ರಾಮನಗರ: ಜಿಲ್ಲಾ ಕೇಂದ್ರ ರಾಮನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ರೂಪಿಸಲು ಪಣ ತೊಟ್ಟಿರುವ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಗುರುವಾರ ಮಂಡಿಸಿದ ಆಯವ್ಯಯದಲ್ಲಿ ಆಟೋ ಟಿಪ್ಪರ್‌ಗಳ ಮೂಲಕ ಮನೆಮನೆ ತ್ಯಾಜ್ಯ ಸಂಗ್ರಹಣೆಯನ್ನು ಡಿಜಿಟಲ್ ಮೇಲ್ವಿಚಾರಣೆ ಮಾಡಲು ಆಸಕ್ತಿ ತೋರಿದ್ದಾರೆ.
ನಗರಸಭಾ ವ್ಯಾಪ್ತಿಯ 10 ಸ್ಥಳಗಳಲ್ಲಿ ವಾರ್ಡ್- ಸಮುದಾಯ ಮಟ್ಟದಲ್ಲಿ ಹಸಿ ತ್ಯಾಜ್ಯ ಸಂಸ್ಕರಿಸುವುದರ ಮೂಲಕ ನಾಗರಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಸಲುವಾಗಿ ಸಮುದಾಯ ಕಾಂಪೋಸ್ಟ್ ಘಟಕಗಳನ್ನು ನಿರ್ಮಾಣ ಮಾಡಲಾಗುವುದು.
ಬಯೋಗ್ಯಾಸ್ ಘಟಕ ಸ್ಥಾಪನೆಗೆ ಸಬ್ಸಿಡಿ:ನಗರದ ಐಜೂರು ವೃತ್ತದ ಸಮೀಪ ಸ್ಮಾರ್ಟ್ ಬಸ್ ಸ್ಟಾಪ , ಸಾರ್ವಜನಿಕ ಉದ್ಯಾನವನಗಳಲ್ಲಿ ಸ್ಮಾರ್ಟ್ ಬೆಂಚ್ ಅಳವಡಿಸುವುದು. ಅಡುಗೆ ಮನೆ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪತ್ತಿ ಮಾಡಿ ಅದನ್ನು ಅಡುಗೆಗೆ ಇಂಧನವಾಗಿ ಬಳಕೆಗೆ ನೆರವಾಗಲು 100 ಮನೆಗಳಲ್ಲಿ 2 ಕೆ.ಜಿ. ಸಾಮರ್ಥ್ಯದ ಬಯೋಗ್ಯಾಸ್ ಘಟಕ ಸ್ಥಾಪಿಸಲು ಸಬ್ಸಿಡಿ ಯೋಜನೆ ರೂಪಿಸಲಾಗಿದೆ. ಒಂದು ಬಯೋ ಗ್ಯಾಸ್ ಘಟಕ ಸ್ಥಾಪನೆಗೆ 30 ಸಾವಿರ ವೆಚ್ಚ ತಗುಲಲಿದ್ದು, 15 ಸಾವಿರ ಸಬ್ಸಿಡಿಯಂತೆ 15 ಲಕ್ಷ ರುಪಾಯಿಗಳಾಗಲಿದೆ.
ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸಲು ಸುಮಾರು 5 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಮರು ಬಳಕೆಯ ಬಟ್ಟೆ ಕೈ ಚೀಲಗಳಿಗಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ವೆಂಡಿಂಗ್ ಮಿಷನ್ ಅಳಡಿಸಲು ಉದ್ದೇಶಿಸಲಾಗಿದೆ.
ನಗರದ ಕೆಂಪೇಗೌಡ ವೃತ್ತದಲ್ಲಿ ನೀರಿನ ಕಾರಂಜಿಯಿಂದ ಕೂಡಿದ ಫೌಂಟೇನ್ , ವಾಟರ್ ಟ್ಯಾಂಕ್ ವೃತ್ತದಲ್ಲಿ ಕ್ಲಾಕ್ ಟವರ್ ಸ್ಥಾಪಿಸಿ ನಗರದ ಪಾರಂಪರಿಕತೆಯನ್ನು ಹೆಚ್ಚಿಸಲು, ಹಳೇ ಬಸ್ ನಿಲ್ದಾಣದ ಬಳಿಯಿರುವ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರವರ ಪ್ರತಿಮೆಯ ವೃತ್ತವ್ನು ದೀಪಾಲಂಕಾರದ ಮೂಲಕ ಸುಂದರೀಕರಣಗೊಳಿಸಲು ಉದ್ದೇಶಿಸಲಾಗಿದೆ.
5ಕೆಆರ್ ಎಂಎನ್ 3.ಜೆಪಿಜಿ