ಗದಗ: ಗದಗ -ಬೆಟಗೇರಿ ಅವಳಿ ನಗರ ಸೇರಿದಂತೆ ರಾಜ್ಯ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ ಸರಣಿ ಮನೆಕಳ್ಳತನ ಮಾಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಕಳ್ಳರ ಜಾಲವನ್ನು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಒಟ್ಟು 14 ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಆರೋಪಿಗಳನ್ನು ಬಂಧಿಸಿ ₹1.26 ಕೋಟಿಗೂ ಅಧಿಕ ಮೊತ್ತ ಚಿನ್ನಾಭರಣ, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದೊಂದು ವರ್ಷದಲ್ಲಿ ಬಡಾವಣೆ ಮತ್ತು ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ. ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ತೋರಿದ ಜಾಣ್ಮೆ ಶ್ಲಾಘನೀಯವಾಗಿದೆ ಎಂದರು.
ಏಪ್ರಿಲ್ 1ರಂದು ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಕಾದ್ರೋಳಿ ಗ್ರಾಮದ ಸುರೇಶ ಸಿಂಗನೂರ, ಧಾರವಾಡ ಜಿಲ್ಲೆ ಅಳ್ನಾವರ ನಿವಾಸಿ ನಾಗಪ್ಪ ದುರಗಮುರಗಿ, ಗರಗ ನಿವಾಸಿ ಶಿವು ಬೆಳಗಂಟಿ, ಬೆಳಗಾವಿ ಜಿಲ್ಲೆಯ ದಡ್ಡಿ ಗ್ರಾಮದ ದೊಡ್ಡಸುರೇಶ ತಮ್ಮಣ್ಣವರ, ಧಾರವಾಡ ಜಿಲ್ಲೆಯ ವೆಂಕಟಾಪುರ ಗ್ರಾಮದ ಶಂಕರ ಕರಿ (ಕುಡ್ಡ ಶಂಕರ), ಧಾರವಾಡದ ಮಂಜುನಾಥ ಬಾದಗಿ, ಹಾವೇರಿ ಜಿಲ್ಲೆಯ ಬೆಳಗಾಲಪೇಟೆಯ ಹುಲಗಪ್ಪ ಬೆಳಗಾಲಪೇಟೆ ಹಾಗೂ ಬೆಳಗಾವಿ ಜಿಲ್ಲೆಯ ಮುನವಳ್ಳಿಯ ಆನಂದ ಯರಗಣ್ಣವರ ಎಂಬುವವರನ್ನು ಬಂಧಿಸಲಾಗಿದೆ.ಬಂಧಿತರಿಂದ ₹8922400 ಮೌಲ್ಯದ 587 ಗ್ರಾಂ ಬಂಗಾರ, ₹931680 ಮೌಲ್ಯದ 3822 ಗ್ರಾಂ ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಹಿರೋ ಹೊಂಡಾ, ಪಲ್ಸರ್ ಬೈಕ್, ಟಾಟಾ ಇಂಟ್ರಾ ಪಿಕಪ್ ಮತ್ತು ಸ್ವಿಫ್ಟ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಳ್ಳರ ತಂಡವನ್ನು ಬಂಧಿಸುವ ಮೂಲಕ ಬೆಟಗೇರಿ ಬಡಾವಣೆ ಠಾಣೆಯ 4, ಗದಗ ಶಹರ ಠಾಣೆಯ 3 ಹಾಗೂ ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯ 4 ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ರೋಹನ ಜಗದೀಶ ಮಾಹಿತಿ ನೀಡಿದರು.
ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್ ಶಿಂಧೆ, ಪಿಎಸ್‌ಐಗಳಾದ ಮಾರುತಿ ಜೋಗದಂಡಕರ, ಲಕ್ಷ್ಮಪ್ಪ ಆರಿ ಹಾಗೂ ಸಿಬ್ಬಂದಿ ಒಳಗೊಂಡು ಒಟ್ಟು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಅತೀ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಮೌಲ್ಯದ ಸ್ವತ್ತನ್ನು ಪತ್ತೆಹಚ್ಚಿದ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್ಪಿ ರೋಹನ ಜಗದೀಶ ತಿಳಿಸಿದರು.