ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪಟ್ಟಣದ ತಾಲೂಕು ಸರ್ಕಾರಿ ಎನ್.ವಿ.ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣ ಸದ್ಯ ಅವ್ಯವಸ್ಥೆ ಆಗರವಾಗಿದೆ. ಎಲ್ಲೇಂದರಲ್ಲಿ ಕಸ, ಕಡ್ಡಿ ಎಸೆದಿರುವುದು, ಮಾತ್ರವಲ್ಲದೇ ಗುಟ್ಕಾ ತಿಂದು ಉಗುಳಿದ ದೃಶ್ಯವಂತೂ ಎದ್ದು ಕಾಣುತ್ತದೆ. ಜೊತೆಗೆ ಗುಟ್ಕಾ ತಿಂದು ಉಳಿದ ಗಬ್ಬು ವಾಸನೆಯಿಂದ ಪ್ರಯಾಣಿಕರ ಮೂಗುಮುಚ್ಚಿಕೊಂಡೆ ಇಲ್ಲಿಯೇ ಕುಳಿತುಕೊಳ್ಳಬೇಕಿದೆ. ಆದರೆ, ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿಯ ಬಸ್ ನಿಲ್ದಾಣ ಮೂಲಕಸೌಕರ್ಯಗಳಿಲ್ಲದೇ ಸೊರಗಿ ನಿಂತಿದೆ. ಅವ್ಯವಸ್ಥೆ ಆಗರವಾಗಿರುವ ಬಸ್ ನಿಲ್ದಾಣದಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೆಸರಿಗೆ ಹೈಟೆಕ್ ಬಸ್ ನಿಲ್ದಾಣ, ಕುಡಿಯಲು ಹನಿ ನೀರಿಲ್ಲ ಎಂದು ಪ್ರಯಾಣಿಕರು ನಿತ್ಯವೂ ಹಿಡಿಶಾಪ ಹಾಕುವಂತಾಗಿದೆ.ಸದ್ಯ ಬೇಸಿಗೆ ಪ್ರಾರಂಭಗೊಳ್ಳುತ್ತಿದೆ. ಆದರೆ, ಇಗಲೇ ವಿಪರೀತ ಬಿಸಿಲಿನ ತಾಪಮಾನಕ್ಕೆ ಸಾರ್ವಜನಿಕರಿಗೆ ಬಾಯಾರಿಕೆಗೆಂದು ನೀರು ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಬಸ್ ನಿಲ್ದಾಣದಲ್ಲಿ ಕುಡಿವ ನೀರು ಎಂದು ನಾಮಫಲಕವಿರುವ ನಳಗಳು ಇವೆ. ಆದರೆ, ಆ ನಳದ ಹತ್ತಿರ ಅದೆಷ್ಟೋ ದಿನಗಳಿಂದ ಹನಿ ನೀರು ಕೂಡ ಬರದೆ ನಳಗಳು ಜಂಗು ಹಿಡಿದಿವೆ. ಪ್ರಯಾಣಿಕರು ಕುಡಿಯುವ ನೀರಿಗಾಗಿ ಹೋಟೆಲ್‌ಗಳನ್ನೇ ಅವಲಂಬಿತರಾಗಿರುವುದು ಅನಿವಾರ್ಯವಾಗಿದೆ.
ರಾತ್ರಿ ವೇಳೆ ಬಸ್‌ನಿಲ್ದಾಣ ಆವರಣದೊಳಗಿನ ಎಲ್ಲ ವಿದ್ಯುದ್ದೀಪಗಳು ಸಹಿತ ಬೇಕಾಬಿಟ್ಟಿಯಾಗಿ ಹತ್ತಿ ಉರಿಯುತ್ತವೆ. ಆದರೆ, ಒಂದೊಂದು ದಿನ ರಾತ್ರಿ ವೇಳೆ ಬಸ್ ನಿಲ್ದಾಣದಲ್ಲಿ ಕತ್ತಲೆಯದ್ದೇ ಸಾಮ್ರಾಜ್ಯ. ಪರಿಣಾಮ, ಬಸ್ ನಿಲ್ದಾಣದ ಅವರಣದಲ್ಲಿರುವ ಸಾರ್ವಜನಿಕ ಮೂತ್ರಾಲಯದಲ್ಲಿಯೂ ಕೂಡ ಬಹಿರ್ದೆಸೆ ಮಾಡಿ ಹೋಗುತ್ತಿರುವುದರಿಂದ ಬಸ್ ನಿಲ್ದಾದ ತುಂಬೆಲ್ಲ ದುರ್ನಾತ ಬೀರಿ ಪ್ರಯಾಣಿಕರ ನೆಮ್ಮದಿ ಹಾಳುಗೆಡುವ ವಾತಾವರಣ ನಿರ್ಮಾಣಗೊಂಡಿದೆ. ಗಬ್ಬು ವಾಸನೆಯಿಂದ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ. ರಾತ್ರಿ ವೇಳೆ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದ ಸಂದರ್ಭದಲ್ಲಿ ನಿಲ್ದಾಣ ಆವರಣ ಹಲವು ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆ ಮಾತ್ರವಲ್ಲ ಕಳ್ಳತನಗಳ ತಾಣವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರ ಆರೋಪ.ಬಸ್ ನಿಲ್ದಾಣದಲ್ಲಿ ನಿರ್ವಹಣೆ ಮಾಡುವವರು ಇಲ್ಲದೆ ಇರುವುದರಿಂದ ಬಸ್ ನಿಲ್ದಾಣದ ಗೋಡೆಗಳ ಮೇಲೆ ಉಗಿದಿರುವ ಗುಟ್ಕಾ ಕಲೆಗಳು ನಿಲ್ದಾಣಕ್ಕೆ ಕಪ್ಪುಚುಕ್ಕೆಯಂತೆ ಕಾಣುತ್ತಿವೆ. ಬಸ್ ನಿಲ್ದಾಣ ಸುತ್ತಮುತ್ತ ಎಲ್ಲೆಂದರಲ್ಲಿ ಹುಲ್ಲು, ಕಸ, ಕಡ್ಡಿ ಬೆಳೆದು ಸ್ವಚ್ಛತೆ ಮಾಯವಾಗಿದೆ.
