ತಾನು ಸ್ವಚ್ಛ ಅಂತಾ ಸಾಬೀತಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಗೋವಿಂದ ಕಾರಜೋಳಕನ್ನಡಪ್ರಭ ವಾರ್ತೆ ದಾವಣಗೆರೆ
ವಾಲ್ಮೀಕಿ ನಿಗಮ, ಮೂಡಾ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆಯೇ ಇಲ್ಲವಾಗಿದ್ದು, ಸಿಎಂ ಸೇರಿದಂತೆ ಹಗರಣದಲ್ಲಿ ಭಾಗಿಯಾದವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಲಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ತಾಕೀತು ಮಾಡಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಖಜಾನೆಯಿಂದಲೇ ಹಣ ಬಿಡುಗಡೆಯಾಗಿರುವುದು ಸ್ಪಷ್ಟವಾಗಿದೆ. ವಾಲ್ಮೀಕಿ ನಿಗಮ ಮತ್ತು ಮೂಡಾ ಹಗರಣದಲ್ಲಿ ಭಾಗಿಯಾದವರು ತಮ್ಮನ್ನು ತಾವು ಸಾಚಾಗಳೆಂದು ಸಾಬೀತುಪಡಿಸಲು ಕಾಲಾವಕಾಶ ಕೇಳಿದ್ದಾರೆ ಎಂದರು.
ಹಗರಣ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಗರಣದಲ್ಲಿ ಭಾಗಿಯಾದವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯಾಗಿದ್ದು, ಸ್ವಾತಂತ್ರ್ಯಾ ನಂತರ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರದ ಹಾಲಿ-ಮಾಜಿ ಸಚಿವರು, ಶಾಸಕರು ಸುಮಾರು ₹60 ಲಕ್ಷ ಕೋಟಿಗಿಂತಲೂ ಅದಿಕ ಹಗರಣ ಮಾಡಿ, ಜೈಲು ಪಾಲಾಗಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಅವರು ಟೀಕಿಸಿದರು.ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕೆಲಸ ಮಾಡದೇ, ಭ್ರಷ್ಟಾಚಾರದಲ್ಲಿ ಮತ್ತು ಸ್ವಜನಪಕ್ಷಪಾತದಲ್ಲೇ ತೊಡಗಿದೆ. ಸಾಚಾ ಎಂಬುದಾಗಿ ಹೇಳಿಕೊಳ್ಳುತ್ತಿದ್ದವರೇ ಇಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರದಿಂದಲೇ ಬ್ಯಾಂಕ್ ದರೋಡೆಯಾಗಿದ್ದು, ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಆಗಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಇರುವುದರಿಂದ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದ್ದವರನ್ನು ಬಂಧಿಸಲಾಗಿದೆ. ಬ್ಯಾಂಕ್ ದರೋಡೆಯಲ್ಲಿ ರಾಜ್ಯ ಸರ್ಕಾರದ ಸಚಿವರೇ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆಯಾಗಿದ್ದರಿಂದ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳಲು, ಉಳಿಸಲು ಯಾವುದೇ ನೈತಿಕತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಲಿ ಎಂದು ಗೋವಿಂದ ಕಾರಜೋಳ ಕಿವಿಮಾತು ಹೇಳಿದರು.
------ಸಿದ್ದು ಸಮಾಜವಾದಿ ಅಲ್ಲ, ಮಜಾವಾದಿ: ಎನ್.ರವಿಕುಮಾರ
ಕನ್ನಡಪ್ರಭ ವಾರ್ತೆ ದಾವಣಗೆರೆಸಿಎಂ ಸಿದ್ದರಾಮಯ್ಯ ಸಮಾಜವಾದಿ ಆಗಿರದೇ, ಮಜಾವಾದಿ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಲೇವಡಿ ಮಾಡಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಸಿದ್ದರಾಮಯ್ಯ ಈಗ ಮಜಾವಾದಿಯಾಗಿದ್ದಾರೆ. ತಮ್ಮನ್ನು ತಾವು ಸಮಾಜವಾದಿಯೆಂದು ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದರಷ್ಟೇ ಎಂದರು.ಮೂಡಾ ಹಗರಣದಿಂದ ಸಿದ್ದರಾಮಯ್ಯ ಮಜಾವಾದಿಯೆಂಬುದು ಬಹಿರಂಗವಾಗಿದೆ. ಸಿದ್ದರಾಮಯ್ಯನವರ ನಿಜವಾದ ಬಣ್ಣವೂ ಬಯಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಸೇರಿ ಹಲವರ ಬಂಧನವಾಗಿದೆ. ಹಗರಣದಲ್ಲಿ 94 ಕೋಟಿ ಹಣವನ್ನು700 ಖಾತೆಗೆ ಹಾಕಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ ಎಂದು ಅವರು ದೂರಿದರು.ಇದೊಂದು ಲೂಟಿ ಸರ್ಕಾರವಾಗಿದ್ದು, ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಿದ್ದರೆ ಇದೇ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿರಲಿಲ್ಲವೇ? ಅದೇ ರೀತಿ ಈಗ ಜನರೂ ಸಹ ಮುಡಾ ಸೈಟ್ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಧ್ವನಿ ಎತ್ತುತ್ತಿದ್ದಾರೆ. ವಿಪಕ್ಷದಲ್ಲಿರುವ ನಾವು ಸಹ ಸಿದ್ದರಾಮಯ್ಯ ರಾಜೀನಾಮೆ ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.
----------ಪಂಚಮಸಾಲಿಗೆ 2 ಎ ಮೀಸಲಾತಿಗೆ ನಿರಾಣಿ ಒತ್ತಾಯಕನ್ನಡಪ್ರಭ ವಾರ್ತೆ ದಾವಣಗೆರೆ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಸಚಿವರಿದ್ದಾಗಲೇ ನಾವು ಹೋರಾಟ ಮಾಡಿದ್ದು, ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ 2ಎ ಮೀಸಲಾತಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಕಳೆಯುತ್ತಿವೆ. ಈಗಲಾದರೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕೆಲಸ ಆಗಬೇಕು. ಪಂಚಮಸಾಲಿ ಸಮಾಜ ಬಾಂಧವರ ಅಪೇಕ್ಷೆ ಇದೆ. ಆದಷ್ಟು ಬೇಗನೆ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಲಿ ಎಂದು ಅವರು ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು, ಶಾಸಕರ ಬಂಧನವಾಗಿದೆ. ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು. ತನಿಖೆ ಮುಗಿದು, ತಪ್ಪಿತಸ್ಥ ಅಲ್ಲವೆಂದರೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ ಎಂದು ಅವರು ಕಿವಿಮಾತು ಹೇಳಿದರು.ಮೈಸೂರಿನ ಮೂಡಾ ನಿವೇಶನ ಹಗರಣ ಸ್ಪಷ್ಟವಾಗಿದೆ. ವಾಲ್ಮೀಕಿ ನಿಗಮದ ಹಣಕಾಸು ಹಗರಣ ಹಾಗೂ ಮೂಡಾ ಹಗರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಮುರುಗೇಶ ನಿರಾಣಿ ಒತ್ತಾಯಿಸಿದರು.