ವಸ್ತು ಸಂಗ್ರಹಾಲಯಗಳು ಜ್ಞಾನಾಭಿವೃದ್ಧಿಯ ಸಂಕೇತ

KannadaprabhaNewsNetwork |  
Published : May 19, 2026, 04:00 AM IST
ಚನ್ನಮ್ಮನ ಕಿತ್ತೂರ | Kannada Prabha

ಸಾರಾಂಶ

ವಸ್ತು ಸಂಗ್ರಹಾಲಯಗಳು ಜ್ಞಾನಾಭಿವೃದ್ಧಿಯ ಸಂಕೇತಗಳಾಗಿವೆ. ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ವಸ್ತು ಸಂಗ್ರಹಾಲಯಗಳು ಜ್ಞಾನಾಭಿವೃದ್ಧಿಯ ಸಂಕೇತಗಳಾಗಿವೆ. ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕಿತ್ತೂರ ರಾಣಿಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚನ್ನಮ್ಮನ ಕಿತ್ತೂರು ಸಹಯೋಗದಲ್ಲಿ ಕಿತ್ತೂರ ರಾಣಿಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಆವರಣದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ಕೇಳುವುದಕ್ಕಿಂತ ವಸ್ತು ಸಂಗ್ರಹಾಲಯದಲ್ಲಿ ನೋಡಿ ತಿಳಿಯುವುದು ಪರಿಣಾಮಕಾರಿ ಹಾಗೂ ಶಾಶ್ವತ ಕಲಿಕೆಯಾಗುತ್ತದೆ ಎಂದರು.ವಿಭಜಿತ ಜಗತ್ತನ್ನು ಒಂದುಗೂಡಿಸುವ ವಸ್ತು ಸಂಗ್ರಹಾಲಯಗಳು ವಿಷಯದ ಕುರಿತು ಇತಿಹಾಸ ಪ್ರಾಧ್ಯಾಪಕ ಡಾ.ಸದಾಶಿವ ಮುಗಳಿ ವಿವರಿಸಿದ ಅವರು, ವಸ್ತು ಸಂಗ್ರಹಾಲಯಗಳ ಹಿನ್ನೆಲೆ, ಬೆಳೆದು ಬಂದ ಬಗೆ ಅವುಗಳ ಅಧ್ಯಯನದ ಮಹತ್ವ, ವಿವಿಧ ತೆರನಾದ ವಸ್ತು ಸಂಗ್ರಹಾಲಯದ ಕುರಿತು ವಿಸ್ತೃತವಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ವಸ್ತು ಸಂಗ್ರಹಾಲಯದ ಅಧ್ಯಯನದ ಅಗತ್ಯತೆಯನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಕ.ಸಾ.ಪ ಚನ್ನಮ್ಮನ ಕಿತ್ತೂರ ವತಿಯಿಂದ 2025-26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಕನ್ನಡ ವಿಷಯದಲ್ಲಿ 125/125 ಅಂಕಗಳನ್ನು ಪಡೆದ 40 ವಿದ್ಯಾರ್ಥಿಗಳನ್ನು ಹಾಗೂ ದ್ವಿತೀಯ ಭಾಷೆ ಕನ್ನಡದಲ್ಲಿ 100/100ಕ್ಕೆ ಅಂಕಗಳನ್ನು ಪಡೆದ 15 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪುಸ್ತಕ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.ಮುಖ್ಯ ಅತಿಥಿ ತಾಲೂಕು ದಂಡಾಧಿಕಾರಿ ಕಲಗೌಡ ಪಾಟೀಲ ಮಾತನಾಡಿ, ನಮ್ಮ ಸ್ಮಾರಕಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಂಪರೆ, ಸ್ಮಾರಕ, ಶಾಸನ ಅಧ್ಯಯನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.ಸಂಸ್ಥಾನ ಕಲ್ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.ಪೊಲೀಸ್‌ ಇಲಾಖೆಯ ಸಿಪಿಐ ಶಿವಾನಂದ ಗುಡುಗನಟ್ಟಿಯವರು ಸ್ಮಾರಕಗಳ ಅರಿವು ಎಲ್ಲರಿಗೂ ಅವಶ್ಯ ಎಂದು ತಿಳಿಸಿ ಸುಮಧುರವಾಗಿ ನಾಡು, ನುಡಿಯ ಪ್ರತಿಬಿಂಬಿಸುವ ಕನ್ನಡ ಹಾಡನ್ನು ಹಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಹೊಸಮನಿ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಶಿಕ್ಷಕಿ ವೈಶಾಲಿ ಅಳಗುಂಡಿ ಪ್ರಾರ್ಥಿಸಿದರು. ವಸ್ತು ಸಂಗ್ರಹಾಲಯದ ಕ್ಯೂರೇಟರ್ ರಾಘವೇಂದ್ರರವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಹಿನ್ನೆಲೆ ಮಹತ್ವದ ಬಗ್ಗೆ ಹೇಳುತ್ತ ವಸ್ತು ಸಂಗ್ರಹಾಲಯಗಳು ಜೀವಂತ ಇತಿಹಾಸದ ಪ್ರತೀಕ ಎಂದು ತಿಳಿಸಿದರು. ಶಿಕ್ಷಕ ಮಂಜುನಾಥ ಕಳಸಣ್ಣವರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಷಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಯ ಬಿ.ಸಿ.ಬಿದರಿ ನಡೆಸಿಕೊಟ್ಟರು. ಶಿಕ್ಷಕ ಎನ್.ಎಂ.ನಂದಿಹಳ್ಳಿ ವಂದಿಸಿದರು. ಮಹೇಶ ಹೊಂಗಲ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಾಜಿ ಗುಡಾಜಿ, ರಾಮಕೃಷ್ಣ ಇಲಕಲ್, ಮಹೇಶ ಚನ್ನಂಗಿ, ಪ್ರಾಚಾರ್ಯ ಪೆಂಟೇದ, ಕ.ಸಾ.ಪ ಸದಸ್ಯ ವಿವೇಕ ಕುರಗುಂದ, ಗಂಗಾಧರ ಹನಮಸಾಗರ, ವಿ.ಎಸ್.ನಂದಿಹಳ್ಳಿ, ನಾಗಯ್ಯ ಹುಲೆಪ್ಪನವರಮಠ, ಮಂಜುನಾಥ ಕರಿಶಿದ್ದನವರ, ಮಹಿಳಾ ಸದಸ್ಯರಾದ ಪ್ರಭಾವತಿ ಲದ್ದಿಮಠ, ಸೌಮ್ಯ ರಾಘವೇಂದ್ರ, ರಾಜೇಶ್ವರಿ ಕಳಸಣ್ಣವರ ಹಾಗೂ ಬೆಳ್ಳಿಚುಕ್ಕಿ ಮಹಿಳಾ ವೇದಿಕೆಯ ಸರ್ವ ಸದಸ್ಯರು ಹಾಜರಿದ್ದರು. ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ಹಾಜರಿದ್ದರು. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ
ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