6 ರಿಂದ 11ರವರೆಗೆ ಮೈಸೂರು ಚಲೋ

KannadaprabhaNewsNetwork |  
Published : Dec 04, 2025, 01:15 AM IST
999 | Kannada Prabha

ಸಾರಾಂಶ

ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ 6 ರಿಂದ 11 ರವರೆಗೆ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕೈಗೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಸುಪ್ರಿಂಕೋರ್ಟಿನ ತೀರ್ಪಿನ ನಡುವೆಯೂ ಒಳಮೀಸಲಾತಿ ಜಾರಿಗೆ ವಿವಿಧ ಕಾರಣಗಳನ್ನು ನೀಡಿ ನಿರ್ಲಕ್ಷ್ಯ ತೋರಿರುವ ರಾಜ್ಯ ಸರಕಾರದ ವಿರುದ್ಧ ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸೆಂಬರ್ 6 ರಿಂದ 11 ರವರೆಗೆ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕೈಗೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಡಿಸೆಂಬರ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನ ಹುಂಡಿಯಿಂದ ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂಬ ಘೋಷ ವಾಕ್ಯದೊಂದಿಗೆ ಮೈಸೂರು ಚಲೋ ಜಾಥಾ ಆರಂಭಿಸಿ, ಡಿಸೆಂಬರ್ 11 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮುಕ್ತಾಯಗೊಳಿಸಲಾಗುವುದು ಎಂದರು.ಒಳಮೀಸಲಾತಿ ಕುರಿತಂತೆ ಸುಪ್ರಿಂಕೋರ್ಟಿನ 2024 ರ ಆಗಸ್ಟ್ 1 ಐತಿಹಾಸಿಕ ತೀರ್ಪಿನ ನಂತರದ ಕೆಲವೇ ತಿಂಗಳುಗಳಲ್ಲಿ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು, ಹರಿಯಾಣ, ಪಂಜಾಬ್ ಸರಕಾರಗಳು ಒಳಮೀಸಲಾತಿಯನ್ನು ಜಾರಿಗೆ ತಂದರೂ ಕರ್ನಾಟಕದಲ್ಲಿ ಮಾತ್ರ ನಿಖರ ಮಾಹಿತಿ ಹೆಸರಿನಲ್ಲಿ ಅನಗತ್ಯ ವಿಳಂಬ ಮಾಡುತ್ತಾ ಬಂದಿದೆ. ನ್ಯಾ.ನಾಗಮೋಹನ್‌ದಾಸ್ ಸಮಿತಿ ರಚನೆ, ಹಣಕಾಸು ಬಿಡುಗಡೆ, ವರದಿ ಸಲ್ಲಿಕೆ, ವರದಿಯನ್ನು ಸದನದಲ್ಲಿ ಮಂಡನೆ ಹೀಗೆ ಪ್ರತಿ ಹಂತದಲ್ಲಿಯೂ ಒಳಮೀಸಲಾತಿ ಹೋರಾಟ ಸಮಿತಿಗಳು ಪ್ರತಿಭಟನೆ, ಧರಣಿ, ಸಮಾವೇಶಗಳ ಮೂಲಕವೇ ಸರಕಾರದ ಮೇಲೆ ಒತ್ತಡ ತಂದು, ಕೆಲಸ ಮಾಡುವಂತೆ ಮಾಡಲಾಗಿದೆ ಎಂದರು.ಆದರೆ ಅವೈಜ್ಞಾನಿಕವಾಗಿ ನ್ಯಾ.ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಒಳಮೀಸಲಾತಿ ಜಾರಿ ಮಾಡಿದ ಪರಿಣಾಮ ಅಲೆಮಾರಿ ಸಮುದಾಯದವರು ನ್ಯಾಯಾಲಯಕ್ಕೆ ಹೋಗಿ ಪರೋಕ್ಷ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೆಲ್ಲಾ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಒಳಮೀಸಲಾತಿ ವಿರೋಧಿ ಧೋರಣೆಯೇ ಕಾರಣ.ಹಾಗಾಗಿ ಡಿಸೆಂಬರ್ 6 ರಿಂದ 11 ರವರೆಗೆ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೇಶವಮೂರ್ತಿ ತಿಳಿಸಿದರು. ಒಳಮೀಸಲಾತಿ ಹೋರಾಟಗಾರರಾದ ಪಾವಗಡ ಶ್ರೀರಾಮ್ ಮಾತನಾಡಿ, ಪರಿಶಿಷ್ಟ ಜಾತಿಯ ಜನರು ಒಳಮೀಸಲಾತಿಯನ್ನು ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿಯೇ ಪಡೆಯಲಾಗಿದೆ. ಆದರೆ ಅತಿ ಹೆಚ್ಚು ಮೋಸವಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿಯೇಎಂಬುದನ್ನು ಹೋರಾಟಗಾರರು ಮನಗಂಡಿದ್ದಾರೆ. ಸರಕಾರಕ್ಕೆಇದು ಕೊನೆಯ ಅವಕಾಶ. ಡಿಸೆಂಬರ್ ೧೦ ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಒಳ ಮೀಸಲಾತಿಯನ್ನು ಪರಿಪೂರ್ಣವಾಗಿ ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷತನ್ನ ಕಾಲ ಮೇಲೆ ತಾನೇ ಚಪ್ಪಡಿಕಲ್ಲು ಎಳೆದುಕೊಂಡಂತೆ ಎಂದು ಎಚ್ಚರಿಕೆ ನೀಡಿದರು. ಒಳಮೀಸಲಾತಿ ಹೋರಾಟಗಾರರಾದ ಸಿದ್ದಗಂಗಾ ಶಿವಯೋಗಿ ಮಾತನಾಡಿ, ಒಳಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಅನೇಕ ಜೀವಗಳು ಬಲಿಯಾಗಿವೆ. ಇದನ್ನು ಸಚಿವ ಸಂಪುಟದಲ್ಲಿರುವ ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಅರ್ಥ ಮಾಡಿಕೊಡಬೇಕು. ಎಡ, ಬಲಗಳ ಕಚ್ಚಾಟದಿಂದ ನೇಮಕಾತಿಗಳು ನಡೆಯದೆ ಯುವ ಜನತೆ ತತ್ತರಿಸಿ ಹೋಗಿದ್ದಾರೆ. ಸರಕಾರಕ್ಕೆ ಸುಪ್ರಿಂಕೋರ್ಟಿ ತೀರ್ಪುಗೆ ಮಾಡಿದ ಅಪಮಾನದ ಜೊತೆಗೆ, ಪರಿಶಿಷ್ಟ ಜನಾಂಗಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ಹಾಗಾಗಿ ಚಳಿಗಾಲದ ಅಧಿವೇಶನದಲ್ಲಿ ಸರಕಾರವೇ ತಿಳಿಸಿದಂತೆ ಒಳಮೀಸಲಾತಿ ಜಾರಿಗೆ ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ದಸಂಸದ ಪಿ.ಎನ್.ರಾಮಯ್ಯ ಮಾತನಾಡಿದರು. ದಲಿತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಡಘಟ್ಟ ಗ್ರಾ.ಪಂ.ಗೆ ಗಾಂಧೀಗ್ರಾಮ ಪುರಸ್ಕಾರ: ರುದ್ರಮ್ಮ ಬಸವರಾಜು
ಕಳವಾಗಿದ್ದ ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