ಖಾಜು ಸಿಂಗೆಗೋಳ
ಬಹುಕಾಲದ ಬೇಡಿಕೆ ಕೊನೆಗೂ ಇಂಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆರಿದೆ. ಡಿ.23 ರಂದು ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಕಚೇರಿಗಳ ಕಾರ್ಯಾರಾಂಭ ಕಾರ್ಯಕ್ರಮ ನಡೆಯಲಿದೆ.
55 ವರ್ಷಗಳ ನಂತರ ಇಂಡಿ ಪುರಸಭೆಯಿಂದ ನಗರಸಭೆಯಾಗಿದೆ. 1967ರಲ್ಲಿ ಟೌನ್ ಪಂಚಾಯತ್‌ಗೆ ಒಳಪಟ್ಟಿತ್ತು ಇಂಡಿ ಪಟ್ಟಣ , 19 ಸದಸ್ಯರನ್ನು ಒಳಗೊಂಡಿತ್ತು. ಹಲವು ತಾಂಡಾಗಳು ಹೊರತುಡಿಸಿ 12 ಸಾವಿರ ಜನಸಂಖ್ಯೆ ಹೊಂದಿತ್ತು, ಪಟ್ಟಣದ ಚಾವಡಿಯಲ್ಲಿ ಕಚೇರಿ ನಡೆಯುತ್ತಿತ್ತು . 1973-74 ರಲ್ಲಿ ಪುರಸಭೆಯಾಗಿ ಪರಿವರ್ತನೆ ಹೊಂದಿದಾಗ 15 ಸದಸ್ಯ ಬಲ ಹೊಂದಿ, ಸುಮಾರು 15 ಸಾವಿರ ಜನಸಂಖ್ಯೆ ಹೊಂದಿದ್ದರೆ, ನಂತರ 1996ರಲ್ಲಿ ಗ್ರೇಡ್ 1 ಪುರಸಭೆಯಾದಾಗ 25 ರಿಂದ 30 ಸಾವಿರ ಜನಸಂಖ್ಯೆ ಇಂಡಿ ಪಟ್ಟಣದಲ್ಲಿತ್ತು 23 ಸದಸ್ಯ ಬಲ ಪುರಸಭೆ ಹೊಂದಿತ್ತು. ಸದ್ಯ 2025ರಲ್ಲಿ ನಗರ ಸಭೆಯಾಗಿದ್ದರಿಂದ, 31 ಸದಸ್ಯ ಬಲದೊಂದಿಗೆ, 51 ಸಾವಿರ ಜನಸಂಖ್ಯೆ ಹೊಂದಿದೆ ಎಂದು ಹೇಳಲಾಗುತ್ತದೆ. ನಗರಸಭೆಯಾಗಲು ಬೇಕಾದ ಮೊದಲ ಅರ್ಹತೆಯಾದ ಜನಸಂಖ್ಯೆ 50 ಸಾವಿರವನ್ನು ಮೀರಿದೆ.ಪುರಸಭೆ ಮುಖ್ಯಾಧಿಕಾರಿ ಹುದ್ದೆಯಿಂದ ಪೌರಾಯುಕ್ತ ಹುದ್ದೆಯಾಗಿ ಮಾರ್ಪಟ್ಟಿದೆ. ಈಗ ಇರುವ 23 ವಾರ್ಡ್‌ಗಳು ಜನಸಾಂದ್ರತೆಗೆ ಅನುಗುಣವಾಗಿ 31 ವಾರ್ಡ್‌ಗಳಾಗಲಿದ್ದು, ನಗರ ಸಭೆ ವ್ಯಾಪ್ತಿ -27.38 ಚದರ ಕಿ.ಮೀ ವ್ಯಾಪಿಸಿದೆ. ಇಂಡಿಗೆ ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ
ಇಂಡಿಗೆ ನಗರ ಯೋಜನಾ ಪ್ರಾಧಿಕಾರ ಮಂಜೂರು ಆಗಿರುವುದರಿಂದ, ವಿಜಯಪುರಕ್ಕೆ ಅಲೆದಾಡುವುದು ತಪ್ಪಿದಂತಾಗಿದೆ.
ಒಂದು ನಿವೇಶನದಲ್ಲಿ ಭಾಗ ಮಾಡುವುದು, ಭಾಗವಾಗಿರುವ ನಿವೇಶನ ಒಂದುಗೂಡಿಸುವುದು,ಎನ್‌ಎ(ಬಿನ್‌ಶೆತ್ಕಿ) ಅಭಿಪ್ರಾಯವೂ ಇಲ್ಲಿಯೇ ದೊರೆಯಲಿದೆ. ಇದರಿಂದ ಸಾರ್ವಜನಿಕರು ವಿಜಯಪುರದ ಕಚೇರಿಗೆ ಅಲೆದಾಡುವುದು ತಪ್ಪಿದಂತಗಾಗಿದೆ.
ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಪ್ರಾಧಿಕಾರದ ಮುಖ್ಯಸ್ತರಾಗಿದ್ದು ಸರ್ಕಾರದಿಂದ ನೇಮಕಗೊಂಡಿರುತ್ತಾರೆ. ಸದಸ್ಯ ಕಾರ್ಯದರ್ಶಿರವರು ಕಚೇರಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು ಕಚೇರಿಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವ ಮೊದಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು ಯೋಜನಾ ಪ್ರಾಧಿಕಾರದ ಕಾರ್ಯವಾಗಿದೆ. ಅಭಿವೃದ್ಧಿಗೆ ಅನುಕೂಲ
ನಗರಸಭೆಯಾಗಿದ್ದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರಲಿದೆ. ಇಂಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ, ಡಿಸಿಎಂ, ಸಚಿವರು ಸಾಕಷ್ಟು ಸಹಾಯ ಮಾಡಿದ್ದಾರೆ. ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ. ನಗರ ಯೋಜನಾ ಪ್ರಾಧಿಕಾರ ಕಚೇರಿಯೂ ಕಾರ್ಯಾರಂಭ ಮಾಡಲಿದೆ. ಇದರಿಂದ ಈ ಕಚೇರಿ ಕೆಲಸಗಳಿಗೆ ಸಾರ್ವಜನಿಕರು ವಿಜಯಪುರಕ್ಕೆ ಹೋಗುವುದು ತಪ್ಪಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಕೊಟ್ಟ ಮಾತಿನಂತೆ ನಾನು ನಡೆಯುತ್ತಿದ್ದೇನೆ. ಇಂಡಿಯನ್ನು ನಗರಸಭೆಯನ್ನಾಗಿ ಮಾಡಿದ್ದೇನೆ. ಜಿಲ್ಲೆಯಾಗುವ ಎಲ್ಲ ಅರ್ಹತೆ ಈಗ ಇಂಡಿಗೆ ಬಂದಿದೆ. ಮುಂದೆ ಜಿಲ್ಲಾ ವಿಂಗಡಣೆಯಾಗುವ ಸಂದರ್ಭ ಬಂದರೆ ಆ ಸರದಿಯಲ್ಲಿ ನಮ್ಮ ಇಂಡಿ ಪ್ರಥಮ ಸ್ಥಾನದಲ್ಲಿರುತ್ತದೆ.