮೇ ೨೨ರಿಂದ ೨೪ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶರಾವ್ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ದೇಶಾದ್ಯಂತ ಎಂಎಸ್ಎಂಇ ವಲಯವನ್ನು ಬಲಪಡಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುವ ಒಂದು ಹೆಗ್ಗುರುತಿನ ಉಪಕ್ರಮವಾಗಿ ಈ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದರು. ಕಾಸಿಯಾ ವತಿಯಿಂದ ಆಯೋಜಿಸಲಾಗುತ್ತಿರುವ ಈ ಮೂರು ದಿನಗಳ ಕಾರ್ಯಕ್ರಮವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ಸಾರ್ವಜನಿಕ ವಲಯದ ಘಟಕಗಳು, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ನೀತಿ ನಿರೂಪಕರು ಮತ್ತು ತಾಂತ್ರಿಕ ತಜ್ಞರನ್ನು ಒಟ್ಟುಗೂಡಿಸುವ ಒಂದು ವೇದಿಕೆಯಾಗಿದೆ ಎಂದು ಹೇಳಿದರು.ಅಂದು ಬೆಳಿಗ್ಗೆ 10.30ಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಕೇಂದ್ರ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಶೋಭ ಕರಂದ್ಲಾಜೆ, ರಾಜ್ಯದ ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಭಾಗವಹಿಸುವರು ಎಂದರು.ಗೌರವ ಅತಿಥಿಗಳಾಗಿ ಚಳ್ಳಕೆರೆ ಶಾಸಕ ರಘುಮೂರ್ತಿ, ಶಾಸಕ ಕೆ.ಎನ್. ರಾಜಣ್ಣ, ಶಾಸಕ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶ ಮತ್ತು ವಸ್ತು ಪ್ರದರ್ಶನದಲ್ಲಿ ರಕ್ಷಣಾ, ಏರೋಸ್ಪೇಸ್, ಮೆಷಿನ್ ಟೂಲ್, ಸಿಎನ್‌ಸಿ ಕ್ಲಸ್ಟರ್‌ಗಳು, ಮೆಷಿನ್ ಬಿಲ್ಡಿಂಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಬಯೋಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸೇರಿದಂತೆ ೧೦೦ಕ್ಕೂ ಹೆಚ್ಚು ಘಟಕಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಜತೆಗೆ ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಅವರು ವಿವರಿಸಿದರು.ಮೇ 24 ರಂದು ಮಧ್ಯಾಹ್ನ 3 ಗಂಟೆಗೆ ಈ ಸಮಾವೇಶ ಮತ್ತು ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ರಘುಮೂರ್ತಿ, ಗುಬ್ಬಿ ಶಾಸಕ ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಶಾಸಕರಾದ ಸಿ.ಬಿ. ಸುರೇಶ್‌ಬಾಬು, ಕೆ. ಷಡಕ್ಷರಿ, ಡಾ. ರಂಗನಾಥ್, ಟಿ.ಬಿ. ಜಯಚಂದ್ರ, ಎಂ.ಟಿ. ಕೃಷ್ಣಪ್ಪ, ಎಚ್.ವಿ. ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷರಾದ ನಿಂಗಣ್ಣ ಎಸ್. ಬೀರಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್, ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರರಾದ ಶ್ರೀಕಂಠದತ್ತ ಪಿ.ಎಸ್., ವಸಂತನರಸಾಪುರ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಡಾ. ಸಿ.ವಿ. ಹರೀಶ್, ಎಂ. ಚಂದ್ರಶೇಖರ್, ಎಸ್. ಕಂಠಪ್ಪ, ಸುಜ್ಞಾನ ಹಿರೇಮಠ್, ತುಮಕೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಆರ್. ಕುರಂದವಾಡ ಮತ್ತಿತರರು ಉಪಸ್ಥಿತರಿದ್ದರು.