ಕುಷ್ಟಗಿ: ಸಾಮರಸ್ಯ,ಸಹಬಾಳ್ವೆ, ಸೌಹಾರ್ದತೆ ಹಾಗೂ ಭಾವೈಕ್ಯತೆಯ ಸಂದೇಶ ಸಾರುವ ಮೊಹರಂ ಹಬ್ಬವು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರದ್ಧಾಭಕ್ತಿ, ಸಂಪ್ರದಾಯ ಮತ್ತು ಸಡಗರ-ಸಂಭ್ರಮದಿಂದ ಆಚರಿಸಿದರು.
ಪಟ್ಟಣ ಸೇರಿದಂತೆ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ, ಹನಮಸಾಗರ, ಜಾಲಿಹಾಳ, ರ್ಯಾವಣಕಿ, ಹೆಸರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಹಬ್ಬದ ಆರಂಭದಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನ, ವಿಶೇಷ ಪೂಜೆ ಹಾಗೂ ಭಕ್ತರ ಹರಕೆಗಳೊಂದಿಗೆ ಮೊಹರಂ ಆಚರಣೆ ನಡೆಯಿತು.
ಮೊಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಮತ್ತು ರಾತ್ರಿ ಅಲಾಯಿ ದೇವರ ಮೆರವಣಿಗೆ ಗ್ರಾಮ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆದವು. ಭಾಜಾ-ಭಜಂತ್ರಿ, ಡೊಳ್ಳು, ಹಲಗಿ, ವಾದ್ಯಮೇಳ, ಹೆಜ್ಜೆ ಕುಣಿತ, ಅಲಾಯಿ ಕುಣಿತ, ಭಾಣ ಬಿರುಸುಗಳ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ತಂದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಮೆರವಣಿಗೆಯಲ್ಲಿ ಪಾಲ್ಗೊಂಡರು.ಅಲಾಯಿ ದೇವರ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ದೇವರಿಗೆ ಹೂವಿನ ಹಾರ, ಸಕ್ಕರೆ ನೈವೇದ್ಯ, ಹಣ್ಣು-ಹಂಪಲು ಅರ್ಪಿಸಿ ತಮ್ಮ ಇಷ್ಟಾರ್ಥ ಬೇಡಿಕೊಂಡರು. ಹಲವರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರೆ, ಇನ್ನೂ ಕೆಲವರು ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ಬೀದಿಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿತ್ತು.
ಹಿಂದೂಗಳೇ ಮುಂದುವರಿಸುತ್ತಿರುವ ಸಂಪ್ರದಾಯ: ತಾಲೂಕಿನ ಜಾಲಿಹಾಳ, ರ್ಯಾವಣಕಿ, ಹೆಸರೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ವಾಸವಿಲ್ಲದಿದ್ದರೂ ಹಲವು ದಶಕಗಳಿಂದ ಮೊಹರಂ ಆಚರಣೆಯ ಸಂಪ್ರದಾಯ ನಿರಂತರವಾಗಿ ಮುಂದುವರಿದಿದೆ. ಸಮೀಪದ ಗ್ರಾಮಗಳಿಂದ ಮುಸ್ಲಿಂ ಧರ್ಮ ಗುರುಗಳನ್ನು ಆಹ್ವಾನಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗುತ್ತದೆ.
ಮೊಹರಂ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಷ್ಟಗಿ ತಾಲೂಕಿನ ಪೊಲೀಸರು ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸ್ ಸಿಬ್ಬಂದಿ ಮೆರವಣಿಗೆ ಮಾರ್ಗದುದ್ದಕ್ಕೂ ನಿಯೋಜನೆಗೊಂಡು ಶಾಂತಿಯುತ ಆಚರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದರು.