ಕೋಲಾರದಲ್ಲಿ ಭೂಮಾಪಕರ ಪ್ರತಿಭಟನಾ ರ್‍ಯಾಲಿ

KannadaprabhaNewsNetwork |  
Published : May 06, 2026, 01:15 AM IST
೫ಕೆಎಲ್‌ಆರ್-೬ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಡಿಸಿ ಡಾ.ಎಂ.ಆರ್.ರವಿರಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ನಗರದ ಬಂಗಾರಪೇಟೆ ವೃತ್ತದ ಅಂಬೇಡ್ಕರ್ ಪ್ರತಿಮೆಗೆ, ಎಂಜಿ ರಸ್ತೆಯ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜಿಲ್ಲಾಡಳಿತ ಭವನದವರೆಗೆ ಕಾಲ್ನಡಿಗೆ ಜಾಥಾ ಮೂಲಕ ನಗರದ ಹೊವಲಯದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಪರವಾನಗಿ ಭೂ ಮಾಪಕರು ಪ್ರತಿಭಟನೆ ರ್‍ಯಾಲಿ ನಡೆಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಭೂ ದಾಖಲೆಗಳ ಉಪನಿರ್ದೇಶಕ ಬಿ.ಕೆ. ಸಂಜಯ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಭೂ ಮಾಪಕರ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ಪಿ. ಭಾರ್ಗವ ಮಾತನಾಡಿ, ಸರ್ಕಾರಿ ಪರವಾನಗಿ ಭೂಮಾಪಕರು ಸುಮಾರು ೨೩ ವರ್ಷದಿಂದ ರೈತರು ಮತ್ತು ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆಗೆ ಹೆಸರು ತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ವಯೋಮಿತಿ ಕಳೆದುಕೊಂಡಿದ್ದು, ಭೂಮಾಪಕರ ಕೆಲಸ ಬಿಟ್ಟು, ಬೇರೆ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ನಮ್ಮ ಸೇವೆಯನ್ನು ಪರಿಗಣಿಸಿ, ಸರ್ಕಾರಿ ಭೂಮಾಪಕರ ಹುದ್ದೆಯಲ್ಲಿ ವಿಲೀನಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಜೀತದಾಳುಗಳಿಗಿಂತ ಕಡೆ:

ಇಲಾಖೆ ಮತ್ತು ಸರ್ಕಾರ ನಿಗದಿ ಮಾಡಿರುವ ಸೇವಾ ಶುಲ್ಕ ಅವೈಜ್ಞಾನಿಕವಾಗಿದ್ದು, ನಮ್ಮ ಸ್ಥಿತಿ ಜೀತದಾಳುಗಳ ಪರಿಸ್ಥಿತಿಗಿಂತ ಕನಿಷ್ಠವಾಗಿರುವುದರಿಂದ ನಾವು ಕೆಲಸ ನಿರ್ವಹಿಸಲು, ಜೀವನ ನಡೆಸಲು ಆಗದೇ ಇರುವಂತಹ ಪರಿಸ್ಥಿತಿಗೆ ಬಂದಿದ್ದೇವೆ ಎಂದು ನುಡಿದರು.

