ಗುರು ವಂದನೆ-ಸ್ನೇಹ ಸಮ್ಮಿಲನ ಸಮಾರಂಭ
ಕನ್ನಡಪ್ರಭ ವಾರ್ತೆ ಕಾರಟಗಿ
ಒಂದು ದೇಶದ ಅಭಿವೃದ್ಧಿ ಶೈಕ್ಷಣಿಕ ಗುಣಮಟ್ಟ ಆಧರಿಸಿರುತ್ತದೆ. ಬೆಳವಣಿಗೆ, ಅಭಿವೃದ್ಧಿಯ ಹಿಂದೆ ನಮಗೆ ಕಲಿಸಿದ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರು ನಮಗೆ ನೀಡಿದ ಪ್ರೀತಿ, ವಿಶ್ವಾಸ, ನೀಡಿದ ಜ್ಞಾನಕ್ಕೆ ನಾವು ಎಂದೆಂದೂ ಚಿರಋಣಿಯಾಗಿರಬೇಕು ಎಂದು ಸಾಹಿತಿ ಪ್ರೊ. ಸಿದ್ದು ಯಾಪಲಪರವಿ ಹೇಳಿದರು.ಇಲ್ಲಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸರ್ಕಾರಿ ಪ್ರೌಢಶಾಲೆಯ ೧೯೮೦ರ ಸಾಲಿನ ವಿದ್ಯಾರ್ಥಿಗಳ ಗುರು ವಂದನೆ-ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿದರು.
ಅಂದಿನ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರು ಈಗ ದೊರೆಯುವುದಿಲ್ಲ. ಆದರೆ, ಅಂಥ ವಾತಾವರಣ ಸೃಷ್ಟಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಕಾಲದ ಶಿಕ್ಷಕರು ಕಲ್ಲಾಗಿದ್ದ ನಮಗೆ ಮೂರ್ತಿ ಸ್ವರೂಪ ನೀಡಿದ್ದರಿಂದ ಶಿಲ್ಪವಾಗಿ ಅರಳಿ, ನಮ್ಮಂತಹ ನೂರಾರು ಶಿಷ್ಯಂದಿರು ನಮ್ಮದೇ ಆದ ಕ್ಷೇತ್ರಗಳಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಲು ಸಾಧ್ಯವಾಯಿತು.ಕಾರಟಗಿ ಭೌತಿಕವಾಗಿ ಅತ್ಯಂತ ಶ್ರೀಮಂತ ಊರು. ಆದರೆ, ಇದನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಹೊಣೆ ನಮ್ಮ ಮೇಲಿದೆ. ಮುಂದಿನ ದಿನಗಳಲ್ಲಿ ನಾವೆಲ್ಲ ಹಳೆಯ ವಿದ್ಯಾರ್ಥಿಗಳು ಕಾರಟಗಿಯ ಬೆಳವಣಿಗೆ ಶ್ರಮಿಸೋಣ ಎಂದರು.
ಸನ್ಮಾನಕ್ಕೆ ಒಳಗಾದ ಗುರುಗಳ ಪರವಾಗಿ ನಿವೃತ್ತ ಅಧಿಕಾರಿ ಸೂಗಪ್ಪ ಅರ್ಕಸಾಲಿ ಮಾತನಾಡಿ, ಕಾರಟಗಿಯಲ್ಲಿ ಅರವತ್ತರ ದಶಕದಲ್ಲಿ ಖಾಸಗಿ ಹೈಸ್ಕೂಲ್ ಆರಂಭ ಮಾಡಲಾಗಿತ್ತು. ನಂತರ ಅದನ್ನು ಸರಕಾರಕ್ಕೆ ಹಸ್ತಾಂತರ ಮಾಡಿದ ಇತಿಹಾಸವನ್ನು ವಿವರಿಸಿದರು.ಹಿರಿಯ ವಿದ್ಯಾರ್ಥಿ ಪ್ರಾಣೇಶ ಮುತಾಲಿಕ ಮಾತನಾಡಿ, ಶಿಕ್ಷಕರ ಶ್ರೇಷ್ಠವಾದ ವಿಚಾರಗಳಿಂದ ಹೊರ ಹೊಮ್ಮಿ ನಮ್ಮ ಬದುಕು ಕಟ್ಟಿಕೊಂಡಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಶವಾವಸ್ಥೆಯಲ್ಲಿದ್ದ ಕಾಲಘಟ್ಟದಲ್ಲಿ ನಮ್ಮ ಕಾರಟಗಿ ಪ್ರೌಢಶಾಲೆ, ಶಿಕ್ಷಕರಿಂದ ಚಾರಿತ್ರಿಕ ಇತಿಹಾಸ ನಿರ್ಮಾಣವಾಗಿದೆ ಎಂದರು.
