ಕರ್ನಾಟಕ ಸರಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ವಕ್ಫ್ ಮಂಡಳಿ ಮತ್ತು ಹಜ್ ಭವನ, ಮಸೀದಿ ಮೌಲ್ವಿಗಳ ಸಂಬಳ ಮುಂತಾದವುಗಳಿಗೆ ನೀಡುತ್ತದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳು ಸುಣ್ಣ ಬಣ್ಣ ಇಲ್ಲದೆ ಜೀರ್ಣೋದ್ಧಾರ ಇಲ್ಲದೇ ಶೀಥಿಲಗೊಂಡಿವೆ. ಅದರಲ್ಲಿ 4170 ದೇವಸ್ಥಾನಗಳು ಕಾಣೆಯಾಗಿವೆ. ಹಾಗಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಬಜೆಟ್‌ಲ್ಲಿ ಅನುದಾನ ಮಂಜೂರು ಮಾಡಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಮೋಹನ ಗೌಡ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕರ್ನಾಟಕ ಸರಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ವಕ್ಫ್ ಮಂಡಳಿ ಮತ್ತು ಹಜ್ ಭವನ, ಮಸೀದಿ ಮೌಲ್ವಿಗಳ ಸಂಬಳ ಮುಂತಾದವುಗಳಿಗೆ ನೀಡುತ್ತದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳು ಸುಣ್ಣ ಬಣ್ಣ ಇಲ್ಲದೆ ಜೀರ್ಣೋದ್ಧಾರ ಇಲ್ಲದೇ ಶೀಥಿಲಗೊಂಡಿವೆ. ಅದರಲ್ಲಿ 4170 ದೇವಸ್ಥಾನಗಳು ಕಾಣೆಯಾಗಿವೆ. ಹಾಗಾಗಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಬಜೆಟ್‌ಲ್ಲಿ ಅನುದಾನ ಮಂಜೂರು ಮಾಡಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಮೋಹನ ಗೌಡ ಆಗ್ರಹಿಸಿದ್ದಾರೆ.
ಬಾಗಲಕೋಟೆ ನಗರದಲ್ಲಿ ಕರ್ನಾಟಕ ಮಂದಿರ ಮಹಾಸಂಘ ಸೋಮವಾರ ಆಯೋಜಿಸಿದ್ದ ಪ್ರಾಂತೀಯ ಮಂದಿರ ಅಧಿವೇಶನದಲ್ಲಿ ಮಾತನಾಡಿದರು. 4 ಲಕ್ಷಕ್ಕಿಂತಲೂ ಹೆಚ್ಚು ಮಂದಿರಗಳು ಸರಕಾರದ ನಿಯಂತ್ರಣದಡಿಯಲ್ಲಿವೆ. ಈ ದೇವಸ್ಥಾನಗಳ ದೇವನಿಧಿಯಲ್ಲಿ ಭ್ರಷ್ಟಾಚಾರವಾಗುತ್ತಿದೆ. ಹಣ ಲೂಟಿ ಮಾಡಲು ಮಂದಿರಗಳನ್ನು ಉಪಯೋಗಿಸಲಾಗುತ್ತಿದೆ. ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಹಾಗಾಗಿ ಈ ಎಲ್ಲಾ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಬೇಕೆಂಬ ನಿರ್ಣಯ ಅಂಗೀಕಾರ ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕಗಲಿಗಲಿ ಶ್ರದ್ಧಾನಂದ ಆಶ್ರಮದ ಜನಾರ್ದನ ಸ್ವಾಮಿಗಳು ಮತ್ತು ದುಂಡಯ್ಯಸ್ವಾಮಿ ಹಿರೇಮಠ ಇವರು ದೀಪ ಪ್ರಜ್ವಲನೆ ಮಾಡಿ ದೇವಸ್ಥಾನಗಳ ಮೂಲಕ ಧರ್ಮ ಪ್ರಸಾರ ಹೇಗೆ ಮಾಡಬೇಕೆಂದು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡರವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಲವ್ ಜಿಹಾದ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಪ್ರಮುಖ ಕಾರಣ ಹಿಂದೂಗಳಿಗೆ ಧರ್ಮಶಿಕ್ಷಣದ ಅಭಾವ. ಹಾಗಾಗಿ ದೇವಸ್ಥಾನಗಳ ಮೂಲಕ ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡಬೇಕೆಂದರು.
ನ್ಯಾ. ಬಲದೇವ ಸಣ್ಣಕ್ಕಿಯರು ವಕ್ಫ್ ಮಂಡಳಿ ಮತ್ತು ದೇವಸ್ಥಾನ ನಿರ್ವಹಣೆಯ ದೃಷ್ಟಿಯಿಂದ ಕಾನೂನು ಮಾಹಿತಿ ನೀಡಿದರು. ಕೊನೆಯಲ್ಲಿ ದೇವಸ್ಥಾನಗಳ ರಕ್ಷಣೆ ಮತ್ತು ದೇವಸ್ಥಾನಗಳ ಮೂಲಕ ಧರ್ಮಪ್ರಸಾರ ಮಾಡಲು ಹೇಗೆ ಕೃತಿ ಮಾಡಬೇಕೆಂದು ಗುಂಪು ಚರ್ಚೆ ಮಾಡಲಾಯಿತು. ನಂತರ ನ್ಯಾ. ನಾರಾಯಣ ಯಾಜಿಯವರು ದೇವಸ್ಥಾನಗಳ ಸಮಸ್ಯೆಗಳ ಕುರಿತು ಸಲಹೆ ಮತ್ತು ಕಾನೂನಾತ್ಮಕ ಮಾರ್ಗದರ್ಶನ ಮಾಡಿದರು.
ಅಧಿವೇಶನದಲ್ಲಿ ಬಾಗಲಕೋಟೆ, ಬೆಳಗಾವಿ, ವಿಜಯಪುರ ಹಾಗೂ ಕಲ್ಬುರ್ಗಿ ಜಿಲ್ಲೆಯಿಂದ 150ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪ್ರತಿನಿಧಿಗಳು ಮತ್ತು ಮುಖ್ಯಸ್ಥರು ಭಾಗವಹಿಸಿದ್ದರು.
ದೇವಸ್ಥಾನಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನಗಳಿಗೆ ಭಕ್ತರಿಗಿಂತ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆಯವರು ದೇವಸ್ಥಾನಗಳ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಮೂರು ವರ್ಷಗಳಿಂದ ಅರ್ಚಕರಿಗೆ ತಸ್ತಿಕ ಹಣ ಬರುತ್ತಿಲ್ಲ.
ಪ್ರಭುಸ್ವಾಮಿ ಸರಗಣಾಚಾರಿ ಪ್ರಧಾನ ಅರ್ಚಕರು ವೀರಭದ್ರೇಶ್ವರ ದೇವಸ್ಥಾನ ಮುಚಖಂಡಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.