ವೈದ್ಯಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ಶ್ವೇತಾ ಸಂಕನೂರ
ಕನ್ನಡಪ್ರಭ ವಾರ್ತೆ ಧಾರವಾಡಪ್ರತಿ ವೈದ್ಯರು ರೋಗಿಯ ಹಿತ ಬಯಸುತ್ತಾರೆಯೇ ಹೊರತು ಕೆಡಕಲ್ಲ. ಆದ್ದರಿಂದ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ವೈದ್ಯರ ಮೇಲೆ ನಂಬಿಕೆ ಇಡಬೇಕು. ಜತೆಗೆ ಅವರು ನೀಡುವ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆಂದು ಗದಗ ಸಂಕನೂರ ಆಸ್ಪತ್ರೆಯ ತೀವ್ರ ನಿಗಾ ಘಟಕದ ಮುಖ್ಯಸ್ಥೆ ಡಾ.ಶ್ವೇತಾ ಪ್ರಕಾಶ ಸಂಕನೂರ ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಹಾವೇರಿ ಮೂಲದ ಕಲಾ ಸ್ಪಂದನ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೈದ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ರೋಗಿಯ ಆರೋಗ್ಯ ಸುಧಾರಣೆಯೇ ವೈದ್ಯರ ಗುರಿ. ಕೆಲವು ಬಾರಿ ರೋಗಿಗಳು ಹಾಗೂ ಅವರ ಸಂಬಂಧಿಕರ ತಪ್ಪು ತಿಳಿವಳಿಕೆಯಿಂದ ವೈದ್ಯರ ಮೇಲೆ ಆರೋಪಗಳು ಉಂಟಾಗುತ್ತಿವೆ. ಯಾವುದೇ ಕಾರಣಕ್ಕೂ ವೈದ್ಯರು ರೋಗಿಗಳ ಗುಣಪಡಿಸುವುದೇ ಗುರಿಯಾಗಿಸಿ ಕೆಲಸ ಮಾಡುತ್ತಾರೆ ಎಂದರು.ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರ ಗ್ರಾಮದ ಕಾರ್ಮಿಕ ರೈತ ಮೌನೇಶಪ್ಪ ಕತ್ತಿ ಅವರ ಹೆಸರಿನಲ್ಲಿ ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ಕಳೆದ ಐದು ವರ್ಷಗಳಿಂದ ಕಲಾ ಸ್ಪಂದನದ ಮೂಲಕ ಮಾರ್ತಾಂಡಪ್ಪ ಕತ್ತಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ರೋಗಿಗಳು ಆಸ್ಪತ್ರೆಗೆ ಬಂದಾಗ ಇರುವು ಭಾವನೆಗಳು ಕಷ್ಟದಾಯಕವಾಗಿರುತ್ತವೆ. ಆದರೇ ಆರೋಗ್ಯವಾಗಿ ಮರಳಿ ಹೋಗುವಾಗ ಅವರ ನಗುಮುಖ ಕಂಡಾಗ ಸಿಗುವ ಆನಂದವೇ ನಮಗೆ ಶ್ರೀರಕ್ಷೆ ಎಂದರು.
