ಪುರಸಭೆ ಇ-ಉತಾರ ನೀಡಲು ವಿಳಂಬ ನೀತಿ, ಪ್ರತಿಭಟನೆ

KannadaprabhaNewsNetwork | Published : Mar 27, 2025 1:06 AM

ಸಾರಾಂಶ

ಪುರಸಭೆ ಆಶ್ರಯ ಫಲಾನುಭವಿಗಳಿಂದ ದಲ್ಲಾಳಿಗಳು ಹಣ ಪಡೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಣ ಪಡೆದ ವ್ಯಕ್ತಿಗಳ ಮೇಲೆ ಪುರಸಭೆಯಿಂದ ದೂರು ನೀಡಿ

ಗಜೇಂದ್ರಗಡ: ಪುರಸಭೆ ವ್ಯಾಪ್ತಿಯ ಆಶ್ರಯ ಫಲಾನುಭವಿಗಳಿಗೆ ಇ-ಉತಾರ ನೀಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ರೋಣ ಮಂಡಲದಿಂದ ಪುರಸಭೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಪಟ್ಟಣದಲ್ಲಿ ವಿವಿಧ ಯೋಜನೆ ಅಡಿ ಆಶ್ರಯ ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಇ-ಉತಾರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಒಂದೆಡೆಯಾದರೆ ಇತ್ತ ಉತಾರ ನೀಡಲು ಪುರಸಭೆಗೆ ₹ ೧ ಸಾವಿರ ಹಾಗೂ ಕೆಲ ದಲ್ಲಾಳಿಗಳಿಗೆ ₹೨ ಸಾವಿರ ನೀಡಬೇಕು. ಇಲ್ಲದಿದ್ದರೆ ಉತಾರ ನೀಡಲ್ಲ ಎಂದು ಫಲಾನುಭವಿಗಳಿಗೆ ಹೇಳಲಾಗುತ್ತಿದೆ. ಆದರೆ ಫಲಾನುಭವಿಗಳಿಗೆ ಇ-ಉತಾರ ನೀಡಲು ಪಡೆದ ಹಣಕ್ಕೆ ಪಾವತಿ ನೀಡಿದ ಒಂದೇ ಒಂದು ಪಾವತಿ ನೀಡಿ, ₹೧ ಸಾವಿರ ಏಕೆ, ₹ ೨ ಸಾವಿರ ಕೊಡಿಸುತ್ತೇವೆ ಎಂದು ಬಿಜೆಪಿ ಮುಖಂಡರು, ಪಟ್ಟಣದಲ್ಲಿ ಆಶ್ರಯ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ತಕ್ಷಣವೇ ಇ-ಉತಾರ ನಿಡುವವರೆಗೆ ಪ್ರತಿಭಟನೆ ಹಿಂಪಡೆಯಲ್ಲ.ಫಲಾನುಭವಿಗಳಿಂದ ಹಣ ಪಡೆಯುವುದಾದರೆ ಪುರಸಭೆ ಅದಕ್ಕೆ ಪಾವತಿ ನೀಡಿ, ನೇರವಾಗಿ ಫಲಾನುಭವಿಗಳಿಗೆ ಉತಾರ ನೀಡಬೇಕು ಎಂದು ಪಟ್ಟುಹಿಡಿದರು.

ಪುರಸಭೆ ಆಶ್ರಯ ಫಲಾನುಭವಿಗಳಿಂದ ದಲ್ಲಾಳಿಗಳು ಹಣ ಪಡೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಣ ಪಡೆದ ವ್ಯಕ್ತಿಗಳ ಮೇಲೆ ಪುರಸಭೆಯಿಂದ ದೂರು ನೀಡಿ. ಅಲ್ಲದೆ ಫಲಾನುಭವಿಗಳಿಗೆ ನೀಡುವ ಇ-ಉತಾರ ಬೆಂಗಳೂರ ಅಥವಾ ಬೇರೆಡೆಯಿಂದ ಬರಲ್ಲ, ಪುರಸಭೆಯಲ್ಲಿಯೇ ಇವೆ. ಕೆಲವರಿಗೆ ರಾತ್ರೋರಾತ್ರಿ ಇ-ಉತಾರ ನೀಡಲಾಗುತ್ತಿದೆ. ಆಶ್ರಯ ಫಲಾನುಭವಿಗಳಿಂದ ಹಣ ವಸೂಲಿ ಮಾಡುವುದನ್ನು ಕೆಲವರು ಉದ್ಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಫಲಾನುಭವಿಗಳಿಗೆ ತಕ್ಷಣವೇ ಉತಾರ ನೀಡಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಆಶ್ರಯ ಫಲಾನುಭವಿಗಳಿಗೆ ಇ-ಉತಾರ ನೀಡಲು ಅಂದಾಜು ₹೪೬೦ ಹಣ ಪಡೆದು ಟ್ಯಾಕ್ಸ್ ತುಂಬಿಕೊಳ್ಳಲಾಗುತ್ತದೆ. ಈಗಾಗಲೇ ಆಶ್ರಯ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ಇತ್ತಿಚೆಗೆ ಕಾರ್ಯಕ್ರಮ ನಡೆಸಿದ ವೇಳೆಯಲ್ಲಿ ೭೦ ರಷ್ಟು ಫಲಾನುಭವಿಗಳಿಗೆ ಇ- ಉತಾರ ನೀಡಿದ್ದಾರೆ.ಆಶ್ರಯ ಸಮಿತಿಯು ಇನ್ನುಳಿದ ಫಲಾನುಭವಿಗಳಿಗೆ ಇ-ಉತಾರ ನೀಡಲು ಸಮಯ ನೀಡಿದ ದಿನದಂದು ಫಲಾನುಭವಿಗಳಿಗೆ ನೇರವಾಗಿ ಉತಾರ ನೀಡುತ್ತೇವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಇಂದು, ನಾಳೆ ಎಂದು ಕಾಲ ದೂಡುವ ಬದಲು ಪುರಸಭೆಯಿಂದ ಯಾವಾಗ ಇ-ಉತಾರ ನೀಡುತ್ತೀರಿ ಎಂದು ಬರವಣಿಗೆಯಲ್ಲಿ ನೀಡಿ ಎಂದಾಗ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಆಶ್ರಯ ಸಮಿತಿಯಿಂದ ಸಭೆ ದಿನಾಂಕ ಪಡೆದು ತಿಳಿಸಲಾಗುವುದು ಎಂಬ ಹಿಂಬರಹ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ಪುರಸಭೆ ವಿಪಕ್ಷ ಸದಸ್ಯ ಮೂಕಪ್ಪ ನಿಡಗುಂದಿ, ಯು.ಆರ್. ಚನ್ನುಪಾಟೀಲ, ಕನಕಪ್ಪ ಅರಳಿಗಿಡದ, ರೂಪೇಶ ರಾಠೋಡ, ಯಮನೂರ ತಿರಕೋಜಿ ಹಾಗೂ ಬುಡಪ್ಪ ಮೂಲಿಮನಿ, ಅಶೋಕ ವನ್ನಾಲ, ರಾಜೇಂದ್ರ ಘೋರ್ಪಡೆ, ಡಿ.ಜಿ. ಕಟ್ಟಿಮನಿ, ಉಮೇಶ ಚನ್ನುಪಾಟೀಲ, ಶಂಕರ ಸವಣೂರ, ಶ್ರಿನಿವಾಸ ಸವದಿ, ಶಂಕರ ಇಂಜನಿ ಸೇರಿದಂತೆ ಇತರರು ಇದ್ದರು.

Share this article