ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮುಖ್ಯಾಧಿಕಾರಿ ಲೀಲಾವತಿ ಮಳಿಗೆಗಳ ಬಾಡಿಗೆ ಹಾಗೂ ವಿದ್ಯುತ್ ಶುಲ್ಕ ಬಾಕಿ ವಸೂಲಿಗೆ 3 ವಾರಗಳ ಹಿಂದೆ ಮಳಿಗೆ ಬಾಡಿಗೆದಾರರಿಗೆ ನೋಟಿಸ್ ಮೂಲಕ, ನಂತರ ಪುರಸಭೆ ಸಿಬ್ಬಂದಿ ಮೂಲಕ ಮೌಖಿಕ ಸೂಚನೆ ನೀಡಿದ್ದರು. ಆದರೂ, ಬಾಡಿಗೆದಾರರು ಬಾಡಿಗೆ ಹಾಗೂ ವಿದ್ಯುತ್ ಶುಲ್ಕ ಬಾಕಿ ಕಟ್ಟುವಲ್ಲಿ ತಾತ್ಸಾರ ತೋರಿದ್ದರು. ಆದರೆ, ಮಂಗಳವಾರ ಬಾಡಿಗೆ ಬಾಕಿ ಉಳಿಸಿಕೊಂಡ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳ ತಂಡ ಬೀಗ ಜಡಿಯುವ ಕಾರ್ಯಾಚರಣೆ ನಡೆಸಿತು.
ಪುರಸಭೆ ದಿಟ್ಟ ಕ್ರಮದಿಂದ ತಮ್ಮ ದುಡಿಮೆಗೆ ತೊಂದರೆ ಆಗುತ್ತದೆ ಎಂದರಿತ ಕೆಲ ಮಳಿಗೆ ಬಾಡಿಗೆದಾರರು ಬಾಕಿ ಮೊತ್ತ ಪಾವತಿಸಲು ಮುಂದಾಗಿದ್ದಾರೆ. 23 ಮಳಿಗೆಗಳ ಬಾಡಿಗೆದಾರರು ಬಾಡಿಗೆ ಕಟ್ಟದ ಕಾರಣ ಅವರ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳು ಬೀಗ ಜಡಿದರು.ಕೆಲವು ಬಾಡಿಗೆದಾರರು ಬರೋಬ್ಬರಿ 50 ರಿಂದ 60 ತಿಂಗಳು ಪುರಸಭೆಗೆ ಮಳಿಗೆ ಬಾಡಿಗೆಯೇ ಕಟ್ಟಿಲ್ಲ. ಈಗ ಬಾಕಿ ಉಳಿಸಿಕೊಂಡವರ ಮಳಿಗೆಗಳಿಗೆ ಬೀಗ ಹಾಕಲಾಗಿದೆ. 2-3 ತಿಂಗಳ ಬಾಡಿಗೆ ಬಾಕಿ ಉಳಿಸಿಕೊಂಡವರಿಗೆ ಸಮಯಾವಕಾಶ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾಹಿತಿ ನೀಡಿದರು.
ಪುರಸಭೆ ಒಡೆತನದ ಮಳಿಗೆಗಳನ್ನು ಬಾಡಿಗೆ ಪಡೆದಿರುವ ಕೆಲವರು ಮಳಿಗೆ ಮುಂಭಾಗದಲ್ಲಿ ಅನಧಿಕೃತವಾಗಿ 20 ಅಡಿಗೂ ಹೆಚ್ಚಿನ ಜಾಗ ಅತಿಕ್ರಮಿಸಿಕೊಂಡು ಮತ್ತೊಬ್ಬರಿಗೆ ಮಳಿಗೆ ಬಾಡಿಗೆಗೆ ನೀಡಿದ್ದಾರೆ. ಇಂಥವರಿಗೆ ಕೂಡ ಎಚ್ಚರಿಗೆ ನೀಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭ ಪುರಸಭೆ ಎಂಜಿನಿಯರ್ ದೇವರಾಜ್, ಆರೋಗ್ಯಾಧಿಕಾರಿ ಪರಮೇಶ್ ನಾಯ್ಕ, ಮೋಹನ್, ಸಾಕಮ್ಮ, ಪುನೀತ್, ಪೌರಕಾರ್ಮಿಕರು ಇದ್ದರು.
-25ಎಚ್.ಎಲ್.ಐ1.ಜೆಪಿಜಿ: