ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮೃತ ವಿದ್ಯಾರ್ಥಿನಿ ನೇಹಾ ನಿವಾಸಕ್ಕೆ ಭಾನುವಾರ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮಾಜ ಬಾಂಧವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಮ್ಮ ಪುತ್ರಿಯ ಹತ್ಯೆಗೆ ನ್ಯಾಯ ದೊರೆಯುವ ವರೆಗೂ ಸಮಾಜ ನಿಮ್ಮೊಂದಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಈ ಹತ್ಯೆ ನಡೆದಿರುವುದು ದುರ್ದೈವದ ಸಂಗತಿ. ಈ ಘಟನೆಯಿಂದಾಗಿ ನಮ್ಮ ಸಮಾಜಕ್ಕೂ ತೀವ್ರ ನೋವುಂಟು ಮಾಡಿದ್ದು, ಹಂತಕನಿಗೆ 90 ದಿನದೊಳಗೆ ಕಠಿಣ ಶಿಕ್ಷೆ ಆಗಬೇಕು. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮತ್ತು ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇದನ್ನು ತ್ವರಿತ ನ್ಯಾಯಾಲಯಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಆರೋಪಿ ಪರ ವಕಾಲತ್ತು ವಹಿಸಲ್ಲಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಶುಕ್ರವಾರ ಸಮಾಜದ ಮುತುವಲ್ಲಿ, ಮೌಲ್ವಿಗಳು ಮತ್ತು ಮುಖಂಡರ ಸಭೆ ಸೇರಿ ಚರ್ಚೆ ನಡೆಸಿದ್ದು, ಹುಬ್ಬಳ್ಳಿ ಮತ್ತು ಧಾರವಾಡದ ಯಾವೊಬ್ಬ ಮುಸ್ಲಿಂ ವಕೀಲರು ಆರೋಪಿ ಫಯಾಜ್ ಪರ ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದ್ದೇವೆ ಎಂದರು. ಈ ಪ್ರಕರಣದ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದರೆ ಮತ್ತು ಪ್ರೋತ್ಸಾಹಿಸಿದ್ದರೆ ಅವರ ಮೇಲೂ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಈ ಪ್ರಕರಣ ಇತ್ಯರ್ಥಗೊಳ್ಳುವ ವರೆಗೆ ನಿರಂಜನ ಹಿರೇಮಠ ಕುಟುಂಬದೊಂದಿಗೆ ಮುಸ್ಲಿಂ ಸಮಾಜವು ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು, ನಗರದ ಹಲವು ಮುತುವಲ್ಲಿಗಳು, ಮೌಲ್ವಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.