ಮುರುಘಾಶ್ರೀ ವಿಚಾರಣೆ ಮೇ 31ಕ್ಕೆ ಮುಂದೂಡಿಕೆ

KannadaprabhaNewsNetwork |  
Published : May 28, 2024, 01:09 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾಶ್ರೀ ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ನ್ಯಾಯಾಲಯ ವಿಚಾರಣೆ ಮುಂದೂಡುವ ತೀರ್ಮಾನ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀ ವಿಚಾರಣೆಯ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇ 31ಕ್ಕೆ ಮುಂದೂಡಿದೆ.

ಪ್ರಕರಣದ ಅಧಿಕೃತ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣ ನ್ಯಾಯಾಲಯ ವಿಚಾರಣೆ ಮುಂದೂಡುವ ತೀರ್ಮಾನ ಕೈಗೊಂಡಿದೆ. ಹಾಗಾಗಿ ಮೂರು ದಿನ ಬಿಟ್ಟು ಮತ್ತೆ ಮುರುಘಾಶ್ರೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ.

ಪೋಕ್ಸೋ ಪ್ರಕರಣದಲ್ಲಿ ರಾಜ್ಯ ಉಚ್ಚನ್ಯಾಯಾಲಯ ಈ ಮೊದಲು ಮುರುಘಾಶ್ರೀಗೆ ಜಾಮೀನು ನೀಡಿತ್ತು. ಜಾಮೀನು ಪಡೆದ ನಂತರ ಶರಣರು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿ ದಾವಣಗೆರೆ ಮಠದಲ್ಲಿದ್ದರು. ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಮೈಸೂರಿನ ಒಡನಾಡಿ ಸಂಸ್ಥೆಯವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಪರಿಣಾಮ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಿ ವಿಚಾರಣೆ ನಡೆಸಲು ಸೂಚಿಸಿತ್ತು. ಅಲ್ಲದೇ ನಾಲ್ಕು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶಿಸಿತ್ತು.

ಸುಪ್ರಿಂ ಕೋರ್ಟ್ ಜಾಮೀುನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಹದಿನೈದು ದಿನಗಳ ಹಿಂದೆ ಚಿತ್ರದುರ್ಗ ನ್ಯಾಯಾಲಯಕ್ಕೆ ಶರಣರಾಗಿದ್ದ ಮುರುಘಾಶ್ರೀಯ ನ್ಯಾಯಾಲಯ ನ್ಯಾಯಾಂಗ ಬಂಧನದಲ್ಲಿ ಇರಿಸಿತ್ತು. ಸೋಮವಾರ ಜೈಲಿನಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಹೈಕೋರ್ಟ್ ನಿಂದ ಕಡತ ಬಾರದ ಹಿನ್ನೆಲೆ ಹಾಗೂ ಚಾರ್ಜ್ ಶೀಟ್ ಲಭ್ಯವಿಲ್ಲದ ಕಾರಣಕ್ಕೆ ನ್ಯಾಯಾಲಯ ಮೇ 31ಕ್ಕೆ ವಿಚಾರಣೆ ಮುಂದೂಡಿತು.ಕಳಾಹೀನವಾಗಿದ್ದ ಮುಖ:

ಚಿತ್ರದುರ್ಗ ಜೈಲಿನಿಂದ ಮುರುಘಾಶ್ರೀಯ ಹನ್ನೊಂದು ಗಂಟೆ ಸುಮಾರಿಗೆ ಪೊಲೀಸರು ನ್ಯಾಯಾಲಯಕ್ಕೆ ಕರೆತಂದು ಕೋರ್ಟ್ ಹಾಲ್ ಪಕ್ಕದ ಆರೋಪಿಗಳ ಕೊಠಡಿಯಲ್ಲಿ ಇರಿಸಲಾಗಿತ್ತು. ಹದಿನೈದು ನಿಮಿಷಗಳ ಕಾದ ನಂತರ ಮುರುಘಾಶ್ರೀಯ ಕಟಕಟೆಯಲ್ಲಿ ನಿಲ್ಲಿಸಲಾಯಿತು. ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಕೆಲವೇ ನಿಮಿಷಗಳಲ್ಲಿ ವಿಚಾರಣೆ ಮುಂದೂಡಿ ಆದೇಶಿಸಿದರು.

ನ್ಯಾಯಾಲಯದ ಆದೇಶ ಪಡೆದು ಮರಳಿ ಜೈಲಿಗೆ ಹೋಗಲು ಪೊಲೀಸರಿಗೆ ಹತ್ತು ನಿಮಿಷಗಳ ಕಾಲಾವಕಾಶ ಬೇಕಾಯಿತು. ಅಲ್ಲಿಯವರೆಗೂ ಆರೋಪಿಗಳ ಕೊಠಡಿಯಲ್ಲಿ ಮೌನಕ್ಕೆ ಶರಣರಾಗಿದ್ದ ಮುರುಘಾಶ್ರೀ ಮುಖ ಕಳಾಹೀನವಾಗಿತ್ತು. ಯಾರೊಂದಿಗೂ ಮಾತನಾಡಲಿಲ್ಲ. ಬಸವಪ್ರಭು ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗಿ ಮುರುಘಾಶ್ರೀ ಜೊತೆ ಕೆಲವೊತ್ತು ನಿಂತೇ ಕಾಲ ಕಳೆದರು.

ಮುರುಘಾಶ್ರೀ ವಿಚಾರಣೆಗೆ ಹಾಜರಾಗುವಾಗಲೆಲ್ಲ ಭಕ್ತರು ಆಗಮಿಸಿ ಕುತೂಹಲದಿಂದ ವೀಕ್ಷಿಸುವ, ಅವರ ಕಣ್ಣಿಗೆ ಕಾಣಿಸಿಕೊಳ್ಳುವ ಪ್ರಯತ್ನಗಳ ಮಾಡುತ್ತಿದ್ದರು. ಆದರೆ ಸೋಮವಾರ ಅಂತಹ ದೃಶ್ಯಗಳು ಕಂಡು ಬರಲಿಲ್ಲ. ಸಹಜ ಆರೋಪಿಯಂತೆ ಮುರುಘಾಶ್ರೀ ನ್ಯಾಯಾಯಕ್ಕೆ ಬಂದು ಹೋದರು. ಒಂದಿಬ್ಬರು ವಕೀಲರು ಹಾಗೂ ಪೊಲೀಸರ ಹೊರತಾಗಿ ಮುರುಘಾಶ್ರೀ ಹತ್ತಿರ ಯಾರೂ ಸುಳಿಯಲಿಲ್ಲ. ಆವಿಗೆ ಬದಲು ಕಾಲಲ್ಲಿ ಚಪ್ಪಲಿ ಹಾಕಿದ್ದ ಮುರುಘಾಶ್ರೀ ಬಿರು ನಡಿಗೆಯಲ್ಲಿಯೇ ಪೊಲೀಸ್ ವಾಹನ ಏರಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