ಮೈಸೂರು ಬೆಂಗಳೂರು ತುಮಕೂರು ನಾಲ್ಕು ಪಥದ ರೈಲ್ವೆ ಹಳಿಗಳಾಗಿ ಮೇಲ್ದರ್ಜೆಗೆ

KannadaprabhaNewsNetwork |  
Published : May 06, 2026, 01:15 AM IST
5ಕೆಆರ್ ಎಂಎನ್ 6.ಜೆಪಿಜಿರಾಮನಗರದ ರೈಲ್ವೆ ನಿಲ್ದಾಣದಲ್ಲಿ  ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿಸಿದರು. | Kannada Prabha

ಸಾರಾಂಶ

ಹೆಜ್ಜಾಲದಿಂದ- ಕನಕಪುರ- ಚಾಮರಾಜನಗರ ಹೊಸ ರೈಲು ಯೋಜನೆ ಆರಂಭ ಆಗಬೇಕಿದೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸಿದ್ಧನಿದ್ದೇನೆ.

ಬೆಂಗಳೂರಿಂದ ಕೋಲಾರ ಮಾರ್ಗವಾಗಿ 43 ಕಿ.ಮೀ ರೈಲ್ವೆ ಮಾರ್ಗದ ಅಭಿವೃದ್ಧಿಗೆ ಕಾರ್ಯ ಯೋಜನೆ: ಸಚಿವ ವಿ. ಸೋಮಣ್ಣ

ಕನ್ನಡಪ್ರಭ ವಾರ್ತೆ ರಾಮನಗರ ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು - ತುಮಕೂರು ರೈಲ್ವೆ ಮಾರ್ಗಗಳನ್ನು ನಾಲ್ಕು ಪಥದ ರೈಲ್ವೆ ಹಳಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಹೊಸಕೋಟೆ, ಕೋಲಾರ ಮಾರ್ಗವಾಗಿ 43 ಕಿಲೋ ಮೀಟರ್ ರೈಲ್ವೆ ಮಾರ್ಗದ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.ಹೆಜ್ಜಾಲದಿಂದ- ಕನಕಪುರ- ಚಾಮರಾಜನಗರ ಹೊಸ ರೈಲು ಯೋಜನೆ ಆರಂಭ ಆಗಬೇಕಿದೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟರೆ ಅದನ್ನು ಅನುಷ್ಠಾನ ಮಾಡಲು ಸಿದ್ಧನಿದ್ದೇನೆ, ಅದಕ್ಕೆ ಮುಖ್ಯಮಂತ್ರಿಗಳು ಕುಶಾಲನಗರ- ಮೈಸೂರು, ಹೆಜ್ಜಾಲ- ಚಾಮರಾಜನಗರ ರೈಲ್ವೆ ಯೋಜನೆಗಳನ್ನು ತಕ್ಷಣದಿಂದ ಕೈಗೆತ್ತಿಕೊಳ್ಳುವುದಿಲ್ಲ ಎಂದು ನನಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರ ಜಮೀನು ನೀಡಿದರೆ ತಕ್ಷಣ ಯೋಜನೆ ಪ್ರಾರಂಬಿಸಲಾಗುವುದು ಎಂದು ಹೇಳಿದರು.ಕರ್ನಾಟಕದಲ್ಲಿ 45 ಸಾವಿರ ಕೋಟಿಗಳ ವೆಚ್ಚದ ಹಳೆಯ ರೈಲ್ವೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ತುಮಕೂರು- ರಾಯದುರ್ಗ, ತುಮಕೂರು- ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ- ಕುಡುಪಿ, ಧಾರವಾಡ- ಬೆಳಗಾವಿ, ಹುಬ್ಬಳ್ಳಿ- ಅಂಕೋಲಾ, ಗದಗ- ವಾಡಿ, ಸಿರಿಗೇರ- ರಾಯಚೂರು, ಶಿವಮೊಗ್ಗ- ರಾಣಿಬೆನ್ನೂರು, ಕಡೂರು-ಚಿಕ್ಕಮಂಗಳೂರು- ಬೇಲೂರು, ಹಾಸನ- ಬೇಲೂರು, ಮಾರಿಕುಪ್ಪಂ ಯೋಜನೆಗಳು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಕೊಡುಗೆಗಳಾಗಿವೆ ಎಂದು ತಿಳಿಸಿದರು.ಮಂಗಳೂರಿಗೆ ಹೊಸದಾಗಿ ವಂದೇ ಭಾರತ್ ರೈಲು:

