ಡಿವೈಎಸ್ಪಿ ಅನಿಲ್ ನೇತೃತ್ವದ ತಂಡದಿಂದ ಪ್ರಕ್ರಿಯೆ । ಉದ್ವೇಗಕ್ಕೊಳಗಾಗದೇ ವಾಹನವೇರಿದ ಶರಣರು
ಕನ್ನಡಪ್ರಭ ವಾರ್ತೆ ದಾವಣಗೆರೆಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸೋಮವಾರ ದಾವಣಗೆರೆ ವಿರಕ್ತ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿ, ನ.16ರಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಶರಣರಿಗೆ ನ್ಯಾಯಾಲಯದ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
ಸೆ. 2022ರಲ್ಲಿ 2 ಪೋಕ್ಸೋ ಪ್ರಕರಣಗಳು ಡಾ.ಶಿವಮೂರ್ತಿ ಮುುರುಘಾ ಶರಣರ ವಿರುದ್ಧ ದಾಖಲಾಗಿದ್ದು, 14 ತಿಂಗಳ ಕಾಲ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಶರಣರು ಸೆರೆ ವಾಸದಲ್ಲಿದ್ದರು. ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರ ಬಂದಿದ್ದ ಶರಣರಿಗೆ 2ನೇ ಕೇಸ್‌ನಲ್ಲಿ ಮತ್ತೆ ಜಾಮೀನು ರಹಿತ ವಾರೆಂಟ್ಜಾರಿಗೊಳಿಸಿದ್ದರಿಂದ ಚಿತ್ರದುರ್ಗ ಗ್ರಾಮಾಂತರ ಡಿವೈಎಸ್ಪಿ ಕೆ.ಆರ್.ಅನಿಲಕುಮಾರ ನೇತೃತ್ವದ ತಂಡ ಬಂಧಿಸಿದೆ.
ಇಲ್ಲಿನ ದೊಡ್ಡಪೇಟೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದ ಮುರುಘಾ ಶರಣರಿಗೆ ಮೊದಲ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದು, ಇದಕ್ಕೂ ಮುನ್ನ 2ನೇ ಪೋಕ್ಸೋ ಪ್ರರಣದ ಬಾಡಿ ವಾರೆಂಟ್ ವಿಚಾರ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಗುರುವಾರ ಬೆಳಗ್ಗೆ ಕಾರಾಗೃಹದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಮಧ್ಯಾಹ್ನ ಜಾಮೀನಿನ ಮೇಲೆ ಹೊರ ಬಂದ ಶರಣರು ಚಿತ್ರದುರ್ಗದಿಂದ ದಾವಣಗೆರೆ ಆಗಮಿಸುತ್ತಿದ್ದಾಗಲೇ ಮಾರ್ಗ ಮಧ್ಯೆ ಮೊಬೈಲ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.ವಿಚಾರಣೆ ಹಂತದಲ್ಲೇ ಬಿಡುಗಡೆ ಮಾಡಿದ್ದರಿಂದ ನ.18ರಂದು ನ್ಯಾಯಾಲಯದ ಕಲಾಪದ ವೇಳೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಬಿಡುಗಡೆ ಪ್ರಕ್ರಿಯೆ ಕುರಿತಂತೆ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ಸೋಮವಾರ ವಿಚಾರಣೆ ನಡೆಸಿದ ಚಿತ್ರದುರ್ಗ 2ನೇ ಜೆಎಂಎಫ್‌ಸಿ ನ್ಯಾಯಾಲಯ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ 2ನೇ ಪ್ರಕರಣದಲ್ಲಿ ಜಾಮೀನು ರಹಿತ ಬಂಧನಕ್ಕೆ ಆದೇಶ ಹೊರಡಿಸಿತ್ತು.
ಚಿತ್ರದುರ್ಗ ಗ್ರಾಮಾಂತರ ಡಿವೈಎಸ್ಪಿ ಕೆ.ಆರ್.ಅನಿಲಕುಮಾರ, ವೃತ್ತ ನಿರೀಕ್ಷಕ ಜಿ.ಕೆ.ಮುದ್ದುರಾಜ, ಪಿಎಸ್ಐ ಶಿವಕುಮಾರ ನೇತೃತ್ವದಲ್ಲಿ ಪೊಲೀಸರ ತಂಡವು ದಾವಣಗೆರೆ ವಿರಕ್ತ ಮಠಕ್ಕೆ ಬಂದು, ಶರಣರನ್ನು ಬಂಧಿಸಿ, ಕರೆದೊಯ್ದಿದೆ. ಬಂಧನದ ವೇಳೆ ವಿರಕ್ತ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಜೊತೆಗೆ ಶ್ರೀಮಠದ ಟ್ರಸ್ಟಿಗಳಾದ ಅಂದನೂರು ಮುಪ್ಪಣ್ಣ, ಎಂ.ಜಯಕುಮಾರ ಇತರರಿದ್ದರು.ಮಧ್ಯಾಹ್ನದ ಪ್ರಸಾದ ಸೇವನೆ
ಶರಣರಿಗೆ 2ನೇ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಬಸವ ನಗರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ವಿರಕ್ತ ಮಠಕ್ಕೆ ಧಾವಿಸಿದ್ದರು. ಶ್ರೀಮಠದಲ್ಲಿ ಒಬ್ಬರೇ ಇದ್ದ ಮುರುಘಾ ಶರಣರು ಮಧ್ಯಾಹ್ನದ ಪ್ರಸಾದ ಸೇವಿಸಿದರು. ಜಾಮೀನು ರಹಿತ ವಾರೆಂಟ್ ಸಮೇತ ಪೊಲೀಸರು ಬಂದ ವೇಳೆ ಯಾವುದೇ ಉದ್ವೇಗಕ್ಕೆ ಒಳಗಾಗದೇ, ಶಾಂತಚಿತ್ತರಾಗಿದ್ದರು. ನಂತರ ಪೊಲೀಸರೊಂದಿಗೆ ವಾಹನವನ್ನೇರಿ ಚಿತ್ರದುರ್ಗಕ್ಕೆ ತೆರಳಿದರು.