ಸರ್ಕಾರ ದಿನ ಕಳೆದಂತೆ ಕೆಲಸದ ಒತ್ತಡ, ಜವಾಬ್ದಾರಿ ಹೆಚ್ಚಿಸುತ್ತಲೇ ಇದೇ. ಆದರೆ ಪರವಾನಗಿ ಭೂಮಾಪಕರಿಗೆ ತಿಂಗಳಿಗೆ ಸಂಬಳ, ಸವಲತ್ತು ಮಾತ್ರ ಶೂನ್ಯ, ಪೂರ್ಣ ಸ್ಕೆಚ್ ಆಗುವ ಕಡತಕ್ಕೆ ೧೨೦೦ ರು. ಮಾತ್ರ ನೀಡುತ್ತಿದೆ, ಶ್ರಮವಹಿಸಿ ಕೆಲಸ ಮಾಡಿ ಕಾರಣಾಂತರದಿಂದ ಸ್ಕೆಚ್ ಆಗದ ಕಡತಕ್ಕೆ ಕೇವಲ ೩೬೦ರು. ಮಾತ್ರ ನೀಡಲಾಗುತ್ತಿದೆ. ಅದರಲ್ಲೂ ಇಲಾಖೆ ವಿಳಂಬವಾಗಿ ಹಣ ಪಾವತಿ ಮಾಡುತ್ತದೆ. ಸರ್ಕಾರ ಕೂಡಲೇ ಪರವಾನಗಿ ಭೂಮಾಪಕರನ್ನು ಸರ್ಕಾರಿ ಭೂ ಮಾಪಕನ್ನಾಗಿ ಕಾಯಂಗೊಳಿಸಿ ಸಮಾನ ಕೆಲಸ-ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಸೇವಾ ಭದ್ರತೆ ಇಲ್ಲ:

ಪರವಾನಗಿ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಕೆ. ಶಿವಾನಂದ ಮಾತನಾಡಿ, ಸರ್ಕಾರದ ಪರವಾನಗಿ ಪಡೆದು ಸೇವೆ ಸಲ್ಲಿಸುತ್ತಿರುವ ಭೂ ಮಾಪಕರಿಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿ ಭೂ ಮಾಪಕರಂತೆ ಸಮಾನ ಕೆಲಸ ಮಾಡುತ್ತಿರುವ ನಮಗೆ ಸಮಾನ ವೇತನ ನೀಡಬೇಕು. ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ರ್‍ಯಾಲಿಯಲ್ಲಿ ಅಖಿಲ ಕರ್ನಾಟಕ ಪರವಾನಗಿ ಭೂ ಮಾಪಕರ ಸಂಘದ ಉಪಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಸಿದ್ದರಾಜು, ಪದಾಧಿಕಾರಿಗಳಾದ ಷಣ್ಮುಗ, ದ್ವಾರಕೀಶ್, ಬಚ್ಚೇಗೌಡ, ರಾಜಣ್ಣ ತುಮಕೂರು ಅಧ್ಯಕ್ಷ ನಾಗೇಶ್, ಮೈಸೂರು ಅಧ್ಯಕ್ಷ ಪ್ರಾಣೇಶ್, ರಾಮನಗರ ಅಧ್ಯಕ್ಷ ನವಕೋಟಿ, ಬೆಂಗಳೂರು ನಗರ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಬೆಂಗಳೂರು ಗ್ರಾಮಾಂತರ ವೆಂಕಟರೆಡ್ಡಿ, ವಿಜಯನಗರ ಅಧ್ಯಕ್ಷ ಮಹಲಿಂಗಪ್ಪ, ಶಿವಮೊಗ್ಗ ಅಧ್ಯಕ್ಷ ಶಶಿ, ಕೋಲಾರ ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ಮಾಲೂರು ಅಧ್ಯಕ್ಷ ಚೆಲುವಯ್ಯ ಸ್ವಾಮಿ, ಬಂಗಾರಪೇಟೆ ಅಧ್ಯಕ್ಷ ಪಾಂಡುರಂಗಯ್ಯ, ಮುಳಬಾಗಿಲು ಅಧ್ಯಕ್ಷ ಸೋಮಶೇಖರಯ್ಯ, ಶ್ರೀನಿವಾಸಪುರ ಅಧ್ಯಕ್ಷ ವೇಣು ಇದ್ದರು.

-----೫ಕೆಎಲ್‌ಆರ್-೬

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ಕೋಲಾರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಡಿಸಿ ಡಾ.ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೌಲಭ್ಯ ಸಮರ್ಥ ಬಳಕೆ ಅಗತ್ಯ
ಸಾಮೂಹಿಕ ವಿವಾಹಗಳು ಸಾಮಾಜಿಕ ಬದಲಾವಣೆ ಅಸ್ಮಿತೆ