ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕಾರ್ಕಳ ತಾಲೂಕಿನ ಮುಂಡ್ಕೂರಿನ ಜಿ.ಎಸ್.ಬಿ ಸಮಾಜ ಸೇವಾ ಸಂಘ ಸಚ್ಚೇರಿಪೇಟೆ ವತಿಯಿಂದ ಸಂಪೂರ್ಣ ನವೀಕೃತ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂದಿರ ಪುನಃ ಪ್ರತಿಷ್ಠಾ ಸಂಭ್ರಮ ಜ.30ರಿಂದ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆಬ್ರವರಿ 8ರ ವರೆಗೆ ನಡೆಯಲಿದೆ.ಫೆ.2ರಂದು ಮಾಘ ಶುದ್ಧ (ವಸಂತ ಪಂಚಮಿ)ದ ಬೆಳಗ್ಗೆ 8.30ರ ಕುಂಭ ಲಗ್ನದ ಸುಮುಹೂರ್ತದಲ್ಲಿ ಪೂಜ್ಯ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರಿಂದ ಶ್ರೀ ಮಹಾಗಣಪತಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಪುನರ್ ಪ್ರತಿಷ್ಠೆ ನೆರವೇರಲಿದೆ.
ಗುರುವಾರ ನೂತನ ರಜತ ಸಿಂಹಾಸನ, ಪ್ರಭಾವಳಿ ಹಾಗೂ ಶಿಖರವನ್ನು ಮೆರವಣಿಗೆಯ ಮೂಲಕ ಮುಂಡ್ಕೂರು ಶ್ರೀ ವಿಠೋಬ ದೇವಸ್ಥಾನದಿಂದಭಜನಾ ಮಂದಿರಕ್ಕೆ ತರಲಾಗಿದ್ದು ಧಾರ್ಮಿಕ ಕಾರ್ಯಗಳು ಆರಂಭಗೊಂಡಿವೆ.ಜ.31ರಂದು ಶುಕ್ರವಾರ ವೆಂಕಟೇಶ ಹವನ, ಲಘು ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಧಾರ್ಮಿಕ ಹವನಾದಿ ಕಾರ್ಯಗಳು, ಸಂಜೆ ಮೂಲ್ಕಿಯ ರವೀಂದ್ರ ಪ್ರಭು ಮತ್ತು ಬಳಗದವರಿಂದ ಭಜನ್ ಸಂಧ್ಯಾ ನಡೆಯಲಿದೆ.
ಫೆ.1ರಂದು ಶ್ರೀದೇವರಿಗೆ ನೂತನ ವಸಂತ ಮಂಟಪ ಸಮರ್ಪಣೆ, ಶತಕಲಶಾಭಿಷೇಕ, ಸಾನಿಧ್ಯ ಹವನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಪುತ್ತೂರು ನರಸಿಂಹ ನಾಯಕ್ ಬೆಂಗಳೂರು ಮತ್ತು ಬಳಗದವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿದೆ. ಫೆ.2ರಂದು ಮುಂಜಾನೆ 5.30ಕ್ಕೆ ಪ್ರಾರ್ಥನೆ, ದೇವರಿಗೆ ಪಂಚಾಮೃತ ಅಭಿಷೇಕ, ಪ್ರತಿಷ್ಠಾ ಕಲಶ ಪೂಜನ, ಪ್ರತಿಷ್ಠಾ ಹೋಮ ಮಹಾಪೂರ್ಣಾಹುತಿ ನಡೆಯಲಿದೆ.8 ಗಂಟೆಗೆ ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮನ, ದ್ವಾರ ಲಕ್ಷ್ಮೀ ಪೂಜೆ, ಗೋದಾನ, ಮುಹೂರ್ತ ನಿರೀಕ್ಷಣ, ಬೆಳಗ್ಗೆ 8.30ರ ಕುಂಭ ಲಗ್ನದಲ್ಲಿ ದೇವರ ಪುನರ್ ಪ್ರತಿಷ್ಠೆ, ಶ್ರೀದೇವರ ಪ್ರಸನ್ನ ಪೂಜೆ, ಅಷ್ಠಮಂಗಲ ನಿರೀಕ್ಷಣ, ಶ್ರೀದೇವರಿಗೆ ಪಟ್ಟಕಾಣಿಕೆ, ಗುರುಕಾಣಿಕೆ, ಸಭಾ ಕಾರ್ಯಕ್ರಮ ನಡೆಯಲಿದೆ.
