ಆರೇ ತಿಂಗಳಲ್ಲಿ ಪಾಲಿಕೆ ಆಯುಕ್ತ ಘಾಳಿ ವರ್ಗ

KannadaprabhaNewsNetwork |  
Published : Jun 18, 2025, 11:49 PM ISTUpdated : Jun 18, 2025, 11:50 PM IST
ಘಾಳಿ | Kannada Prabha

ಸಾರಾಂಶ

ಸೂಪರ್‌ ಟೈಂ ಸ್ಕೇಲ್‌ ದರ್ಜೆಯ ಡಾ. ರುದ್ರೇಶ ಘಾಳಿ ಅವರಿಗೆ ಐಎಎಸ್‌ ಪ್ರಮೋಷನ್‌ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಅವರು ಇದನ್ನು ಖಚಿತಪಡಿಸಿದ್ದರು ಕೂಡ. ಇದೇ ತಿಂಗಳು ಕೊನೆ ಇಲ್ಲವೇ ಆಗಸ್ಟ್‌ ತಿಂಗಳಲ್ಲಿ ಪ್ರಮೋಷನ್‌ ಸಿಗಲಿದೆ ಎನ್ನಲಾಗುತ್ತಿದೆ.

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯಿಂದ ಪಾಲಿಕೆ ಆಯುಕ್ತರಾಗಿ ಬಂದು ಆರು ತಿಂಗಳೊಳಗೆ ರುದ್ರೇಶ ಘಾಳಿ ವರ್ಗಾವಣೆಗೊಂಡಿದ್ದಾರೆ!

ಘಾಳಿ ವರ್ಗಾವಣೆಯಿಂದ ಎರಡೇ ವರ್ಷದಲ್ಲಿ ಇಬ್ಬರು ಆಯುಕ್ತರನ್ನು ಮಹಾನಗರ ಪಾಲಿಕೆ ಕಂಡಂತಾಗಿದೆ. ಆದರೆ, ಇದೀಗ ಆಯುಕ್ತರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಯಾರನ್ನೂ ನಿಯೋಜಿಸಿಲ್ಲ. ಯಾರು ಬರುತ್ತಾರೆ. ಅವರೆಷ್ಟು ದಿನ ಇರುತ್ತಾರೆ ಎಂಬ ಕುತೂಹಲ ಮಹಾನಗರದಲ್ಲಿ ಮೂಡಿದೆ.

ಸ್ಮಾರ್ಟ್‌ಸಿಟಿ ಎಂಡಿಯಾಗಿದ್ದ ಡಾ. ರುದ್ರೇಶ ಘಾಳಿ ಜನವರಿ 25ರಂದು ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ಇದ್ದ ಡಾ. ಈಶ್ವರ ಉಳ್ಳಾಗಡ್ಡಿ ಎರಡು ವರ್ಷ ಪೂರ್ಣಗೊಳ್ಳುವ ಮುನ್ನವೇ ಅಂದರೆ ಒಂದುವರೆ ವರ್ಷದಲ್ಲೇ ಟ್ರಾನ್ಸ್‌ಫರ್‌ ಆಗಿದ್ದರು. ಇದೀಗ ಘಾಳಿ ಆರು ತಿಂಗಳೊಳಗೆ ವರ್ಗಾವಣೆಗೊಂಡಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ. ಜತೆಗೆ ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ಆಯುಕ್ತರ ವರ್ಗಾವಣೆ ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಸದಸ್ಯರು ಬುಧವಾರ ರಾತ್ರಿ ಪಾಲಿಕೆ ಕಚೇರಿಗೆ ದೌಡಾಯಿಸುತ್ತಿದ್ದುದು ಕಂಡು ಬಂತು.

ಡಾ. ರುದ್ರೇಶ ಘಾಳಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಲ್ಲಿದ್ದ ಜಯಶ್ರೀ ಶಿಂತ್ರೆ ಅವರನ್ನು ವರ್ಗಾಯಿಸಿದ್ದು, ಯಾವುದೇ ಹುದ್ದೆ ತೋರಿಸಿಲ್ಲ. ಡಾ. ಘಾಳಿ ಅವರಿಂದ ತೆರವಾಗಿರುವ ಪಾಲಿಕೆ ಆಯುಕ್ತ ಸ್ಥಾನಕ್ಕೂ ಸರ್ಕಾರ ಇನ್ನೂ ಯಾರನ್ನು ನೇಮಿಸಿಲ್ಲ. ಹೀಗಾಗಿ ಪಾಲಿಕೆ ಆಯುಕ್ತರಾಗಿ ಯಾರು ಬರುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ಆದರೆ, ರುದ್ರೇಶ ಘಾಳಿ ಪಾಲಿಕೆಯಲ್ಲಿ ಆರ್ಥಿಕ ಶಿಸ್ತನ್ನು ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಜತೆಗೆ ಅದರಲ್ಲಿ ಕೆಲವೊಂದಿಷ್ಟು ಯಶಸ್ವಿ ಕೂಡ ಆಗಿದ್ದರು ಎಂಬ ಮಾತು ಪಾಲಿಕೆ ಸದಸ್ಯರಿಂದಲೇ ಬರುತ್ತದೆ.

