ವಿಶೇಷ ವರದಿ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಶಕದಿಂದಲೂ ನಿರ್ಜೀವ ಸ್ಥಿತಿಯಲ್ಲಿದೆ. ಪ್ರಾಧಿಕಾರದಲ್ಲಿ ವಿವಿಧ ಹಂತಗಳಲ್ಲಿ ನಡೆದಿರುವ ನಿವೇಶನ ಹಗರಣದ ಸಿಬಿಐ ತನಿಖೆ ಈವರೆಗೂ ಮುಗಿದಿಲ್ಲ. ಹೆಸರಿಗಷ್ಟೇ ಪ್ರಾಧಿಕಾರ ಉಳಿದುಕೊಂಡಿದೆ. ಆದರೂ ಅಧ್ಯಕ್ಷ ಸ್ಥಾನಕ್ಕೆ ಕೈ ಪಾಳಯದಲ್ಲಿ ಬಿರುಸಿನ ಪೈಪೋಟಿ ಏರ್ಪಟ್ಟಿರುವುದು ವಿಚಿತ್ರವೆನಿಸಿದರೂ ಸತ್ಯ.
ಮುಡಾ ರಚನೆಯಾದ ನಂತರದಲ್ಲಿ ಬೃಹತ್ ಕೆರೆಯನ್ನು ಮುಚ್ಚಿ ವಿವೇಕಾನಂದ ನಗರ ಹೆಸರಿನಲ್ಲಿ ಬಡಾವಣೆಯನ್ನು ರಚಿಸಲಾಯಿತು. ಅದಾದ ಬೆನ್ನಹಿಂದೆಯೇ ಸಾಲು ಸಾಲು ಹಗರಣಗಳು ಮುಡಾವನ್ನು ಬೆಂಬಿಡದಂತೆ ಕಾಡಿದವು. ಮುಡಾದಿಂದ ೫ ಕೋಟಿ ರು. ನಾಪತ್ತೆ ಪ್ರಕರಣದಿಂದ ೧೦೭ ನಿವೇಶನ ಹಗರಣ, ಲಾಟರಿ ಸ್ಕೀಂ, ನಿಮ್ಮ ಸ್ಕೀಂ ಸೇರಿದಂತೆ ನಿವೇಶನಗಳ ಹಂಚಿಕೆಯಲ್ಲಾಗಿರುವ ಹಗರಣಗಳೆಲ್ಲಾ ಬಯಲಿಗೆ ಬಂದವು. ಬಡಾವಣೆಯಲ್ಲಿ ನಿವೇಶನ ಕೊಂಡವರು ಈಗಲೂ ಮೂಲಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ. ನಿವೇಶನ ಕೊಂಡವರಲ್ಲಿ ಹಲವು ಮಂದಿ ಮಾರುವುದಕ್ಕೂ ಆಗದೆ, ನೆಲೆಸುವುದಕ್ಕೂ ಆಗದೆ, ಹೊಸದಾಗಿ ಕೊಂಡವರು ಖಾತೆ ಮಾಡಿಸಲಾಗದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ.ಜೀವಕಳೆಯನ್ನೇ ಕಳೆದುಕೊಂಡಿರುವ ಮುಡಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ. ಅತೃಪ್ತರಿಗೆ ತೃಪ್ತಿಪಡಿಸುವ ಹುದ್ದೆಯಾಗಿ ಮುಡಾ ಅಧ್ಯಕ್ಷಗಾದಿ ಉಳಿದುಕೊಂಡಿದೆಯೇ ವಿನಃ ಅಧ್ಯಕ್ಷರಾಗಿ ಮಹತ್ವದ ಬದಲಾವಣೆಗಳನ್ನು ತರುತ್ತಾರೆಂಬುದು ಕೇವಲ ಭ್ರಮೆಯಾಗಿದೆ.
