ಗದಗ: ಗದಗ -ಬೆಟಗೇರಿ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿ, ಅತ್ಯಂತ ಕುತೂಹಲಕಾರಿ ಘಟ್ಟ ತಲುಪಿದ್ದ ನಗರಸಭೆ ಸದಸ್ಯರ ಅನರ್ಹತೆ ಪ್ರಕರಣ ಕುರಿತಂತೆ ಧಾರವಾಡ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಮೂವರು ಸದಸ್ಯರ ಅನರ್ಹತೆಯನ್ನು ರದ್ದುಗೊಳಿಸಿ ಬುಧವಾರ ಆದೇಶಿಸಿದೆ.
ಆದರೆ, ಇದನ್ನು ಪ್ರಶ್ನಿಸಿ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಬಿ.ಎಂ. ಶ್ಯಾಮಪ್ರಸಾದ ಹಾಗೂ ನ್ಯಾ. ಶಿವಶಂಕರ ಅಮರಣ್ಣವರ ಅವರಿದ್ದ ದ್ವಿಸದಸ್ಯ ಪೀಠ ಈಗ ಅನರ್ಹತೆಯನ್ನು ರದ್ದುಪಡಿಸಿ, ಅವರಿಗೆ ಮತದಾನದ ಹಕ್ಕು ನೀಡಿದೆ.
ರಾಜಕೀಯ ಶಕ್ತಿ ಪ್ರದರ್ಶನಈ ತೀರ್ಪು ಹೊರಬೀಳುತ್ತಿದ್ದಂತೆ ನಗರಸಭೆಯಲ್ಲಿ ರಾಜಕೀಯ ಬಿರುಸುಗೊಂಡಿದೆ. ಈ ಹಿಂದೆ ಅನರ್ಹತೆಯಿಂದಾಗಿ ಸಂಖ್ಯಾಬಲ ಕುಸಿದು ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಆದರೀಗ ಸದಸ್ಯತ್ವ ಮರುಕಳಿಸಿರುವುದರಿಂದ ಬಿಜೆಪಿಯ ಬಲ 18ಕ್ಕೆ ಏರಿಕೆಯಾಗಿದ್ದು, ಕಾಂಗ್ರೆಸ್‌ನ 17 ಸದಸ್ಯರಿಗಿಂತ ಒಂದು ಹೆಜ್ಜೆ ಮುಂದೆ ನಿಂತಿದೆ. ಫೆಬ್ರವರಿ 2025ರಲ್ಲಿ ಕಾಂಗ್ರೆಸ್‌ನ ಕೃಷ್ಣ ಪರಾಪುರ ಮತ್ತು ಶಕುಂತಲಾ ಅಕ್ಕಿ ಅವರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರೂ, ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಹೈಕೋರ್ಟ್‌ನ ಈ ಹೊಸ ಆದೇಶ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದ್ದು, ಮುಂದಿನ ಕಾನೂನು ನಡೆಗಳ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ.
ಕೋರ್ಟ್ ಕೇವಲ ಅನರ್ಹತೆ ರದ್ದು ಮಾಡುವುದಷ್ಟೇ ಅಲ್ಲದೆ, ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಹತ್ವದ ನಿರ್ದೇಶನ ನೀಡಿದೆ. ಒಂದು ವೇಳೆ ಈ ಪ್ರಕರಣದ ಬಗ್ಗೆ ಮರು ವಿಚಾರಣೆ ನಡೆಸುವ ಸಂದರ್ಭ ಬಂದರೆ ಅದನ್ನು ಅತ್ಯಂತ ಕೂಲಂಕಷವಾಗಿ ಮತ್ತು ಯಾವುದೇ ಲೋಪವಿಲ್ಲದಂತೆ ನಡೆಸಬೇಕು ಎಂದು ಸೂಚಿಸಿದೆ. ಇದರಿಂದಾಗಿ ಸದ್ಯಕ್ಕೆ ಮೂವರು ಸದಸ್ಯರು ನಿಟ್ಟುಸಿರು ಬಿಟ್ಟಿದ್ದರೂ, ತೂಗುಗತ್ತಿ ಸಂಪೂರ್ಣವಾಗಿ ಸರಿದಿಲ್ಲ. ಸದ್ಯದ ಮಟ್ಟಿಗೆ ಚುನಾವಣಾ ಅಧಿಕಾರಿಗಳ ಮೇಲಿದ್ದ ನ್ಯಾಯಾಂಗ ನಿಂದನೆ ಪ್ರಕರಣ ಕೂಡ ಇತ್ಯರ್ಥಗೊಂಡಿದೆ.