ಶಿವಕುಮಾರ ದಿವಟರ್, ಗುರುಸಿದ್ದಪ್ಪ ಯರಕಲ್, ಮುರಾರಿ ಸೇರಿದಂತೆ ದೇಶ ವಿದೇಶಗಳಲ್ಲಿ ನೆಲೆಸಿರುವ ಅರವತ್ತರ ಗಡಿಯಲ್ಲಿ ಇರುವ ಹಿರಿಯ ಗೆಳೆಯರು ನಾಲ್ಕೂವರೆ ದಶಕದ ಹಿಂದಿನ ನೆನಪುಗಳನ್ನು ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಾಂತಮೂರ್ತಿ ಕುಲಕರ್ಣಿ ಅಂದಿನ ಶಿಕ್ಷಕರ ಕಾಳಜಿ, ಶಿಸ್ತು ಮತ್ತು ಪ್ರಾಮಾಣಿಕತೆ ಸ್ಮರಿಸಿದರು. ಶಿಕ್ಷಕರಾದ ಸೋಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಗುರುಗಳಾದ ಮಲ್ಲಿಕಾರ್ಜುನ ವಿ. ತಿಮ್ಮಾಪುರ, ವೀರಭದ್ರಪ್ಪ ಬಂಡ್ರೊಳ್ಳಿ, ಸೂಗಪ್ಪ ಕಾರಟಗಿ ಅವರನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.
ವಿಶೇಷವಾಗಿ ಕಲಿಸಿದ ಗುರುಗಳಿಂದ ಉನ್ನತ ಸ್ಥಾನ ಅಲಂಕರಿಸಿ ಇತ್ತೀಚಿಗೆ ನಿವೃತ್ತರಾದ ಹಳೆಯ ವಿದ್ಯಾರ್ಥಿಗಳಾದ ಸಿದ್ದು ಯಾಪಲಪರವಿ, ರಮೇಶ ಬಿ. ಗುರಿಕಾರ, ಸೋಮಲಿಂಗಪ್ಪ ಜಿ., ನಾಗೇಶ ಜೋಷಿ, ಪ್ರಾಣೇಶ ಮುತಾಲಿಕ್, ವೀರೇಶ ಮ್ಯಾಗೇರಿ ಅವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ವೀರೇಶಯ್ಯ ಯರಡೋಣಿ, ವೆಂಕೋಬ ಶ್ರೇಷ್ಠಿ, ವೀರೇಶಪ್ಪ ನಡುವಿ, ಶರಣಪ್ಪ ಟಿ, ಪಂಪನಗೌಡ ಅಂಗಡಿ, ಪಂಪಾಪತಿ ಸಜ್ಜನ್, ನಾಗರಾಜ್ ಕಾಗಲಕರ್, ನಾಗೇಶ ಜೋಷಿ, ರಮೇಶ ಗುರಿಕಾರ, ಪಂಪಾಪತಿ ಗದ್ದಿ, ಶಿವಶರಣಪ್ಪ ಕುಲಕರ್ಣಿ, ಸಂಗಪ್ಪ ಕಂಪ್ಲಿ, ವೀರಪ್ಪ ಸಜ್ಜನ್, ಸಂಗಮೇಶಗೌಡ, ಹುರಕಡ್ಲಿ ಲಿಂಗಪ್ಪ ಇನ್ನಿತರರು ಇದ್ದರು.
ವೀರೇಶ ಮ್ಯಾಗೇರಿ, ಸವಿತಾ ಹಿರೇಮಠ ಮತ್ತು ಮಹಿಬೂಬ್ ಕಿಲ್ಲೇದಾರ್ ಕಾರ್ಯಕ್ರಮ ನಿರ್ವಹಿಸಿದರು.