)
ಕನ್ನಡಪ್ರಭ ವಾರ್ತೆ ಕೋಲಾರಕೋಮುಲ್ ಶಿಬಿರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸಿ.ಮಂಜುನಾಥ್‌ರಿಗೆ ಕೋಮುಲ್ ಒಕ್ಕೂಟದ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೋಮುಲ್ ಒಕ್ಕೂಟ ಗಾಯಾಳು ನೆರವಿಗೆ ಧಾವಿಸಬೇಕು ಎಂದು ಸಹಕಾರಿ ಯೂನಿಯನ್ ಜಿಲ್ಲಾ ನಿರ್ದೇಶಕ ಹಾಗೂ ನಗರಸಭೆ ಮಾಜಿ ಸದಸ್ಯ ಎಸ್.ಆರ್.ಮುರಳಿಗೌಡ ಮನವಿ ಮಾಡಿದ್ದಾರೆ.ಕೋಲಾರ ಶಿಬಿರ ಕಚೇರಿಯಿಂದ ಡಿ. 8ರಂದು ಅನ್ಯ ಕಾರ್ಯ ನಿರ್ಮಿತ್ತ ಜಿಲ್ಲಾ ಕೋಮುಲ್ ಒಕ್ಕೂಟಕ್ಕೆ ತೆರಳಿದ ಸಮಯದಲ್ಲಿ ಡೈರಿಯ ಲಾರಿಯೊಂದು ಕಾಂಪೌಂಡ್ ಆವರಣದಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ತೀವ್ರವಾಗಿ ಗಾಯಗೊಂಡರು. ಅವರನ್ನು ಕೋಮುಲ್ ನಿರ್ದೇಶಕ ಡಿ.ವಿ.ಹರೀಶ್ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗಾಯಾಳು ಸಿ.ಮಂಜುನಾಥ್‌ರನ್ನು ಚಿಕಿತ್ಸೆಗೆ ನಗರದ ಗೌರವ್ ಹಾಗೂ ವಂಶೋದಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಕಳೆದ 22 ವರ್ಷದಿಂದ ಹೊರಗುತ್ತಿಗೆ ಆಧಾರದ ಮೇಲೆ ಸೇವೆಸಲ್ಲಿಸುತ್ತಿದ್ದ ಮಂಜುನಾಥ್ ಇದುವರೆಗೂ ಸಹ ಸುಮಾರು 13 ಲಕ್ಷ ರು.ಗಳನ್ನು ಆರೋಗ್ಯ ವೆಚ್ಚಕ್ಕಾಗಿ ಹಣ ಖರ್ಚು ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೋಮುಲ್ ಆಡಳಿತ ಮಂಡಳಿಯಿಂದ ಹೊರಗುತ್ತಿಗೆ ನೌಕರ ಮಂಜುನಾಥ್‌ರ ನೆರವಿಗೆ ನಿಲ್ಲುವಂತೆ ಆಗಬೇಕು ಎಂದು ಮುರಳೀಗೌಡ ಮನವಿ ಮಾಡಿದ್ದಾರೆ.