ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು....ಅದೇ ಬದುಕಾದರೆ...? ಬದುಕು ಬರಡಾಗುತ್ತ, ವ್ಯಾವಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ... ಅಷ್ಟೇ ಅಲ್ಲ... ಬದುಕಿನ ಮುಖಗಳು. ಅದಕ್ಕೆ ವ್ಯಾಪ್ತಿ, ಆಳ, ಎತ್ತರ ಇದೆ ಎನ್ನುವುದಾದರೆ ಅದನ್ನು ಮಾನವೀಯ ಬದುಕು ಎನ್ನಬಹುದು. ಸಾಕಷ್ಟು ಹಣ, ವೈಭವದ ಜೀವನ ನಡೆಸುವ ಎಲ್ಲಾ ಅವಕಾಶಗಳಿದ್ದರೂ ಕಲಿಕೆಯ ಜೀವನ ಮೌಲ್ಯಗಳನ್ನು ವೃತ್ತಿ ಮತ್ತು ಖಾಸಗೀ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಬದ್ಧತೆಯಿಂದ ದುಡಿಯುವ, ವರ್ತಿಸುವ ಕೆಲವರನ್ನಾದರೂ ಪ್ರತಿ ಊರುಗಳಲ್ಲಿ ಕಾಣಬಹುದು. ಅಂತಹವರ ಸಾಲಿನಲ್ಲಿ ಗುರುತಿಸಬಹುದಾದ ಹೆಸರುಗಳಲ್ಲೊಂದು ಸುರಕ್ಷಾ ದಂತ ಚಿಕಿತ್ಸಾಲಯದ ಡಾ. ಮುರಲೀ ಮೋಹನ ಚೂಂತಾರು ಮತ್ತು ಡಾ. ರಾಜಶ್ರೀ ಮೋಹನ್ ದಂಪತಿ.ಮಂಜೇಶ್ವರದ ಹೊಸಂಗಡಿಯಲ್ಲಿ ಡಾ.ಮುರಲೀಮೋಹನ ಚೂಂತಾರು ಅವರು ಆರಂಭಿಸಿದ ದಂತ ಚಿಕಿತ್ಸಾಲಯವೇ ‘ಸುರಕ್ಷಾ’. ಅವರಿಗೆ ಹೆಗಲೆಣೆಯಾಗಿ ಹಾಥ್‌ನೊಂದಿಗೆ ಸಾಥ್ ನೀಡಿದವರು ಪತ್ನಿ ಡಾ. ರಾಜಶ್ರೀ ಮೋಹನ್ ಅವರು. ಕೇವಲ ಹಣ ಗಳಿಕೆಯ ದೃಷ್ಟಿಕೋನವಿರುತ್ತಿದ್ದರೆ ಊರಿಗೆ, ವೃತ್ತಿಗೆ ಜೊತೆಗೆ ತಮ್ಮ ವ್ಯಕ್ತಿತ್ವಕ್ಕೆ ಹೊಸ ರೂಪ ನೀಡಲು ಸಾಧ್ಯವಿರುತ್ತಿರಲಿಲ್ಲ. ಸೇವೆಯ ವಿಶಾಲಾರ್ಥದಲ್ಲಿ ಡಾ. ಮುರಲೀ ಮೋಹನರವರು ತನ್ನ ದಂತ ಚಿಕಿತ್ಸಾಲಯಕ್ಕೆ ಸಾಂಸ್ಥಿಕ ರೂಪ ನೀಡಿ ಹೊಸಂಗಡಿಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಹೊಸ ಬೆಳಕು ನೀಡಿದವರು. ದಂತಚಿಕಿತ್ಸೆಗೆಂದು ಬರುವ ಜನರಲ್ಲಿ ಸುರಕ್ಷತೆಯ ಭಾವ ಭದ್ರವಾಗಿ ಬೇರೂರುವಂತೆ ಮಾಡಿ ಸುರಕ್ಷಾ ಎಂಬ ಹೆಸರನ್ನು ಅನ್ವರ್ಥವಾಗಿಸಿದ್ದಾರೆ. 29 ವರ್ಷಗಳ ಹಿಂದೆ ಅಂದರೆ 1997 ಜು. 3 ರಂದು 1 ದಂತಕುರ್ಚಿ ಮತ್ತು ದಂತಕ್ಷಕಿರಣ ವ್ಯವಸ್ಥೆಯೊಂದಿಗೆ ಅಂದು ಸಚಿವರಾಗಿದ್ದ ಬಿ. ರಮಾನಾಥ ರೈ ಅವರಿಂದ ಉದ್ಘಾಟಿಸಲ್ಪಟ್ಟ ಸುರಕ್ಷಾ ದಂತ ಚಿಕಿತ್ಸಾಲಯವು ಇಂದು ವಿಸ್ತೃತವಾಗಿ, ಅತ್ಯಾಧುನಿಕ ವ್ಯವಸ್ಥೆ, ತಂತ್ರಜ್ಞಾನಗಳೊಂದಿಗೆ ಬೆಳೆದು ನಿಂತಿದೆ. ಚಿಕಿತ್ಸೆಯ ಬೇಡಿಕೆಯ ಪೂರೈಕೆಯೊಂದಿಗೆ ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಹಾಯಾಗಿರಬಹುದಿತ್ತು. ಆದರೆ ಡಾ. ಮುರಲೀಮೋಹನರು ಅದಕ್ಕೆ ಅಂಟಿಕೊಳ್ಳುವ ಜಾಯಮಾನದವರಲ್ಲ. ಬಡತನದಲ್ಲಿ ಬೆಳೆದ ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದಿದ ಹಿನ್ನೆಲೆ ಇವರದು. ಆ ಹಿನ್ನೆಲೆಯಲ್ಲಿ ತಾನೂ ಬೆಳೆಯುವುದರೊಂದಿಗೆ ಸಮಾಜದ ಏಳಿಗೆಯೂ ಮುಖ್ಯವೆಂದು ಪರಿಭಾವಿಸಿಕೊಂಡು ತನ್ನ ಚಿಕಿತ್ಸಾಲಯವನ್ನು ಕಾಲಕಾಲಕ್ಕೆ ಅಭಿವೃದ್ಧಿ ಪಡಿಸಿಕೊಂಡು ವಿಸ್ತೃತಗೊಳಿಸಿದ್ದಾರೆ.
ಸೇವೆ, ನಗು ಮತ್ತು ಆರೋಗ್ಯ (Service,Smile,Health) ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗಡಿನಾಡಿನ ಮತ್ತು ಒಳನಾಡಿನ ಎಲ್ಲರ ದಂತ ಸಂಬಂಧಿ ಸಕಲ ಕಾಯಿಲೆಗಳಿಗೆ ಪರಿಹಾರ ಹುಡುಕುವಲ್ಲಿ ‘ಸುರಕ್ಷಾ’ ಚಿಕಿತ್ಸಾಲಯವು ಮುಂಚೂಣಿಯಲ್ಲಿದೆ. ಮಕ್ಕಳ ಹಲ್ಲಿನ ತಜ್ಞರು, ಹಲ್ಲಿನ ವಸಡುತಜ್ಞರು, ಬೇರುನಾಳ ತಜ್ಞರು, ವಕ್ರದಂತ ತಜ್ಞರು, ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಾ ತಜ್ಞರು ಹೀಗೆ ದಂತ ಸ್ನಾತಕೋತ್ತರ ವಿಭಾಗದ ಎಲ್ಲ ವೈದ್ಯರುಗಳ ಸೇವೆಯನ್ನು ಮಾನವೀಯ ಕಳಕಳಿಯೊಂದಿಗೆ ಸೇವೆ ನೀಡುವ ದಂತ ವೈದ್ಯ ದಂಪತಿಗಳ ಪ್ರಾಮಾಣಿಕ ಪ್ರಯತ್ನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ತಾಯಿಯವರ ನೆನಪಿನಲ್ಲಿ ‘ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ’ವನ್ನು ಸ್ಥಾಪಿಸಿಕೊಂಡು ಪ್ರತಿಷ್ಠಾನದ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಚಿತ ದಂತ ಚಿಕಿತ್ಸೆ ಮತ್ತು ರಕ್ತದಾನದ ನೂರಾರು ಶಿಬಿರಗಳನ್ನು ನಡೆಸಿಕೊಟ್ಟ ದಾಖಲೆ ಸುರಕ್ಷಾ ದಂತ ಚಿಕಿತ್ಸಾಲಯದ್ದು. ವೃತ್ತಿಯ ಜೊತೆಗೆ ಸಾವಿರಾರು ವೈದ್ಯಕೀಯ ಜಾಗೃತಿ ಲೇಖನಗಳನ್ನು ಬರೆದು ಜನರಲ್ಲಿ ರೋಗ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದೇ ವೈದ್ಯರ ವೃತ್ತಿ ಧರ್ಮ ಎಂದು ಪ್ರಾಮಾಣಿಕವಾಗಿ ನಂಬಿಕೊಂಡು ಬಂದಿದ್ದಾರೆ. ಹತ್ತು ಹಲವು ಪತ್ರಿಕೆಗಳಲ್ಲಿ ವೈದ್ಯಕೀಯ ಜಾಗೃತಿ ಲೇಖನಗಳನ್ನು ತಮ್ಮ ಬಿಡುವಿಲ್ಲದ ದಂತ ವೈದ್ಯಕೀಯ ವೃತ್ತಿಯ ನಡುವೆಯೂ ಬರೆದು ಪ್ರಕಟಿಸಿ ಸಾವಿರಾರು ಅಭಿಮಾನಿ ಬಳಗದವರನ್ನು ಸೃಷ್ಟಿಸಿಕೊಂಡಿರುತ್ತಾರೆ. ಹೀಗೆ ಜನಸಾಮಾನ್ಯರನ್ನು ತಲುಪಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ. ಶ್ರೀಯುತರು ಇದುವರೆಗೆ ಹದಿನೇಳು ಆರೋಗ್ಯ ಸಂಬಂಧಿ ಪುಸ್ತಕಗಳನ್ನು ಬರೆದು ತಮ್ಮ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಪ್ರಕಟಿಸಿರುತ್ತಾರೆ. ‘ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ’ ಎಂಬ ದಂತ ರೋಗಗಳಿಗೆ ಸಂಬಂಧಿಸಿದ ಪುಸ್ತಕ ಇವರ ಮೊದಲನೇ ಕೃತಿ ಮತ್ತು ‘ಕಚಗುಳಿ’ ಎಂಬ ದಂತ ಹನಿಗವನ ಎರಡನೇ ಕೃತಿ. ಹಾಗೆಯೇ ರಕ್ತದಾನದ ಬಗ್ಗೆಯೂ ‘ರಕ್ತದಾನ- ಜೀವದಾನ’ ಪುಸ್ತಕವನ್ನು ಮುದ್ರಿಸಿ ಈ ವರೆಗೆ ನಲವತ್ತು ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿ ರಕ್ತದಾನದ ಬಗ್ಗೆ ಬೃಹತ್ ಜಾಗೃತಿ ಮೂಡುವಂತೆ ಮಾಡಿರುತ್ತಾರೆ. ಇದರ ಇಂಗ್ಲೀಷ್ ಅವತರಣಿಕೆಯೂ ಬಿಡುಗಡೆಯಾಗಿದ್ದು, ಸುಮಾರು ಎರಡು ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಲಾಗಿದೆ. ರಕ್ತದಾನ ಜೀವದಾನ ಕೃತಿಯ ಮಲೆಯಾಳಿ ಅನುವಾದಿತ ಗ್ರಂಥ ಸದ್ಯದಲ್ಲಿ ಬಿಡುಗಡೆಯಾಗಲಿದೆ. ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಎಂಬ ವೈದ್ಯಕೀಯ ಜಾಗೃತಿ ಲೇಖನಗಳ ಪುಸ್ತಕ ಇವರ ನಾಲ್ಕನೇ ಕೃತಿ 2016ರಲ್ಲಿ ಬಿಡುಗಡೆಗೊಂಡು ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚಿಗೆ ‘ಚಿತ್ರಾನ್ನ’ ಎಂಬ 32 ನೈಜ ದಂತ ಕತೆಗಳ ಸಂಗ್ರಹ ಡಾ. ಮುರಲೀಮೋಹನ್ ಚೂಂತಾರು ಇವರ ಸಂಪಾದಕತ್ವದಲ್ಲಿ ಬಿಡುಗಡೆಗೊಂಡು ಓದುಗರಿಂದ ಪ್ರಶಂಸೆಗೊಳಗಾಗಿದೆ. ಈ ಪುಸ್ತಕದಲ್ಲಿ ಸುಮಾರು 32 ದಂತವೈದ್ಯರು ತಮ್ಮ ನಿಜ ಜೀವನದ ಹಾಸ್ಯಮಯ ಘಟನೆಗಳನ್ನು ಮತ್ತು ವೃತ್ತಿ ಸಂಬಂಧಿ ಅನುಭವಗಳನ್ನು ಹಂಚಿಕೊಂಡಿರುತ್ತಾರೆ. ಪುಸ್ತಕದ ಎಲ್ಲಾ ಒಂದು ಸಾವಿರ ಪ್ರತಿಗಳು ಮಾರಾಟವಾಗಿದ್ದು, ಎರಡನೇ ಮುದ್ರಣದ ಹಂತದಲ್ಲಿದೆ. ‘ಸಂಜೀವಿನಿ’ ಭಾಗ ಎರಡು ಡಾ. ಚೂಂತಾರು ಇವರ 6ನೇ ಕೃತಿಯಾಗಿದ್ದು ಸುರಕ್ಷಾ ದಂತ ಚಿಕಿತ್ಸಾಲಯದ ವಿಂಶತಿ ಸಂಭ್ರಮದೊಂದಿಗೆ ಲೋಕಾರ್ಪಣೆಗೊಂಡಿದೆ. ಈ ಕೃತಿಗೆ 2018ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇದರ ಶೇಷ್ಠ ವೈದ್ಯಕೀಯ ಕೃತಿ ಲಭಿಸಿದೆ. ಇವರ ಏಳನೇ ಕೃತಿ ‘ಸಂಗಾತಿ’ – ಜ್ವರ ಸಂಹಿತೆ 2018 ರಲ್ಲಿ ಬಿಡುಗಡೆಯಾಗಿದೆ. 8ನೇ ಕೃತಿ ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ 2019ರಲ್ಲಿ ಬಿಡುಗಡೆಯಾಗಿದೆ. 9ನೇ ಕೃತಿ ಧನ್ವಂತರಿ 2019 ರಲ್ಲಿ ಬಿಡುಗಡೆಯಾಗಿದೆ. ಎ.