ಮೂಲ್ಕಿ: 50 ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆರಂಭಿಸಿದ ಮೂಲ್ಕಿ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು ಸುವರ್ಣ ಸಂಭ್ರಮಾಚರಣೆಗಾಗಿ ಶಾಸಕರ ಅನುದಾನದಿಂದ 5 ಲಕ್ಷ ರು. ನೀಡುವುದಾಗಿ ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಉದ್ಘಾಟಿಸಿ ಮಾತನಾಡಿ, ಅಯ್ಯಪ್ಪ ಸ್ವಾಮಿಯ ಭೇಟಿಗೆ ಸಾವಿರ ಕಿಮೀಗೂ ಅಧಿಕ ನಡೆದು ಯಾತ್ರೆ ಮಾಡುವ ಈ ದಿನಗಳಲ್ಲಿ ಯಾತ್ರೆಗೆ ಹೋಗಲಾಗದವರಿಗೆ ಮತ್ತು ಯಾತ್ರಾರ್ಥಿಗಳಿಗೆ ಸೌಲಭ್ಯ ನೀಡುವ ಈ ದೇಗುಲದ ಅಭಿವೃದ್ಧಿಗೆ ಸರ್ವ ಭಕ್ತರ ಸಹಕಾರದ ಅಗತ್ಯವಿದೆ ಎಂದರು.ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿಯ ಅಧ್ಯಕ್ಷ ಗೋಪಿನಾಥ ಪಡಂಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುವರ್ಣ ಸಂಭ್ರಮ ಅಂಗವಾಗಿ ಮಂದಿರದಲ್ಲಿ 5 ಸಾವಿರ ಲೀ. ನೀರಿನ ಟ್ಯಾಂಕ್, ತಗಡು ಶೀಟ್ ಮೆಲ್ಚಾವಣಿ, ತೀರ್ಥ ಮಂಟಪ ನವೀಕರಣ, ಸ್ವಾಗತ ಗೋಪುರ ನಿರ್ಮಾಣ ಹಾಗೂ 50ನೇ ವರ್ಷಾಚರಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಮರು 40 ಲಕ್ಷ ರು. ವೆಚ್ಚವಾಗಲಿದೆ ಎಂದರು. ಸಂಸ್ಥೆಯ ಪೂರ್ವಾಧ್ಯಕ್ಷ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಮಂದಿರದ ಗುರುಸ್ವಾಮಿ ಗಿರೀಶ್ ಪಲಿಮಾರು ಮತ್ತಿತರರಿದ್ದರು.
ನವೀನ್ ಪುತ್ರನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.