ಇಲ್ಲಿಯವರೆಗೂ ನನ್ನ ರಾಜಕೀಯ ಲೆಕ್ಕಾಚಾರ ತಪ್ಪಿಲ್ಲ: ಡಿಕೆಶಿ

KannadaprabhaNewsNetwork |  
Published : Sep 11, 2026, 02:00 AM IST
ಸಿಎಂ ಡಿಕೆಶಿ | Kannada Prabha

ಸಾರಾಂಶ

ರಾಜ್ಯ ರಾಜಕೀಯದಲ್ಲಿ ಅಂಬರೀಶ್ ಅವರ ರಾಮನಗರ ಉಪಚುನಾವಣೆಯಿಂದ ಹಿಡಿದು 2023ರ ಸಾರ್ವತ್ರಿಕ ಚುನಾವಣೆವರೆಗೆ ನನ್ನ ರಾಜಕೀಯ ಲೆಕ್ಕಾಚಾರ ತಪ್ಪಿಲ್ಲ. ರಾಜಕೀಯ ಭವಿಷ್ಯ ನನ್ನ ಲೆಕ್ಕಾಚಾರದಂತೆಯೇ ನಡೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ರಾಜ್ಯ ರಾಜಕೀಯದಲ್ಲಿ ಅಂಬರೀಶ್ ಅವರ ರಾಮನಗರ ಉಪಚುನಾವಣೆಯಿಂದ ಹಿಡಿದು 2023ರ ಸಾರ್ವತ್ರಿಕ ಚುನಾವಣೆವರೆಗೆ ನನ್ನ ರಾಜಕೀಯ ಲೆಕ್ಕಾಚಾರ ತಪ್ಪಿಲ್ಲ. ರಾಜಕೀಯ ಭವಿಷ್ಯ ನನ್ನ ಲೆಕ್ಕಾಚಾರದಂತೆಯೇ ನಡೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಆಗಿ 100 ದಿನ ಪೂರೈಸಿದ ಹಿನ್ನೆಲೆ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, 90 ರ ದಶಕದಿಂದಲೂ ನನ್ನ ಪ್ರತಿ ರಾಜಕೀಯ ಹೆಜ್ಜೆಗೂ ಲೆಕ್ಕಾಚಾರ ಇತ್ತು. 1996ರಲ್ಲಿ ರಾಮನಗರ ಉಪ ಚುನಾವಣೆ ವೇಳೆ ಅಂಬರೀಶ್‌ ಅವರ ಚುನಾವಣೆ ನಡೆಯಿತು. ಆಗ 9,000 ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಕರ್ತರಿಗೆ ಹೇಳಿದ್ದೆ. ಅವರು ಅದನ್ನೇ ಬರೆದಿದ್ದರು. ಆ ಭವಿಷ್ಯ ನಿಜವಾಯಿತು.

ಇನ್ನು 2018ರ ಚುನಾವಣೆ ವೇಳೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿತ್ತು. ಆಗ ನಾನು ಮಾಡಿಸಿದ್ದ ಸ್ಯಾಂಪಲ್‌ ಸಮೀಕ್ಷೆಯಿಂದ ಕಾಂಗ್ರೆಸ್‌ಗೆ ಅಧಿಕಾರ ಇಲ್ಲ ಎಂಬುದು ತಿಳಿಯಿತು.

ಆಗ ಡಿ.ಕೆ ಸುರೇಶ್‌ಗೆ ಕರೆದು ಕಾಂಗ್ರೆಸ್‌ 80 ಸ್ಥಾನ ಮಾತ್ರ ಬರಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಾನಸಿಕವಾಗಿ ಸಿದ್ಧವಾಗಿ ಎಂದು ಹೇಳಿದ್ದೆ ಎಂದು ರಾಜಕೀಯ ಗುಟ್ಟು ಬಹಿರಂಗಪಡಿಸಿದರು.

ಇನ್ನು 2023ರ ಚುನಾವಣೆಯಲ್ಲೂ ರಾಷ್ಟ್ರೀಯ ಮಾಧ್ಯಮದ ಪತ್ರಕರ್ತರಿಗೆ 136 ಸ್ಥಾನ ಗೆಲ್ಲುವುದಾಗಿ ಹೇಳಿದ್ದೆ. ಅಶೋಕ್‌ ಅವರಿಗೂ 136 ನಂಬರ್ ಬಗ್ಗೆ ಹೇಳಿದ್ದೆ. ನನಗೆ ರಾಜಕೀಯ, ಆರ್ಥಿಕ ಶಕ್ತಿ ಇದೆ. ರಾಜಕೀಯದಲ್ಲಿ ನನಗೆ ನನ್ನದೇ ಆದ ಇತಿಹಾಸ, ಸಂಘಟನೆಯ ಶಕ್ತಿ ಹಾಗೂ ಶ್ರಮ ಇದೆ ಎಂದರು.