ಬಿ. ಶೆಟ್ಟಿ ದಂತಕಾಲೇಜಿನಲ್ಲಿ 16 ವರ್ಷಗಳ ಕಾಲ ಹಿರಿಯ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿ, ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಂಘಟನೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಬಾಯಿ ಮುಖ ದವಡೆ ಶಸ್ತಚಿಕಿತ್ಸಕರಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಗ್ರಹರಕ್ಷಕ ದಳದ ಸಮಾಧೇಷ್ಠರಾಗಿ ಹತ್ತು ವರುಷ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ದಂತ ವೈದ್ಯರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಅನುಭವವೂ ಇವರಿಗಿದೆ. ನಿಟ್ಟೆ ವಿಶ್ವವಿದ್ಯಾಲಯದ ಯೂತ್ ರೆಡ್‌ಕ್ರಾಸ್ ಅಧಿಕಾರಿಯಾಗಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿಯಾಗಿ ಮೂರು ವರ್ಷಗಳ ಕಾಲ ದುಡಿದಿರುತ್ತಾರೆ. ಪೌರ ರಕ್ಷಣಾ ಪಡೆಯ ಮುಖ್ಯ ಮಾಲೀಕರಾಗಿ ಕೆಲಸ ಮಾಡಿದ್ದಾರೆ. ಹೀಗೆ ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಕಿರುಕಾಣಿಕೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಸೇವೆಯ ರೂಪದಲ್ಲಿ ವೃತ್ತಿಯ ಪಾವಿತ್ರತೆ ಮತ್ತು ಗೌರವವನ್ನು ಎತ್ತರಿಸಿಕೊಂಡಿರುವ ಡಾ. ಮುರಲೀ ಮೋಹನ ಚೂಂತಾರು ಮತ್ತು ಡಾ. ರಾಜಶ್ರೀ ಮೋಹನ್ ವೈದ್ಯ ದಂಪತಿ ಅವರ ದಂತ ಸೇವೆಯ ಜುಗಲ್ ಬಂದಿ ಹೀಗೆ ಮುಂದುವರಿದಲ್ಲಿ ಗಡಿನಾಡ ಕನ್ನಡಿಗರ ಶುಕ್ರದಂತ ಇನ್ನಷ್ಟು ಹೊಳೆಯುವುದರಲ್ಲಿ ಸಂಶಯವಿಲ್ಲ. ಡಾ. ರಾಜಶ್ರೀ ಮೋಹನ್ ಅವರು ಕೂಡಾ ಕೌಟುಂಬಿಕ ಜೀವನದ ಜೊತೆಯಲ್ಲಿ ದಂತ ವೈದ್ಯಕೀಯ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಸುರಕ್ಷಾ ದಂತ ಚಿಕಿತ್ಸಾಲಯದ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಂತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿರುವ ಡಾ| ಮುರಲೀಮೋಹನರು ದಂತ ವಿಜ್ಞಾನಕ್ಕೆ ಸಂಬಂಧಿಸಿದಂತೆ ದೇಶ-ವಿದೇಶಗಳಲ್ಲಿ ಜರಗಿದ ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಚಾರ ಮಂಡಿಸಿದ್ದಾರೆ. ಹೀಗೆ ಅಧ್ಯಯನ - ಸೇವೆಯೊಂದಿಗೆ ಇವರ ದಂತವೃತ್ತಿಯ ‘ಸೇವೆಯ ಜೊತೆಯಾಟ’ ಸದಾ ಮುಂದುವರಿಯಲಿ ಎಂದು ಆಶಿಸೋಣ.ರಾಮಕೃಷ್ಣ ಭಟ್ ಚೊಕ್ಕಾಡಿ