ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಯೂನಿವರ್ಸಲ್ ಸೇವಾ ಟ್ರಸ್ಟಿನ ಕಚೇರಿಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಅಕ್ಷರದವ್ವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿಗಳು ಸಮಾಜದ ಗುರುಗಳಿದ್ದಂತೆ. ಸಮಾಜದಲ್ಲಾಗುವ ಲೋಪ-ದೋಷಗಳನ್ನು ತಿದ್ದು ಸರಿದಾರಿಯಲ್ಲಿ ನಡೆಸುವಂತಾಗಬೇಕು. ಕಚ್ಚಾಟ ಮಾಡದೇ ತಮ್ಮಲ್ಲಿನ ದ್ವೇಷ ಬಿಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಭಾರತದ ಶಿಕ್ಷಣ ಸಂಸ್ಕಾರ ಮತ್ತು ಮೌಲ್ಯಯುತ ಜೀವನ ಕೊಡುತ್ತದೆ. ಆ ಮೂಲಕ ಉತ್ತಮ ಜೀವನದ ದಾರಿ ತೋರುತ್ತದೆ. ಮಾನವ ಜೀವನ ಕ್ಷಣಿಕವಾದುದು. ಶ್ರೀಮಂತರು ತಮ್ಮ ಆದಾಯ ಒಂದು ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು. ಇಂತಹ ಸೇವೆಯನ್ನು ಆತ್ಮ ಸಂತೋಷಕ್ಕಾಗಿ ಮಾಡಬೇಕೇ ಹೊರತು ಪ್ರಚಾರಕ್ಕಾಗಿ ಮಾಡಬಾರದು ಎಂದರು.
ಸಮಾಜದಲ್ಲಿನ ತಳಸಮುದಾಯದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೊಡುವ ಸಾಹಿತ್ಯವು ಹೋರಾಟದ ಒಂದು ಪ್ರಬಲ ಅಸ್ತ್ರವಾಗಿದೆ. ಯಾವುದೇ ಕಾವ್ಯದಲ್ಲಿ ಪ್ರತಿಭಟನೆಯ ದನಿಯಿರಬೇಕು. ಆಗ ಹೋರಾಟದ ಕಾವು ಇಮ್ಮಡಿಯಾಗುತ್ತದೆ ಎಂದರು.
ಸಮಾರಂಭವನ್ನು ಯೂನಿವರ್ಸಲ್ ಸೇವಾಟ್ರಸ್ಟ್ ಅಧ್ಯಕ್ಷ ಟಿ.ಎಂ.ಪ್ರಕಾಶ್ ಉದ್ಘಾಟಿಸಿದರು. ತಾಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುಂಚಣ್ಣ ಬಿ. ಕಲ್ಲಾರೆಪುರ ಅಧ್ಯಕ್ಷತೆ ವಹಿಸಿದ್ದರು. ದಸಾಪ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ ಆಶಯ ನುಡಿಗಳನ್ನಾಡಿದರು. ಹುಣಸೂರಿನ ಪೂರ್ಣಚಂದ್ರ ಅವರ ‘ಒಳಗಣ್ಣು ತರೆದು ನೋಡು’ ಕವನ ಸಂಕಲನವನ್ನು ಸಮಾಜ ಸೇವಕ ಎಂ. ವಿನಯ್ ಕುಮಾರ್ ಬಿಡುಗಡೆ ಮಾಡಿದರು.