ಕನ್ನಡಪ್ರಭ ವಾರ್ತೆ ಕೊಪ್ಪಳ
ಇಲ್ಲಿಯ ನಗರಸಭೆಯ 8 ಮತ್ತು 11ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲುವ ಮೂಲಕ ಎರಡು ಪಕ್ಷಕ್ಕೂ ಹಾನಿಯೂ ಇಲ್ಲ, ಲಾಭವೂ ಇಲ್ಲದಂತೆ ಆಗಿದೆ.11ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಗೆಲುವು:
11ನೇ ವಾರ್ಡಿನಲ್ಲಿ ರಾಜಶೇಖರ ಆಡೂರು ಬಿಜೆಪಿ ಸದಸ್ಯರಾಗಿದ್ದರು. ಕಾಂಗ್ರೆಸ್ ಸೇರಿದ್ದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ, ಪುನಃ ಜಯ ಸಾಧಿಸಿದ್ದಾರೆ. ಹೀಗಾಗಿ, ಇದು ಬಿಜೆಪಿಯ ಸ್ಥಾನ ಕಾಂಗ್ರೆಸ್ ಪಾಲಾದಂತೆ ಆಗಿದೆ.ರಾಜಶೇಖರ ಆಡೂರು ಅವರಿಗೆ 517 ಮತ ಬಂದಿದ್ದರೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಚನ್ನಬಸಪ್ಪಗಾಳಿ ಅವರಿಗೆ ಕೇವಲ 165 ಮತ ಬಂದಿದ್ದು, ನೋಟಾಗೆ 25 ಮತಗಳು ಬಿದ್ದಿವೆ.
8ನೇ ವಾರ್ಡ್:ಇಲ್ಲಿ ಕಾಂಗ್ರೆಸ್ ಸದಸ್ಯೆ ಸುನಿತಾ ಗಾಳಿ ಸರ್ಕಾರಿ ನೌಕರಿ ಬಂದಿದ್ದರಿಂದ ರಾಜೀನಾಮೆ ನೀಡಿದ್ದರು. ಹೀಗಾಗಿ ಇದಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಳೆದ ಬಾರಿ ಪರಾಭವಗೊಂಡಿದ್ದ ಕವಿತಾ ಗಾಳಿ ಪುನಃ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನ ರೇಣುಕಾ ಪೂಜಾರ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಕವಿತಾ ಗಾಳಿ 486 ಮತ ಪಡೆದಿದ್ದರೇ ಕಾಂಗ್ರೆಸ್‌ನ ರೇಣುಕಾ ಪೂಜಾರ 436 ಮತ ಪಡೆದಿದ್ದಾರೆ.ವಿಜಯೋತ್ಸವ:
11ನೇ ವಾರ್ಡಿನಲ್ಲಿ ಕಾಂಗ್ರೆಸ್‌ನವರು ವಿಜಯೋತ್ಸವ ಆಚರಣೆ ಮಾಡಿದರೇ 8ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು.ಕಾರಟಗಿ ಪುರಸಭೆ ಉಪಚುನಾವಣೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು:ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಕಾರಟಗಿ ಪುರಸಭೆ ೨೧ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ ಭಜಂತ್ರಿ ಜಯಗಳಿಸಿದ್ದಾರೆ.ಇಲ್ಲಿನ ವಿಶೇಷ ಎಪಿಎಂಸಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಮತ ಎಣಿಕೆಯ ನಂತರ ಚುನಾವಣಾಧಿಕಾರಿ ಎಚ್. ಮಲ್ಲಿಕಾರ್ಜುನ ಫಲಿತಾಂಶ ಪ್ರಕಟಿಸಿದರು.ವಾರ್ಡ್‌ನಲ್ಲಿನ ಒಟ್ಟು ೯೭೭ ಮತದಾರರ ಪೈಕಿ ೭೫೧ ಜನರು ಮತ ಚಲಾಯಿಸಿದ್ದರು. ಮತ ಎಣಿಕೆ ನಡೆದು ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್‌ನ ಸುರೇಶ್ ಭಜಂತ್ರಿಗೆ 432 ಮತ್ತು ಬಿಜೆಪಿ ಬೆಂಬಲಿತ ಬಿ.ಎಂ. ಯಲ್ಲಪ್ಪಗೆ 310 ಮತ ಪಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ೧೨೨ ಮತಗಳ ಭಾರಿ ಅಂತರದಲ್ಲಿ ಆಯ್ಕೆಯಾಗಿದ್ದಾರೆ. ೦೯ ನೋಟಾ ಮತಗಳು ಚಲಾವಣೆಯಾಗಿವೆ.
ವಾರ್ಡ್ ನಂ. ೨೧ರ ಸದಸ್ಯರಾಗಿದ್ದ ಕಾಂಗ್ರೆಸ್‌ನ ರಾಮಣ್ಣ ಕೊರವರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾರಣಕ್ಕೆ ನ.೨೩ರಂದು ಉಪ ಚುನಾವಣೆ ನಡೆದಿತ್ತು. ಆ ಮೂಲಕ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದೆ.ವಿಜಯೋತ್ಸವ:
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಎಪಿಎಂಸಿ ಯಾರ್ಡ್, ಕನಕದಾಸ ವೃತ್ತ ಹಾಗೂ ಅಬ್ದುಲ್ ನಜೀರಸಾಬ್ ಕಾಲನಿಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ಪಕ್ಷದ ಮುಖಂಡ ಶರಣಪ್ಪ ಪರಕಿ, ಪುರಸಭೆ ಸದಸ್ಯರಾದ ಸಂಗನಗೌಡ, ಸಿದ್ದಪ್ಪ ಬೇವಿನಾಳ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ್, ಶ್ರೀನಿವಾಸ ಗೋಮರ್ಸಿ, ಅಮ್ಜದ್ ಕಪಾಲಿ, ಅಮ್ರುಲ್ ಹುಸೇನ್, ಶಬ್ಬೀರ್ ಚಳ್ಳೂರು, ನಾಗರಾಜ್ ಭಜಂತ್ರಿ, ರಜಬ್ ಅಲಿ, ಮಲ್ಲಪ್ಪ ಭಜಂತ್ರಿ, ಮಹಾಂತೇಶ ಅಂಗಡಿ, ಕಂಠೆಪ್ಪ ನಾಯಕ್ ಇತರರು ಇದ್ದರು.