ಈಗಾಗಲೇ ರಹಸ್ಯವಾಗಿ ಮದುವೆಯಾಗಿದ್ದರೂ ಪೋಷಕರ ಒತ್ತಾಯದ ಮೇರೆಗೆ ಮತ್ತೊಂದು ಮದುವೆಗೆ ಮುಂದಾಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ತಿಗಳರಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈಗಾಗಲೇ ರಹಸ್ಯವಾಗಿ ಮದುವೆಯಾಗಿದ್ದರೂ ಪೋಷಕರ ಒತ್ತಾಯದ ಮೇರೆಗೆ ಮತ್ತೊಂದು ಮದುವೆಗೆ ಮುಂದಾಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ತಿಗಳರಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ತಿಗಳರಪಾಳ್ಯದ ತುಳಸಿನಗರ ನಿವಾಸಿ ಭವಾನಿ (22) ಮೃತ ಮಹಿಳೆ. ಭವಾನಿ ತಂದೆ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿದ ಆಟೋ ಚಾಲಕ ಚಂದ್ರಶೇಖರ್ ಅಲಿಯಾಸ್ ಚಂದನ್ ಎಂಬಾತನನನ್ನು ಬಂಧಿಸಲಾಗಿದೆ.
ಮಾಗಡಿ ತಾಲೂಕಿನ ಭವಾನಿ ತಿಗಳರಪಾಳ್ಯದ ತುಳಸಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮನೆ ಸಮೀಪದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಈಕೆಯ ಪೋಷಕರು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಆಟೋ ಚಾಲಕನಾಗಿರುವ ಚಂದ್ರಶೇಖರ್ ತಿಗಳರಪಾಳ್ಯದಲ್ಲಿ ವಾಸವಾಗಿದ್ದ. 1 ವರ್ಷದಿಂದ ಭವಾನಿ ಚಂದನ್ ಆಟೋದಲ್ಲಿ ಮನೆಯಿಂದ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಇಬ್ಬರ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು.
ರಹಸ್ಯವಾಗಿ ದೇವಸ್ಥಾನದಲ್ಲಿ ಮದುವೆ:
ಇಬ್ಬರು ಕೆಲ ತಿಂಗಳ ಹಿಂದಷ್ಟೇ ರಹಸ್ಯವಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರೂ ಪ್ರತ್ಯೇಕವಾಗಿ ವಾಸವಾಗಿದ್ದರು. ತಮ್ಮ ಪೋಷಕರಿಗೆ ವಿಷಯ ತಿಳಿಸದೆ ಎಂದಿನಂತೆ ಜೀವನ ನಡೆಸುತ್ತಿದ್ದರು. ಆದರೆ, ಆಗಾಗ್ಗೆ ಚಂದನ್, ಭವಾನಿ ಮನೆಗೆ ಬಂದು ಒಂದೆರಡು ದಿನ ಉಳಿದುಕೊಂಡು ಹೋಗುತ್ತಿದ್ದನು.