ವರ್ಗಾವಣೆ ಗುಸು ಗುಸು: ಡಾ. ರುದ್ರೇಶ ಘಾಳಿ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಪಾಲಿಕೆಯಿಂದ ವರ್ಗಾವಣೆ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎಂಬ ಗುಲ್ಲು ಹಬ್ಬಿತ್ತು. ಈ ಸಂಬಂಧ ತಮ್ಮ ಆಪ್ತರೆದುರು ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.

ಐಎಎಸ್‌ ಪ್ರಮೋಷನ್‌..?: ಸೂಪರ್‌ ಟೈಂ ಸ್ಕೇಲ್‌ ದರ್ಜೆಯ ಡಾ. ರುದ್ರೇಶ ಘಾಳಿ ಅವರಿಗೆ ಐಎಎಸ್‌ ಪ್ರಮೋಷನ್‌ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಅವರು ಇದನ್ನು ಖಚಿತಪಡಿಸಿದ್ದರು ಕೂಡ. ಇದೇ ತಿಂಗಳು ಕೊನೆ ಇಲ್ಲವೇ ಆಗಸ್ಟ್‌ ತಿಂಗಳಲ್ಲಿ ಪ್ರಮೋಷನ್‌ ಸಿಗಲಿದೆ ಎನ್ನಲಾಗುತ್ತಿದೆ.

ಐಎಎಸ್‌ ಕೆಡರ್‌ ಅಧಿಕಾರಿಯನ್ನೇ ನೇಮಿಸಿ: ಪಾಲಿಕೆ ಏನೆಂಬುದನ್ನು ತಿಳಿದುಕೊಳ್ಳಬೇಕೆಂದರೆ 3 ತಿಂಗಳು ಬೇಕಾಗುತ್ತದೆ. ಆಮೇಲೆ ಕೆಲಸ ಶುರು ಮಾಡಬೇಕೆನ್ನುವಷ್ಟರಲ್ಲೇ ವರ್ಗಾವಣೆ ಮಾಡಿದರೆ ಪಾಲಿಕೆಯನ್ನು ಸುಧಾರಣೆಗೊಳಿಸುವುದಾದರೂ ಹೇಗೆ? ಕನಿಷ್ಠ ಪಕ್ಷ 2-3 ವರ್ಷವಾದರೂ ಆಯುಕ್ತರನ್ನು ವರ್ಗ ಮಾಡಬಾರದು. ಜತೆಗೆ ಐಎಎಸ್‌ ಕೇಡರ್‌ನ ಅಧಿಕಾರಿಯನ್ನೇ ಆಯುಕ್ತರನ್ನಾಗಿ ನೇಮಿಸಬೇಕು ಎಂದು ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಆಗ್ರಹಿಸುತ್ತಾರೆ.

ಸ್ಮಾರ್ಟ್‌ ಆಗಿ ಕೆಲಸ ಮುಗಿಸಿ ಹೊರಟ ಘಾಳಿ!:

ಸ್ಮಾರ್ಟ್‌ಸಿಟಿ ಎಂಡಿ ಆಗಿದ್ದ ರುದ್ರೇಶ ಘಾಳಿ ಅವರನ್ನು ಆಯುಕ್ತರನ್ನಾಗಿ ನೇಮಿಸಿದ ವೇಳೆ ಪಾಲಿಕೆ ಸದಸ್ಯರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಅಪಸ್ವರ ಕೇಳಿ ಬಂದಿತ್ತು. ಏಕೆಂದರೆ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಪಾಲಿಕೆ ಸದಸ್ಯರು, ಸಾರ್ವಜನಿಕರಲ್ಲಿ ಆಕ್ರೋಶವಿತ್ತು. ಸ್ಮಾರ್ಟ್‌ಸಿಟಿ ಕೆಲಸಗಳನ್ನು ಹಸ್ತಾಂತರಿಸಿಕೊಳ್ಳದಿರಲು ಪಾಲಿಕೆ ನಿರ್ಧರಿಸಿತ್ತು. ಜತೆಗೆ ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆಗೆ ಸದನ ಸಮಿತಿಯನ್ನೂ ರಚಿಸಿತ್ತು. ಆ ವೇಳೆಯಲ್ಲೇ ರುದ್ರೇಶ ಘಾಳಿ ಆಯುಕ್ತರಾಗಿ ಬಂದಿರುವುದಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು. ಸಾಮಾನ್ಯಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪವಾಗಿತ್ತು. ಆರೇ ತಿಂಗಳಲ್ಲೇ ಪಾಲಿಕೆ ಆಯುಕ್ತರ ವರ್ಗವಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸ್‌ವನ್ನುಂಟು ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