ಮುಸ್ಲಿಮರಿಲ್ಲದ ಊರಲ್ಲೂ ಸಾಮರಸ್ಯದ ಮೊಹರಂ

KannadaprabhaNewsNetwork |  
Published : Jun 27, 2026, 01:00 AM IST
೨೪ ವೈಎಲ್‌ಬಿ ೦೧ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿನ ಅಲಾಯಿ ದೇವರುಗಳು. | Kannada Prabha

ಸಾರಾಂಶ

ಮೊಹರಂ ಹಬ್ಬದ ಅಂಗವಾಗಿ ಯುವಕರು, ಚಿಣ್ಣರು, ಅಂದ-ಚಂದದ ರಿಬ್ಬನ್‌ನಿಂದ ಸಿಂಗರಿಸಿದ ಕೊಡೆ ಹಿಡಿದು ಹೆಜ್ಜೆ ಕುಣಿತ, ನೃತ್ಯ, ಕೋಲಾಟ ಆಡುವುದು ನೋಡುಗರ ಕಣ್ಮನ ಸೆಳೆಯುತ್ತದೆ

ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ

ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಸಾರುವ ಮೊಹರಂ ಹಬ್ಬ ತಾಲೂಕಿನ ಕೆಲ ಊರುಗಳಲ್ಲಿ ಮುಸ್ಲಿಂ ಸಮುದಾಯದ ಒಂದೂ ಕುಟುಂಬ ಇಲ್ಲದಿದ್ದರೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗುತ್ತಿವೆ.

ಮುಸ್ಲಿಮರಿಲ್ಲದ ಗ್ರಾಮಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ, ದೇವರ ಸವಾರಿ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನ ಪಕ್ಕದ ಊರಿನ ಮುಸ್ಲಿಂ ಧರ್ಮಗುರು, ಮುಲ್ಲಾ (ಮುಲ್ಲಾಸಾಬ್)ರನ್ನು ಕರೆಸಿ,ಅಲಾಯಿ ದೇವರ ಚಾಕ್ರಿ ಮತ್ತು ಓದಿಕೆ ಮಾಡಲು ಹಿರಿಯರ ಕಾಲದಿಂದಲೂ ನೇಮಿಸಲಾಗಿದೆ. ಅವರ ಸಹಕಾರದಿಂದ ಹಿಂದೂಗಳು ಹಬ್ಬ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಿದ್ದು, ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಮನ-ಮನೆಗಳಲ್ಲೂ ಸಂಭ್ರಮ: ಮೊಹರಂ ಹಬ್ಬದ ಅಂಗವಾಗಿ ಯುವಕರು, ಚಿಣ್ಣರು, ಅಂದ-ಚಂದದ ರಿಬ್ಬನ್‌ನಿಂದ ಸಿಂಗರಿಸಿದ ಕೊಡೆ ಹಿಡಿದು ಹೆಜ್ಜೆ ಕುಣಿತ, ನೃತ್ಯ, ಕೋಲಾಟ ಆಡುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆ ಬೆಳೆಯ ಕುರಿತ ಪವಾಡ ಮೈ ರೋಮಾಂಚನಗೊಳಿಸುತ್ತವೆ. ಹೊಟ್ಟೆ ಪಾಡಿಗೆ ಬೇರೆಡೆ ಗುಳೆ ಹೋದ ನಿವಾಸಿಗಳು, ಬುಡಕಟ್ಟು ಜನಾಂಗದವರು ಈ ಹಬ್ಬಕ್ಕೆ ಆಗಮಿಸುವುದು ವಿಶೇಷ. ಮೊಹರಂ ಗಂಧ, ಕತಲ್ ರಾತ್ರಿ, ಅಲಾಯಿ ದೇವರ ದಫನ್ ದಿನದವರೆಗೆ ಹಬ್ಬದ ಸಂಭ್ರಮ ಎಲ್ಲರ ಮನ-ಮನೆಗಳಲ್ಲಿ ಕಳೆಗಟ್ಟಿರುತ್ತದೆ.