ಫೆ.3ರಂದು ದೇವರ ಮೂಲ ಪ್ರತಿಷ್ಠಾ ವರ್ಧಂತ್ಯುತ್ಸವ, ಕಲಶಾಭಿಮಂತ್ರಣ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಸಾನಿಧ್ಯ ಹೋಮ, ಶ್ರೀದೇವರಿಗೆ ದ್ವಾದಶ ಕಲಶಾಭಿಷೇಕ ನಡೆಯಲಿದೆ.ಫೆ.8ರಂದು ಭಜನಾ ಮಂಗಲೋತ್ಸವ ನಡೆಯಲಿದೆ. ರಾಮಚಂದ್ರ ನಾಯಕ್ ಅಧ್ಯಕ್ಷತೆಯಲ್ಲಿ ಬಿ. ಶ್ರೀಕಾಂತ್ ಕಾಮತ್ (ಉಪಾಧ್ಯಕ್ಷರು), ಅಭಿಜತ್ ಶೆಣೈ (ಕಾರ್ಯದರ್ಶಿ), ವಿನೋದ್ ಶೆಣೈ (ಜೊತೆ ಕಾರ್ಯದರ್ಶಿ), ನರಸಿಂಹ ಭಂಡಾರ್ಕರ್ (ಕೋಶಾಧಿಕಾರಿ) ಹಾಗೂ ಸದಸ್ಯರ ಜಿ.ಎಸ್.ಬಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಪ್ರತಿಷ್ಠಾ ಸಂಭ್ರಮ ನಡೆಯಲಿದೆ. ಸಂಕೀರ್ತನೆಯ ಶ್ರೇಯಸ್ಸು
ಸಚ್ಚೇರಿಪೇಟೆಯಲ್ಲಿ 1990ರಲ್ಲಿ ಮುಂಡ್ಕೂರು ದೇವದಾಸ ಪ್ರಭು ಅವರ ಪ್ರೇರಣೆಯಿಂದ ಸಂಘಟಿತವಾದ ಭಜನಾ ಮಂಡಳಿ ದಿ. ಸುಂದರ ನಾಯಕ್ ಅವರ ಪ್ರೋತ್ಸಾಹದಿಂದ ನೆಲೆ ಕಂಡು ನಿಡ್ಡೋಡಿ ವಿಠಲ ನಾಯಕ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡಿತು. ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ದರ್ಶನ ಪ್ರಸಾದದೊಂದಿಗೆ ಉದಯಿಸಿದ್ದೇ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ. 2002ರಲ್ಲಿ ಶ್ರೀ ಗೋಕರ್ಣ ಮಠಾಧೀಶರಾಗಿದ್ದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಂದ ಮಂದಿರ ಉದ್ಘಾಟನೆಗೊಂಡಿತ್ತು. ನಿರಂತರ ಶ್ರೀ ಕಾಶೀಮಠ, ಶ್ರೀ ಗೋಕರ್ಣ ಹಾಗೂ ಶ್ರೀ ಕೈವಲ್ಯ ಮಠದ ಹರಿಗುರು ಸೇವೆ, ದೇಶದ ಉದ್ದಗಲ ಪವಿತ್ರ ಕ್ಷೇತ್ರಗಳಲ್ಲಿಯೂ ಸಂಕೀರ್ತನಾ ಸೇವೆಯ ಫಲ ಎಂಬಂತೆ ಇದೀಗ 60 ಲಕ್ಷ ರು. ಯೋಜನೆ 2 ಕೋಟಿ ರು. ವೆಚ್ಚದಲ್ಲಿ ಮನಮೋಹಕ ನೂತನ ಮಂದಿರ ಲೋಕಾರ್ಪಣೆಗೆ ಸಜ್ಜಾಗಿದೆ.