ಸಂಗೀತ ಮನುಷ್ಯನಿಗೆ ಅತಿ ಮುಖ್ಯ: ಸ್ವಾಮೀಜಿ

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಸಂಗೀತ ಮತ್ತು ಸಾಹಿತ್ಯದ ಬಗ್ಗೆ ತಿಳಿದಿರಬೇಕು.

ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆಯ ರಾಷ್ಟ್ರೀಯ ಸಂಗೀತೋತ್ಸವ-2025 ಮತ್ತು ರಾಗಶ್ರೀ ಸಂಸ್ಥೆಯ 23ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಡಿನಬಾಳದ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಂಗೀತ ಎನ್ನುವುದು ಮನುಷ್ಯನಿಗೆ ಅತಿ ಮುಖ್ಯ. ಸಂಗೀತ ಮತ್ತು ಸಾಹಿತ್ಯದ ಬಗ್ಗೆ ತಿಳಿದಿರಬೇಕು. ವೈದ್ಯಕೀಯ ನೆಲೆಯಲ್ಲೂ ಸಂಗೀತಕ್ಕೆ ವಿಶೇಷ ಮನ್ನಣೆ ಇದೆ. ಮನಸ್ಸು ಸಾವಧಾನ ಸ್ಥಿತಿಗೆ ಬರಲು ಸಂಗೀತ ಕೇಳಬೇಕು. ಸಂಗೀತ ಕೇಳಿದರೆ ಮನಸ್ಸು ತಿಳಿಯಾಗುತ್ತದೆ. ಸಂಗೀತ ಕೇಳಿದರೆ ಸ್ಮರಣಶಕ್ತಿ ಹೆಚ್ಚಾಗುತ್ತದೆ. ಸಂಗೀತದಲ್ಲಿ ಆಸಕ್ತಿ ಇದ್ದರೆ ಏಕಾಗ್ರತೆ ಹೆಚ್ಚಾಗುತ್ತದೆ‌‌‌. ಸಂಗೀತ ಸಂಸ್ಕಾರ ಬೆಳೆಸಿಕೊಂಡರೆ ಆ ವಿದ್ಯೆ ಮುಂದಿನ ಜನಾಂಗಕ್ಕೆ ಹೋಗುತ್ತದೆ. ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾ ಚಿಂತಕ ಡಾ. ಜಿ.ಎಲ್. ಹೆಗಡೆ, ಜಗತ್ತು ಭಾರತವನ್ನು ಗೌರವಿಸಲು ಹಲವು ಕಾರಣಗಳಿವೆ. ಅದರಲ್ಲಿ ಸಂಗೀತ, ಸಾಹಿತ್ಯವೂ ಒಂದು. ಸಂಗೀತ ಎಂದರೆ ಆರಾಧನಾ ಕಲೆ. ಸಂಗೀತ ಪ್ರದರ್ಶನ ಕಲೆಯಲ್ಲ. ಚತುರ್ವೇದದಿಂದ ಬಂದಿದ್ದು ನಾದ. ಮನುಷ್ಯನಿಗೆ ಸಂಸ್ಕಾರ ಕೊಡುವುದು ಸಂಗೀತ. ಮನಸ್ಸಿಗೆ ಶಿಕ್ಷಣ ನೀಡುವುದು ಸಂಗೀತ ಎಂದು ಹೇಳಿದರು.