ಮಳೆ ಬೆಳೆ ಕುರಿತು ಕಾರ್ಣಿಕ: ಹಬ್ಬದ ದಿನಗಳಲ್ಲಿ ಉಪವಾಸ ವ್ರತ ಮಾಡುವುದು. ಹೊಸಬಟ್ಟೆ ಖರೀದಿಸುವುದು. ದೀಡ್ ನಮಸ್ಕಾರ, ಬೇಡಿಕೊಂಡ ಹರಕೆ ತೀರಿಸುವುದು, ಅಲಾಯಿ ದೇವರಿಗೆ ಬೆಳ್ಳಿ ಛತ್ರಿ, ಬೆಳ್ಳಿ ಕುದುರೆ ಅರ್ಪಣೆ ಸೇರಿ ಸಕ್ಕರೆ, ಉಪ್ಪು, ಕೊಬ್ಬರಿ, ಕೆಂಪು ಸಕ್ಕರೆ ಮತ್ತು ಬೆಲ್ಲ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಲಾಯಿ ಕುಂಡದಲ್ಲಿ ಅಗ್ನಿ ಪ್ರವೇಶ, ತುಂಬಿದ ಕೊಡ ಮೇಲಕ್ಕೆತ್ತಿ ಮೈಮೇಲೆ ಸುರಿದುಕೊಳ್ಳುವ ಮೂಲಕ ಮಳೆ ಬೆಳೆ ಕುರಿತು ಕಾರ್ಣಿಕ ನುಡಿಯುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ತರಲಕಟ್ಟಿಯಲ್ಲಿ ಮಸೀದಿ ನಿರ್ಮಾಣ: ತರಲಕಟ್ಟಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳಿಲ್ಲದಿದ್ದರೂ ಮೊಹರಂ ಸಡಗರದಿಂದ ನಡೆಯುತ್ತದೆ. ಬೇರೆ ಊರಿನಿಂದ ಮುಲ್ಲಾಗಳನ್ನು ಕರೆಸಿ ಸಂಪ್ರದಾಯದಂತೆ ಹಬ್ಬ ಆಚರಿಸಲಾಗುತ್ತದೆ. ಹಳೆಯ ಕಾಲದಲ್ಲಿ ನಿರ್ಮಾಣಗೊಂಡಿದ್ದ ಮಸೀದಿ ಶಿಥಿಲಾವಸ್ಥೆಗೆ ಜಾರಿದ ಕಾರಣ ಗ್ರಾಮಸ್ಥರು ಮತ್ತು ಯುವಕರು ಸೇರಿಕೊಂಡು ನೂತನ ಮಸೀದಿ ನಿರ್ಮಿಸಿ ಉದ್ಘಾಟಿಸಲಾಗಿದೆ. ಪ್ರತಿ ವರ್ಷದಂತೆ ಮಸೀದಿಯಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ.

ಆಚರಣೆ ಎಲ್ಲೆಲ್ಲಿ?: ಮುಸ್ಲಿಂ ಕುಟುಂಬಗಳು ಇಲ್ಲದ ಊರುಗಳಾದ ತಾಲೂಕಿನ ತರಲಕಟ್ಟಿ, ಉಚ್ಚಲಕುಂಟಾ, ಹೊಸೂರು, ಬೋದೂರು, ಚಿಕ್ಕಮನ್ನಾಪುರ, ವನಜಭಾವಿ, ಗುಳೆ, ಗುಂಟಮಡು, ಶಿಡ್ಲಭಾವಿ, ಕೃಷ್ಣಾಪುರ, ಸಾಲಭಾವಿ, ಹುಲೆಗುಡ್ಡ, ನಿಲೋಗಲ್ ಗ್ರಾಮಗಳಲ್ಲಿ ಮುಸ್ಲಿಮರಿಲ್ಲದಿದ್ದರೂ ಮೋಹರಂ ಸಡಗರ ಸಂಭ್ರಮದಿಂದ ನಡೆಯುತ್ತದೆ.

ತಾಲೂಕಿನ ಗಡಿಗ್ರಾಮ ಬೋದೂರು ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿ ಮುಸ್ಲಿಂ ಕುಟುಂಬಗಳಿಲ್ಲ. ಭಕ್ತಿ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಪಕ್ಕದ ಊರಿನ ಮುಲ್ಲಾಸಾಬ್ ಅವರ ಸಹಕಾರದಿಂದ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಹಿರಿಯರ ಕಾಲದಿಂದಲೂ ಸರ್ವ ಜನಾಂಗದವರು ಸೇರಿ ಮೊಹರಂ ಆಚರಿಸುತ್ತೇವೆ ಎಂದು ಬೋದೂರು ಗ್ರಾಮಸ್ಥ ಎನ್. ಬಸವರಾಜ ತಿಳಿಸಿದ್ದಾರೆ.

ಯಲಬುರ್ಗಾ ತಾಲೂಕಿನ ತರಲಕಟ್ಟಿಯಲ್ಲಿ ಎರಡು ಮಸೀದಿಗಳಿವೆ. ಮೊಹರಂ ಅಂಗವಾಗಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಲು ಬೇರೆ ಊರಿನ ಮುಲ್ಲಾಗಳನ್ನು ಕರೆಸಿ ವಿಶಿಷ್ಟ ರೀತಿ ಹಬ್ಬ ಆಚರಿಸಲಾಗುತ್ತದೆ. ದವಸ-ಧಾನ್ಯಗಳ ಮೂಲಕ ಮಳೆ-ಬೆಳೆ ಬಗ್ಗೆ ಕಾರ್ಣಿಕ ತಿಳಿಯುತ್ತದೆ. ಭಕ್ತರು ಶ್ರದ್ಧೆಯಿಂದ ಬೇಡಿಕೊಂಡ ಹರಕೆ ತೀರಿಸುತ್ತಾರೆ ಎಂದು ತರಲಕಟ್ಟಿ ಗ್ರಾಮಸ್ಥ ಶ್ರೀಕಾಂತಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