ಬಸ್ ನಿಲ್ದಾಣದ ಒಳಗಡೆ ಪ್ಲಾಸ್ಟಿಕ್‌ಗಳು, ನೀರಿನ ಬಾಟಲ್‌ಗಳು, ಸಾರಾಯಿ ಪ್ಯಾಕೇಟ್‌ಗಳು, ಕಸ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಳಕೆಯಾಗದೇ ಇರುವ ಕೆಲವು ಕಡೆಗಳಲ್ಲಿ ಕಿಟಕಿಗಳ ಗ್ಲಾಸ್‌ಗಳು ಒಡೆದು ಹೋಗಿದೆ. ಅಸ್ವಚ್ಛತೆಯಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗಡೆ ಬಾರದೆ ಅಂಗಳದಲ್ಲಿಯೇ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.ಬಸ್ ನಿಲ್ದಾಣ ನಿರ್ವಹಣೆ ಇಲ್ಲದೆ ಹಾಳಾಗಲು ರಸ್ತೆ ಸಾರಿಗೆ ಘಟಕ ಸಿಬ್ಬಂದಿ ನೇಮಕ ಮಾಡದೇ ನಿರ್ಲಕ್ಷ್ಯ ವಹಿಸಿದ್ದು ಮತ್ತು ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡದ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಲು ಕಾರಣ ಎಂಬುವುದು ಪ್ರಜ್ಞಾವಂತ ನಾಗರೀಕರ ಆರೋಪ.
ಸದ್ಯ ಬಸ್ ನಿಲ್ದಾಣ ಹೋಸದಾಗಿದ್ದರೂ ಸಹಿತ ಒಳಾಂಗಣದಲ್ಲಿನ ಸಿಸಿ ರಸ್ತೆಯೂ ಸಂಪೂರ್ಣ ಕಿತ್ತು ಹಾಳಾಗಿ ಹೋಗಿದೆ. ಜೊತಗೆ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿಯೇ ಮುದ್ದೇಬಿಹಾಳ ಬಸ್ ನಿಲ್ದಾಣ ಸರ್ಕಾರಕ್ಕೆ ಹೆಚ್ಚು ಆದಾಯವನ್ನು ತಂದುಕೊಡುವುದಲ್ಲದೇ ದೊಡ್ಡದಾದ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಯಾಗಿದೆ.ಇನ್ನಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ನಿಲ್ದಾಣ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಬೇಕು ಮತ್ತು ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.--------ಕೋಟ್....
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗಾಗಲೇ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯನ್ನುದೇ ಮರೆಯಾಗಿದೆ. ಇದರಿಂದಾ ಸಾರ್ವಜನಿಕರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಾತ್ರವಲ್ಲದೇ ಕಸ ಕಡ್ಡಿ ಧೂಳಿನಲ್ಲಿಯೇ ಪ್ರಯಾಣಿಕರು ಕುಳಿತುಕೊಳ್ಳಬೇಕಾಗಿದೆ. ಬೇಸಿಗೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಸರಿಯಾಗಿ ಆಸನದ ವ್ಯವಸ್ಥೆ ಕೈಗೊಳ್ಳಬೇಕು. ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಆ ಮೂಲಕ ಗುಟ್ಕಾ ತಿಂದು ಉಗಿಯುವ ಪುಂಡರ ಬಗ್ಗೆ ನಿಗಾವಹಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು. ಇದರಿಂದ ಜಾಗೃತಿ ಮೂಡಿಸಿದಂತಾಗುತ್ತದೆ ಹಾಗೇ ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ.-ಪ್ರಕಾಶ ಸರೂರ, ತಾಲೂಕು ಅಂಬೇಡ್ಕರ್ ಸೇನೆ ಮುದ್ದೇಬಿಹಾಳ.
--- ಬಸ್ ನಿಲ್ದಾಣದಲ್ಲಿ ನಿತ್ಯವೂ ಸಂಚಾರ ಮಾಡಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಲಾಗುತ್ತಿದೆ. ಆದರೂ ಸಹಿತ ಕೆಲವರು ಗುಟ್ಕಾ ತಿಂದು ಉಗಿದು ಗೊಡೆಗಳನ್ನು ಕಾಂಪೌಂಡ್‌ಗಳನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಬೆದರಿಕೆ ಹಾಕಲಾಗಿದೆ. ಜಾಗೃತಿ ಮೂಡಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಈಗಾಗಳೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಸರ್ಕಾರದ ಅನುದಾನ ಪಡೆದುಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಎಲ್ಲ ರೀತಿಯ ಮೂಲಬೂತ ಸೌಲಭ್ಯಗಳಿಗೆ ಹೆಚ್ಚು ನಿಗಾವಹಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.-ಎ.ಎಚ್.ಮಧುಭಾವಿ, ಸಾರಿಗೆ ಘಟಕದ ವ್ಯವಸ್ಥಾಪಕ ಮುದ್ದೇಬಿಹಾಳ.
---