ಮಗಳ ಮದುವೆಗೆ ಸಿದ್ಧತೆ ನಡೆಸಿದ ಪೋಷಕರು
ತಮ್ಮ ಪುತ್ರಿ ಚಂದನ್ ಜತೆಗೆ ಮದುವೆ ಆಗಿರುವ ವಿಚಾರ ಪೋಷಕರಿಗೆ ಗೊತ್ತಿರಲಿಲ್ಲ. ಆದರೆ, ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ತಿಳಿದು ಆಕೆಯ ಮದುವೆಗೆ ಸಿದ್ಧತೆ ನಡೆಸಿದ್ದರು. ಇತ್ತ ಪೋಷಕರ ಒತ್ತಡಕ್ಕೆ ಮಣಿದ ಭವಾನಿ ಕೂಡ ಮತ್ತೊಂದು ಮದುವೆಗೆ ಮುಂದಾಗಿದ್ದಳು. ಈ ವಿಚಾರ ತಿಳಿದ ಚಂದ್ರಶೇಖರ್ ಆಕ್ರೋಶಗೊಂಡು ಭವಾನಿ ಜತೆ ಜಗಳ ಮಾಡಿದ್ದ. ಈಗಾಗಲೇ ಮದುವೆಯಾಗಿದ್ದೇವೆ. ನೀನು ಬೇರೆ ಮದುವೆ ಮಾಡಿಕೊಳ್ಳುತ್ತಿಯಾ ಎಂದು ಆಕೆ ಮೇಲೆ ಹಲ್ಲೆ ನಡೆಸಿದ್ದ. ಅದರಿಂದ ಗಾಬರಿಗೊಂಡ ಭವಾನಿ, ಚಂದನ್ ಜೊತೆ ಮದುವೆ ಆಗಿರುವ ವಿಚಾರವನ್ನು ಪೋಷಕರಿಗೆ ಹೇಳದೇ ಮುಚ್ಚಿಟ್ಟಿದ್ದಳು. ಆದರೆ ನನಗೆ ಮದುವೆ ಆಗದಂತೆ ಚಂದನ್ ತನ್ನ ಮೇಲೆ ಒತ್ತಡ ಹಾಕಿ, ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಳು.
ವಿಷ ಸೇವನೆಯ ನಾಟಕವಾಡಿದ ಆರೋಪಿ:
ಜೂ.13ರಂದು ಮುಂಜಾನೆಯೇ ಭವಾನಿ ಮನೆಗೆ ಬಂದ ಚಂದನ್ ಮದುವೆ ಮಾಡಿಕೊಳ್ಳದಂತೆ ಮತ್ತೆ ಒತ್ತಡ ಹಾಕಿದ್ದ. ಆಕೆ ಅದಕ್ಕೆ ನಿರಾಕರಿಸಿದ್ದಾಗ ವಿಷದ ಬಾಟಲಿ ತಂದು ಇಬ್ಬರು ಕುಡಿದು ಸಾಯೋಣ ಎಂದಿದ್ದಾನೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಕೋರಿಕೊಂಡಿದ್ದಳು. ಆದರೆ, ಆರೋಪಿ, ಆಕೆಗೆ ಹೆಚ್ಚಿನ ವಿಷ ಕುಡಿಸಿ, ಬಳಿಕ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ತಾನು ಸ್ವಲ್ಪ ವಿಷ ಸೇವಿಸಿ, ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾನೆ.
-ಬಾಕ್ಸ್-
ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯಿಂದ ಸಿಕ್ಕಿಬಿದ್ದ
ಅದಕ್ಕೂ ಮೊದಲು ಇನ್‌ಸ್ಟಾಗ್ರಾಂನಲ್ಲಿ ದೇವಸ್ಥಾನದಲ್ಲಿ ಆಕೆ ಜತೆ ಮದುವೆ ಆದ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದ. ಅದನ್ನು ಗಮನಿಸಿದ ಭವಾನಿಯ ದೊಡ್ಡಮ್ಮ, ಕೂಡಲೇ ಭವಾನಿ ತಂದೆ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿ, ವಿಡಿಯೋ ಲಿಂಕ್ ಕೂಡ ಕಳುಹಿಸಿದ್ದರು. ಇದರಿಂದ ಗಾಬರಿಗೊಂಡ ಶ್ರೀನಿವಾಸ್ ಮಗಳಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಅನುಮಾನಗೊಂಡ ಶ್ರೀನಿವಾಸ್ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆ ಮಾಲೀಕರು ಭವಾನಿ ವಾಸವಿದ್ದ ಮನೆಗೆ ಹೋಗಿ ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಕೂಡಲೇ ಶ್ರೀನಿವಾಸ್ ಬೆಂಗಳೂರಿಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಕೊಲೆ ಪ್ರಕರಣ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗೆ ಬಂದ ಪೊಲೀಸರು ಅಸ್ವಸ್ಥಗೊಂಡಿದ್ದ ಚಂದನ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದರು. ಕೆಲ ಹೊತ್ತಿನ ಬಳಿಕ ಆರೋಪಿ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಿದಾಗ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಚಂದನ್‌ಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿರುವುದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.