ಕಳೆದ ಎರಡು ತಿಂಗಳಿಂದಲೂ ಹುದ್ದೆ ಆಕಾಂಕ್ಷಿಗಳು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಸೇರಿದಂತೆ ರಾಜ್ಯಮಟ್ಟದ ನಾಯಕರು, ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ನಿಗಮ, ಮಂಡಳಿ ಮತ್ತು ಪ್ರಾಧಿಕಾರದ ನೇಮಕಾತಿಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಈಗ ಮುಡಾ ಅಧ್ಯಕ್ಷ ಸ್ಥಾನದ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷರಾಗಿ ಮುಸ್ಲಿಂ ಸಮುದಾಯ ಮುಖಂಡ, ನಗರಸಭೆ ಸದಸ್ಯ ನಯೀಂ ಅವರನ್ನು ನೇಮಕ ಮಾಡಲಾಗಿತ್ತು. ೨೦೨೪ ಜೂ.೧೯ರಂದು ನಯೀಂ ಅವರು ಮುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಪಕ್ಷದ ನಾಯಕರು ಮತ್ತು ಮುಖಂಡರ ನಡುವಿನ ಆಂತರಿಕ ಮಾತುಕತೆಯಂತೆ ಒಂದು ವರ್ಷಗಳ ಕಾಲ ನಯೀಂ ಅವರನ್ನು ನೇಮಕ ಮಾಡಿ, ಉಳಿದ ಅವಧಿಗೆ ಮತ್ತಿಬ್ಬರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬುದು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿರುವ ಮಾತು.
ಹೀಗಾಗಿ ಅಲ್ಪಸಂಖ್ಯಾತ ವರ್ಗದವರ ಕೋಟಾ ಮುಗಿದಿದೆ. ಕಳೆದ ಜೂನ್ ತಿಂಗಳಲ್ಲೇ ರಾಜೀನಾಮೆ ನೀಡಬೇಕಿದ್ದ ನಹೀಂ ಹೆಚ್ಚುವರಿಯಾಗಿ ನಾಲ್ಕು ತಿಂಗಳು ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಇದೀಗ ಮುಡಾ ಅಧ್ಯಕ್ಷ ಸ್ಥಾನಕ್ಕಾಗಿ ಪರಿಶಿಷ್ಟ ಜಾತಿಯ ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ. ಹೀಗಾಗಿ ನಗರಸಭೆ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್, ನಗರಸಭೆ ಸದಸ್ಯ ಹಾಗೂ ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಶ್ರೀಧರ್, ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯ ಸಂಚಾಲಕ ಕೆ.ಎನ್.ದೀಪಕ್, ಕಾಂಗ್ರೆಸ್ ಮುಖಂಡರಾದ ಚಿಕ್ಕಮಂಡ್ಯ ಆನಂದ್‌ಕುಮಾರ್ ಅವರು ಮುಡಾ ಅಧ್ಯಕ್ಷಗಾದಿಗಾಗಿ ಪೈಪೋಟಿ ನಡೆಸಿದ್ದಾರೆ.
ಇದರ ನಡುವೆ ನಗರಸಭೆ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಹೆಸರು ಈಗಾಗಲೇ ಅಂತಿಮಗೊಂಡು ನೇಮಕಾತಿ ಆದೇಶವೂ ಸಿದ್ಧವಾಗಿದೆ. ಆದರೆ, ನೇಮಕಾತಿ ಆದೇಶ ತಲುಪಿಸುವುದಕ್ಕೆ ತಡ ಮಾಡಲಾಗುತ್ತಿದೆ. ಇದಕ್ಕೆ ರಾಜಕೀಯ ಪ್ರಭಾವ ಕಾರಣವೋ, ನಯೀಂ ಅವರನ್ನು ಮುಂದುವರೆಸುವ ತಂತ್ರಗಾರಿಕೆಯೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ.
-ಬಿ.ಪಿ.ಪ್ರಕಾಶ್, ಮಾಜಿ ಸದಸ್ಯ, ನಗರಸಭೆ, ಮಂಡ್ಯಮುಡಾ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ನೇಮಕ ಮಾಡುವಂತೆ ನಾನೂ ಕೂಡ ವರಿಷ್ಠರಿಗೆ ಮನವಿ ಮಾಡಿದ್ದೇನೆ. ನಾಯಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನ್ನನ್ನು ಪರಿಗಣಿಸುವ ಭರವಸೆ ಇದೆ. ೩೫ ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಜವಾಬ್ದಾರಿ ಕೊಟ್ಟರೆ ನಿರ್ವಹಿಸಲು ಸಿದ್ಧ. ಈ ಮಧ್ಯೆ ವೈಯುಕ್ತಿಕ ಕಾರಣಗಳಿಂದಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.