ಆರೋಗ್ಯ ಸಮಾಜ:ಕಲಾ ಸ್ಪದನದ ಅಧ್ಯಕ್ಷರು ಮತ್ತು ಸ್ವರ್ಣ ಗ್ರುಪ್ ಆಫ್ ಕಂಪನಿಯ ನಿರ್ದೇಶಕ ಡಾ. ವಿ.ಎಸ್.ವಿ.ಪ್ರಸಾದ ಮಾತನಾಡಿ, ರೋಗಿಗಳು ವೈದ್ಯರನ್ನು ಅಕ್ಷರಶಃ ದೇವರೆಂದೇ ನಂಬುತ್ತಾರೆ. ಹಾಗೆಯೇ, ವೈದ್ಯರು ಸಹ ರೋಗಿಗಳನ್ನು ಅಷ್ಟೇ ಕಾಳಜಿಯುತವಾಗಿ ಚಿಕಿತ್ಸೆ ನೀಡುತ್ತಾರೆ.ವೈದ್ಯರನ್ನು ನಂಬಿ ಬಂದ ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕ. ಯಾರ ಮುಖ ಪ್ರಸನ್ನವಾಗಿದೆಯೋ,ಯಾರ ಹೃದಯದಲ್ಲಿ ಪ್ರೀತಿ ಇದೆಯೋ,ಯಾರ ಕೈಕಾಲುಗಳು ಪರೋಪಕಾರಕ್ಕಾಗಿ ಮಿಡಿಯುತ್ತಿವೆಯೋ ಅಂಥವರು ಯಾರಿಗೆ ತಾನೆ ಪೂಜ್ಯರೆನಿಸುವುದಿಲ್ಲ? ಅಂಥವರಲ್ಲಿ ವೈದ್ಯರೂ ಕೂಡ ಒಬ್ಬರು.ನಮ್ಮೆಲ್ಲರ ಆರೋಗ್ಯ ಸುಸ್ಥಿರವಾಗಿರಿಸಿ,ಸಮಾಜವನ್ನು ರೋಗಮುಕ್ತವನ್ನಾಗಿಸಿ ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾತೃಗಳೇ ಆ ವೈದ್ಯರು ಎಂದರು.
ಸಾನ್ನಿಧ್ಯ ವಹಿಸಿದ್ದ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ ಸಂಕನೂರ, ಪ್ರಸ್ತುತ ಹೆತ್ತ ತಂದೆ ತಾಯಿಯನ್ನು ನಂಬದ ಮಕ್ಕಳಿದ್ದಾರೆ.ಆದರೆ ವೈದ್ಯರನ್ನು ಮತ್ತು ಅವರು ಹೇಳಿದ ಮಾತುಗಳನ್ನು ಎಲ್ಲರೂ ನಂಬುತ್ತಾರೆ.ಅಂತಹ ನಂಬಿಕೆಯ ಕ್ಷೇತ್ರ ಅದು ವೈದ್ಯಕೀಯ ಕ್ಷೇತ್ರ. ಆದರೆ ಅದನ್ನು ಉಳಿಸಿಕೊಳ್ಳುವ ಹೊಣೆ ವೈದ್ಯರು ಹೊರಬೇಕು ಎಂದರು.ಚಿಂತಕ ಮೋಹನ ಸಿದ್ಧಾಂತಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸವಿತಾ ಅಮರಶೆಟ್ಟಿ, ಚಿಕ್ಕಮಕ್ಕಳ ತಜ್ಞರಾದ ಡಾ.ಕವನ ದೇಶಪಾಂಡೆ, ಕೃಷ್ಣಾಜಿ ಚವ್ಹಾಣ, ಎಂ.ನಾರಾಯಣರೆಡ್ಡಿ ಹಾಗೂ ಎಂ.ಎಸ್. ಫರಾಸ, ಕುಮಾರ ಬೆಕ್ಕೇರಿ ಇದ್ದರು. ಮುಂಡಗೋಡ ವೈದ್ಯರಾದ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಸತ್ಯನಾರಾಯಣ ಮಾಸ್ತಮ್ಮನವರ ಆಯ್ಕೆಯ ಕುರಿತು ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ಧಾರವಾಡದ ನೃತ್ಯ ತಂಡದ ಮುಖ್ಯಸ್ಥರು,ನೃತ್ಯ ನಿರ್ದೇಶಕರನ್ನು ಗೌರವಿಸಲಾಯಿತು.ಯುವಗಾಯಕರಾದ ಮಹಾನಂದಾ ಗೋಸಾವಿ ಹಾಗೂ ಪ್ರೇಮಾನಂದ ಶಿಂಧೆ ತಂಡದಿಂದ ಭಾವಗೀತೆಗಳ ಸಂಗಮ ನಡೆಯಿತು. ತಬಲಾ ಮಲ್ಲೇಶ ಹೂಗಾರ,ಹಾರ‍್ಮೋನಿಯಂ ಬಸವರಾಜ ಹೂಗಾರ ಸಾಥ್ ನೀಡಿದರು. ಮೇಘಾ ಪಾಟೀಲ ನಿರೂಪಿಸಿದರು.