ನನಗೆ ಇನ್ನೂ 20 ತಿಂಗಳು ಮಾತ್ರ ಅವಕಾಶವಿದೆ. ಮೂರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಇದೆಲ್ಲದರ ನಡುವೆಯೂ ಜನಪರವಾಗಿ ಅಂದುಕೊಂಡಿದ್ದನ್ನು ಮಾಡುತ್ತೇನೆ ಎಂದರು.

ಜಾತಿಗಣತಿ ವರದಿ ಕಾಂಗ್ರೆಸ್‌ ಬದ್ಧತೆ:

ಜಾತಿವಾರು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ವರದಿಗೆ ನೂರಾರು ಕೋಟಿ ರು. ಖರ್ಚು ಮಾಡಿದ್ದು, ಅದು ಕಾಂಗ್ರೆಸ್‌ನ ಬದ್ಧತೆ. ನ್ಯಾಯಾಲಯದ ಸೂಚನೆಯಂತೆ ಮುಂದುವರೆಯುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಓಬಿಸಿ, ಎಸ್ಸಿ-ಎಸ್ಟಿ ನಮ್ಮ ಪಕ್ಷದ ಬಲ. ಎಲ್ಲರಿಗೂ ನ್ಯಾಯ ಕೊಡಬೇಕಾಗಿರುವುದು ನಮ್ಮ ಬದ್ಧತೆ. ಅದಕ್ಕೆ ನಾನನು ಸಹ ಬದ್ಧರಾಗಿದ್ದೇವೆ. ಸಮೀಕ್ಷೆ ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ನ್ಯಾಯಾಲಯದಲ್ಲಿ ಇರುವುದರಿಂದ ಅದನ್ನು ತೆರೆಯಲು ಹೋಗಿಲ್ಲ ಎಂದರು.ಅದಾನಿ ಭೇಟಿ ಬಗ್ಗೆ ರಾಹುಲ್‌ ಕೇಳಿಲ್ಲ:

ನಾನು ಮುಖ್ಯಮಂತ್ರಿ, ಗೌತಮ್‌ ಅದಾನಿ ಅವರು ಉದ್ಯಮಿ. ಅವರು ಸಿಮೆಂಟ್‌ ಕಾರ್ಖಾನೆ, ಇಂಧನ ಮತ್ತಿತರ ಯೋಜನೆಗಳಲ್ಲಿ ಹೂಡಿಕೆ ಉದ್ದೇಶ ಹೊಂದಿದ್ದಾರೆ. ಹೀಗಾಗಿ ನನ್ನ ಭೇಟಿ ಮಾಡಿದರೆ ಬೇಡ ಎನ್ನಲಾಗುತ್ತದೆಯೇ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇನ್ನು ನನಗೆ ರಾಹುಲ್‌ಗಾಂಧಿ ಅವರು ಅಥವಾ ಪಕ್ಷದವರು ಯಾರೂ ಈ ಬಗ್ಗೆ ಪ್ರಶ್ನೆ ಮಾಡಿಲ್ಲ ಎಂದು ತಿಳಿಸಿದರು.ಮೋದಿ ಜತೆಗಿನ ಚರ್ಚೆ ಬಹಿರಂಗಪಡಿಸಲ್ಲ:

ಪ್ರಧಾನಮಂತ್ರಿ ಮೋದಿ ಅವರಿಗೆ ನಮ್ಮ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್‌ ಅಂತಹವರು ಯಾರೂ ಇಲ್ಲವಲ್ಲಪ್ಪ ಎನಿಸಿರಬಹುದು. ಹೀಗಾಗಿ ವೈಯಕ್ತಿಕವಾಗಿ ಆಪ್ತವಾಗಿ ಮಾತನಾಡಿದ್ದಾರೆ. ಅವರೊಂದಿಗಿನ ಚರ್ಚೆ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.ಕನಿಷ್ಠ ವೇತನ ಪರಿಷ್ಕರಣೆಗೆ ಚರ್ಚೆ:

ಕಾರ್ಮಿಕ ಇಲಾಖೆಯು ಕನಿಷ್ಠ ವೇತನ ಪರಿಷ್ಕರಣೆ ಮಾಡಿರುವ ವಿಧಾನದ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೈಗಾರಿಕೆಗಳು ಸರ್ಕಾರದ ಬಳಿ ಬಂದು ಚರ್ಚಿಸಿವೆ. ಯಾರಿಗೆ ಕನಿಷ್ಠ ವೇತನ ನೀಡಬೇಕೋ ಅದನ್ನು ಕೊಡಲಿ. ಆದರೆ ಕ್ಷೇತ್ರವಾರು ಅದನ್ನು ಮರು ನಿಗದಿ ಮಾಡಲು ಸಮಿತಿ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕೈಯಲ್ಲಿ ಮೂಡಿ ಬಂದ ಮಣ್ಣಿನ ಗಣೇಶ
ಹನೂರಿನಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ: ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