ಮುಸ್ಲಿಂ ಬಾಂಧವರಿಂದ ಸಂಭ್ರಮದ ರಂಜಾನ್

KannadaprabhaNewsNetwork | Published : Apr 1, 2025 12:51 AM

ಸಾರಾಂಶ

ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ನಿಮಿತ್ತವಾಗಿ ಗುರುವಾರ ಹೊರವಲಯದ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ನಿಮಿತ್ತವಾಗಿ ಗುರುವಾರ ಹೊರವಲಯದ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಎಲ್ಲರೂ ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು. ಈದ್ಗಾದಲ್ಲಿ ಮುಸ್ಲಿಂ ಧರ್ಮಗುರುಗಳು ಬೋಧನೆ ಮಾಡುತ್ತಿದ್ದಂತೆಯೇ, ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡಿದರು. ಬಡವ - ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹುನನ್ನು ಪ್ರಾರ್ಥಿಸಿ, ಸುಖ, ಶಾಂತಿ, ಸಹಬಾಳ್ವೆ ನೆಮ್ಮದಿಯ ಜೀವನವನ್ನು ಕೋರಿದರು.

ಈ ಸಂದರ್ಭದಲ್ಲಿ ಬೋಧನೆ ಮಾಡಿದ ಧರ್ಮಗುರುಗಳು ಎಲ್ಲಾ ಧರ್ಮಗಳು ಬೋಧಿಸುವುದು ಮಾನವೀಯತೆಯನ್ನು, ದಿನೇ ದಿನೇ ಮಾನವೀಯತೆ ಕಡಿಮೆಯಾಗುತ್ತಿದೆ, ನಾವು ಅಲ್ಲಾನಲ್ಲಿ ಪ್ರಾರ್ಥಿಸುವುದೇನೆಂದರೆ ಎಲ್ಲರಿಗೂ ನೆಮ್ಮದಿಯನ್ನು ಕೊಟ್ಟು ಎಲ್ಲರೂ ಸುಖ-ಶಾಂತಿಯಿಂದ ಇರಲಿ ಎಂಬುದೇ ನಮ್ಮ ಸಾಮೂಹಿಕ ಪ್ರಾರ್ಥನೆ ಸದುದ್ದೇಶ ಎಂದರು

ಶಾಸಕ ಸಿ. ಪುಟ್ಟರಂಗಶೆಟ್ಟಿ ಈದ್ಗಾ ಮೈದಾನಕ್ಕೆ ಭೇಟಿ ಕೊಟ್ಟು ಮುಸ್ಲಿಂ ಬಾಂಧವರಿಗೆ ಶುಭಕೋರಿ, ಈದ್ಗಾ ಮೈದಾನದ ಅಭಿವೃದ್ಧಿಗೆ ೧೦ ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.

ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ:

ಕೇಂದ್ರ ಸರ್ಕಾರ ವಕ್ಫ್ ಕಾಯಿದೆ ತಿದ್ದುಪಡಿ ತರುವುದನ್ನು ವಿರೋಧಿಸಿ ಕೆಲ ಮುಸ್ಲಿಂ ಬಾಂಧವರು ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದರು.

ಎಸ್‌ಡಿಪಿಐ ಕಾರ್ಯಕರ್ತರು ಪ್ರಾರ್ಥನೆ ಮುಗಿದ ನಂತರ ಈದ್ಗಾ ಮೈದಾನದ ಹೊರಗೆ ನಿಂತು ವಕ್ಫ್ ಕಾಯಿದೆ ತಿದ್ದುಪಡಿ ತರುವುದನ್ನು ವಿರೋಧಿಸಿ ಹಾಗೂ ತನಿಖಾ ಏಜೆನ್ಸಿಗಳ ದುರುಪಯೋಗ ಮತ್ತು ಎಂ.ಕೆ. ಪೈಜಿಯವರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯವನ್ನು ಖುಷಿಯಿಂದಲೇ ವಿನಿಯಮ ಮಾಡಿಕೊಂಡರು.

ಗುರು-ಹಿರಿಯರು ಸೇರಿದಂತೆ, ಮಕ್ಕಳು, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಎಲ್ಲರೂ ಖುಷಿಯಿಂದ ಅಪ್ಪಿಕೊಂಡು ಸಂಭ್ರಮಿಸಿದರು.

ರಂಜಾನ್ ಹಬ್ಬ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಉಪವಾಸ ರೋಜಾ ಆಚರಣೆ ಮಾಡಿದ ಮುಸ್ಲಿಂ ಬಾಂಧವರು. ಹಬ್ಬದ ಮುನ್ನಾ ದಿನವೇ ಅದನ್ನು ಪೂರ್ಣಗೊಳಿಸಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ ಇದಕ್ಕೆ ತೆರೆ ಬಿದ್ದಿತು.

ಮಸೀದಿ, ಈದ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಶಕ್ತಿಗನುಸಾರವಾಗಿ ದಾನ ಮಾಡುತ್ತಿರುವುದು ಕಂಡು ಬಂದಿತು. ಅದಲ್ಲದೇ ಹಿರಿಯರು ಮಕ್ಕಳ ಕೈಗೂ ಕೂಡ ಹಣ ಕೊಟ್ಟು ದಾನ ಮಾಡಿಸಿದರು.

ತಮಗೆ ಆಪ್ತವಾಗಿರುವ ಹಿಂದೂ ಸ್ನೇಹಿತರನ್ನು ಮನೆಗೆ ಕರೆಯಿಸಿಕೊಂಡು ಅವರಿಗೂ ಸಿಹಿ ಜತೆಗೆ ಬಾಡೂಟದ ಭಕ್ಷ್ಯ ಭೋಜನಗಳನ್ನು ಬಡಿಸಿ ಖುಷಿಪಟ್ಟರು.

ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಜನರು ಸೇರಿದಂತೆ ಚಿಕ್ಕ ಚಿಕ್ಕ ಮಕ್ಕಳು ಪಾಲ್ಗೊಂಡು ಅಲ್ಲಾನ ಕೃಪೆಗೆ ಪಾತ್ರರಾದರು.

ರಂಜಾನ್ ಹಬ್ಬದ ನಿಮಿತ್ತ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Share this article