55 ಕಿ.ಮೀಟರ್ ದೂರದ ಬೆಂಗಳೂರು-ಹಾಸನ-ಸಕಲೇಶಪುರ-ಕುಕ್ಕೆ ಸುಬ್ರಮಣ್ಯ-ಮಂಗಳೂರಿಗೆ ಹೊಸದಾಗಿ ವಂದೇ ಭಾರತ್ ರೈಲು ಆರಂಭಿಸಲಾಗುವುದು. ಕೋವಿಡ್ ಸಮಯದಲ್ಲಿ ನಿಲುಗಡೆಯಾಗಿದ್ದ 37 ರೈಲುಗಳ ಸಂಚಾರವನ್ನು ಪುನರ್ ಆರಂಭಿಸಿವೆ ಎಂದರು.

7 ಹೊಸ ರೈಲು ಕಾರಿಡಾರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನೈ, ಚೆನೈ-ಬೆಂಗಳೂರು, ದೆಹಲಿ-ವಾರಣಾಸಿ, ವಾರಣಾಸಿ-ಸಿರಿಗೇರಿಗೆ ಹೈಸ್ಪೀಡ್ ರೈಲುಗಳನ್ನು ಆರಂಭಿಸಲಾಗುತ್ತಿದೆ. ಅದರ ಜೊತೆಗೆ ಬೆಂಗಳೂರು - ಪುಣೆ ಸೇರಿದಂತೆ ಒಟ್ಟು 8 ಹೈ ಸ್ಪೀಡ್ ರೈಲು ಕಾರಿಡಾರ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ರಾಮನಗರದಲ್ಲಿ 4 ರಿಂದ 5 ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಾಣವಾಗಬೇಕಿದೆ. ಈ ಮೇಲ್ಸೇತುವೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಪ್ರತಿದಿನ 60-70 ಸಾವಿರ ಜನರು ಸಂಚರಿಸುತ್ತಾರೆ. ಅದೇ ರೀತಿ ರಾಮನಗರ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್ ಮತ್ತು ವಿಶ್ರಾಂತಿ ಗೃಹ ನಿರ್ಮಿಸುವಂತೆ ಮನವಿ ಮಾಡಿದರು.ಈ ವೇಳೆ ಸಂಸದ ಡಾ. ಸಿ.ಎನ್. ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶ್ವಂತ್ ವಿ. ಗುರುಕರ್,ರೈಲ್ವೇ ವಿಭಾಗೀಯ ಅಧಿಕಾರಿ (ಎಡಿಎಲ್‌ಎಂ) ಪ್ರವೀಣ್ ಕಾತರಕಿ ಮತ್ತಿತರರು ಹಾಜರಿದ್ದರು.

...ಕೋಟ್...ಬೆಂಗಳೂರು-ರಾಮನಗರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ರಾಮನಗರ ರೈಲ್ವೇ ನಿಲ್ದಾಣವನ್ನು 11 ಕೋಟಿ ರು.ಗಳ ಮೊತ್ತದಲ್ಲಿ, ಚನ್ನಪಟ್ಟಣ 12 ಕೋಟಿ ರು.ಗಳ ಮೊತ್ತದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಹಾಗೂ ಬಿಡದಿ ರೈಲ್ವೇ ನಿಲ್ದಾಣವನ್ನು ಟೊಯೋಟಾ ಕಿರ್ಲೋಸ್ಕರ್ ಸಹಕಾರದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು- ವಿ.ಸೋಮಣ್ಣ, ಕೇಂದ್ರ ರೈಲ್ವೆ ರಾಜ್ಯ ಸಚಿವರು.-------5ಕೆಆರ್ ಎಂಎನ್ 6.ಜೆಪಿಜಿರಾಮನಗರದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೌಲಭ್ಯ ಸಮರ್ಥ ಬಳಕೆ ಅಗತ್ಯ
ಸಾಮೂಹಿಕ ವಿವಾಹಗಳು ಸಾಮಾಜಿಕ ಬದಲಾವಣೆ ಅಸ್ಮಿತೆ