ಪಂ. ಜಿ.ಆರ್. ಭಟ್ ಬಾಳೆಗದ್ದೆ ಅವರ ಸ್ಮರಣಾರ್ಥ ರಾಷ್ಟ್ರೀಯ ರಾಗಶ್ರೀ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ತಬಲಾ ಕಲಾವಿದ ಪಂ. ಗೋಪಾಲಕೃಷ್ಣ ಹೆಗಡೆ, ಕಲ್ಭಾಗ ಮತ್ತು ಪಂ. ಎನ್.ಎಸ್. ಹೆಗಡೆ, ಹಿರೇಮಕ್ಕಿ ಸಂಸ್ಮರಣೆ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಸಪ್ತಕದ ಮುಖ್ಯಸ್ಥರು ಜಿ.ಎಸ್. ಹೆಗಡೆ ಅವರಿಗೆ ನೀಡಿ ಗೌರವಿಸಲಾಯಿತು. ಇನ್ನು ರಾಗಶ್ರೀ ರಾಷ್ಟ್ರೀಯ ಸಮ್ಮಾನ್ ಗೌರವವನ್ನು ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಮೋನಿಯಂ ಕಲಾವಿದ ತನ್ಮಯ್ ದೇವಚಕೆ ಅವರಿಗೆ ನೀಡಲಾಯಿತು.

ಗೋಪಾಲಕೃಷ್ಣ ಹೆಗಡೆ, ಕಲ್ಭಾಗ ಮಾತನಾಡಿ, ಯಾವಾಗಲೂ ಕಲಾವಿದರ ಬದುಕೇ ವಿಭಿನ್ನ ಆಗಿರುತ್ತದೆ. ಕಲಾವಿದರು ಉದ್ಭವ ಮೂರ್ತಿಗಳಲ್ಲ. ಸಾಧನೆ ಎಂದರೆ ಯಾವುದು? ಸಿದ್ಧಿ ಅಂದರೆ ಯಾವುದು ಎಂದು ನನಗೆ ಇದುವರೆಗೂ ಅರ್ಥವಾಗಿಲ್ಲ. ಆಲಿಸುವ ಗುಣವನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಕಲಾವಿದನಿಗೆ ಸಮಾಜದ ಎಲ್ಲರೂ ಬೇಕು ಎಂದರು.

ಸಪ್ತಕದ ಜಿ.ಎಸ್. ಹೆಗಡೆ ಮಾತನಾಡಿ, ಈ ಗೌರವ ನನ್ನದಲ್ಲ. ಕಲ್ಪನೆಗಳು ಸಾಕಾರಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ಪ್ರಯತ್ನವನ್ನು ನಾವು ಯಾವತ್ತೂ ಕೈಬಿಡಬಾರದು ಎಂದರು.

ಪ್ರೊ. ನಾಗರಾಜ್ ಹೆಗಡೆ, ಅಪಗಾಲ ಅಭಿನಂದನಾ ನುಡಿಗಳನ್ನಾಡಿದರು. ಪ್ರೊ. ಎಸ್. ಶಂಭು ಭಟ್, ಸೀತಾರಾಮ ಎನ್. ಹೆಗಡೆ, ವೆಂಕಟರಮಣ ಹೆಗಡೆ, ಡಾ. ಜಿ.ಜಿ. ಹೆಗಡೆ ಉಪಸ್ಥಿತರಿದ್ದರು. ರಾಗಶ್ರೀ ವಾರ್ಷಿಕೋತ್ಸವದಲ್ಲಿ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿವಾನಂದ ಭಟ್ ಸ್ವಾಗತಿಸಿದರು. ಸಂಗೀತಾ ನಾಯ್ಕ ಪ್ರಾರ್ಥಿಸಿದರು. ರಾಮ ಭಟ್ ಮತ್ತು ಕೃಷ್ಣ ಭಟ್ ವೇದಘೋಷ ನಡೆಸಿದರು. ಭಾಗ್ಯಲಕ್ಷ್ಮಿ ಭಟ್ ಗುರುಸ್ತುತಿ ಹಾಡಿದರು. ಎನ್.ಜಿ. ಹೆಗಡೆ, ಕಪ್ಪೆಕೆರೆ ವಂದಿಸಿದರು. ನಾಗರಾಜ್ ಹೆಗಡೆ , ಖಾಸ್ಕಂಡ ಕಾರ್ಯಕ್ರಮ ನಿರೂಪಿಸಿದರು.

Share this article